Updated By: Priyalachhi
ಬೆಂಗಳೂರು: ಬೆಂಗಳೂರಲ್ಲಿ ನೀರಿನ ಬಿಲ್ ಕಟ್ಟದೇ ಬಾಕಿ ಉಳಿಸಿಕೊಂಡ ಗ್ರಾಹಕರಿಗೆ ರಾಜ್ಯ ಸರ್ಕಾರ ಗುಡ್ ನ್ಯೂಸ್ ಕೊಟ್ಟಿದೆ. ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯ ಗ್ರಾಹಕರು ನೀರಿನ ಬಾಕಿ ಅಸಲು ಮೊತ್ತವನ್ನು ಏಕಕಾಲದಲ್ಲಿ ಪಾವತಿಸಿದರೆ ಬಡ್ಡಿ, ದಂಡ ಮತ್ತು ಇತರೆ ಶುಲ್ಕಗಳನ್ನು ಶೇ.100ರಷ್ಟು ಮನ್ನಾ ಮಾಡುವ ಏಕಕಾಲಿಕ ತೀರುವಳಿ ಯೋಜನೆ(OTS)ಗೆ ಸಚಿವ ಸಂಪುಟ ಅನುಮೋದನೆ ನೀಡಿದೆ.
ಮೂರು ತಿಂಗಳ ಅವಧಿಗೆ ಏಕಕಾಲಿಕ ತೀರುವಳಿ ಯೋಜನೆ ಜಾರಿ ಮಾಡಲು ತೀರ್ಮಾನ ಮಾಡಲಾಗಿದೆ. Bengaluru Water Supply Regulations, 1965ರ ನಿಯಮಾವಳಿಗಳನ್ನು ಸಡಿಲಿಸಿ, ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯ ಗ್ರಾಹಕರು ಪಾವತಿಸಲು ಬಾಕಿಯಿರುವ ನೀರಿನ ಬಿಲ್ಲಿನ ಸಂಬಂಧ ಏಕಕಾಲಿಕ ಸೆಟಲ್‌ಮೆಂಟ್ (One Time Settlement) ಯೋಜನೆಯನ್ನು ಅನುಷ್ಠಾನಗೊಳಿಸಲು ತೀರ್ಮಾನಿಸಲಾಗಿದೆ ಎಂದು ಕಾನೂನು ಸಚಿವ ಹೆಚ್.ಕೆ.ಪಾಟೀಲ್ ತಿಳಿಸಿದರು.
ಸರ್ಕಾರದ ವಿವಿಧ ಇಲಾಖೆಗಳಲ್ಲಿ ಬಾಕಿಯಿರುವ ಮೊತ್ತಗಳನ್ನು ಲೆಕ್ಕ ಪತ್ರದಲ್ಲಿ ಸಮನ್ವಯಗೊಳಿಸಲು ಸಚಿವ ಸಂಪುಟ ನಿರ್ಣಯಿಸಲಾಗಿದೆ. ಫೆಬ್ರವರಿ 2025ರ ವರೆಗೆ ಗ್ರಾಹಕರು ಉಳಿಸಿಕೊಂಡಿರುವ ನೀರಿನ ಬಾಕಿ ಮೊತ್ತವು ಒಟ್ಟು 701.71 ಕೋಟಿ ರೂ.ಗಳಿದ್ದು, ಈ ಮೊತ್ತದಲ್ಲಿ ಅಸಲು ಮೊತ್ತವು 439.03 ಕೋಟಿ ರೂ.ಗಳು ಹಾಗೂ ಬಾಕಿಯಿರುವ ಬಡ್ಡಿ ಮೊತ್ತವು 262.68 ಕೋಟಿ ರೂ.ಗಳಾಗಿದೆ. ಈ ಯೋಜನೆಗೆ 03 ತಿಂಗಳ ಕಾಲಮಿತಿ ನಿಗದಿಗೊಳಿಸಿ. ಏಕಕಾಲಿಕ ಸೆಟಲ್‌ಮೆಂಟ್ (One Time Settlement-OTS) ಯೋಜನೆ ಯನ್ನು ಕಾರ್ಯಗತಗೊಳಿಸಿದಲ್ಲಿ, ಗ್ರಾಹಕರಿಂದ ಬಾಕಿಯಿರುವ ನೀರಿನ ಅಸಲು ಬಿಲ್ಲಿನ ಮೊತ್ತವನ್ನು ಪಾವತಿಸಿಕೊಳ್ಳುವುದರಿಂದ ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಗೆ ಆರ್ಥಿಕ ಸಂಪನ್ಮೂಲ ಕ್ರೋಢಿಕರಿಸಬಹುದಾಗಿದ್ದು, ಸಾರ್ವಜನಿಕರಿಗೂ ಸಹ ಅಸಲು ಮೊತ್ತದ ಮೇಲಿನ ಬಡ್ಡಿ ಕಟ್ಟುವುದರಿಂದ ವಿನಾಯಿತಿ ದೊರಕಲಿದೆ.
ಔಷಧಗಳು ಮತ್ತು ಸೌಂದರ್ಯವರ್ಧಕಗಳು ತಿದ್ದುಪಡಿ ಬಿಲ್ಗೆ ಅಸ್ತು: ‘ಔಷಧಗಳು ಮತ್ತು ಸೌಂದರ್ಯವರ್ಧಕಗಳು (Drugs and cosmetics) (ಕರ್ನಾಟಕ ತಿದ್ದುಪಡಿ) ವಿಧೇಯಕ, 2025″ಕ್ಕೆ ಸಚಿವ ಸಂಪುಟ ಸಭೆ ಅನುಮೋದನೆ ನೀಡಿದೆ. ಕೇಂದ್ರದ ಔಷಧ ಪ್ರಯೋಗಾಲಯಗಳ ಮತ್ತು ನಿರ್ದೇಶಕರು ಔಷಧ ಮತ್ತು ಸೌಂದರ್ಯವರ್ದಕಗಳು ಇವರ ಕೆಲಸ ಕಾರ್ಯಗಳನ್ನು ರಾಜ್ಯ ಸರ್ಕಾರ ಗೊತ್ತುಪಡಿಸಿದ ಪ್ರಾಧಿಕಾರ ಅಥವಾ ಅಂಥ ಅಧಿಕಾರಿಯಿಂದ ಕಾರ್ಯನಿರ್ವಹಿಸಲು ರಾಜ್ಯ ಸರ್ಕಾರಕ್ಕೆ ಅಧಿಕಾರ ನೀಡುವುದಾಗಿದೆ. ಯಾವ ವ್ಯಕ್ತಿಯಿಂದ ಔಷಧ ಮತ್ತು ಸೌಂದರ್ಯ ವರ್ಧಕಗಳನ್ನು ವಶಪಡಿಸಿಕೊಳ್ಳಲಾಗುವುದೊ ಆ ವ್ಯಕ್ತಿಯು ತಾನು ತಪ್ಪು ವ್ಯಾಪಾರದ ಮುದ್ರೆ ಅಥವಾ ಕಲಬೆರಕೆಯ ಔಷಧ ಅಥವಾ ಸೌಂದರ್ಯ ವರ್ದಕ ಹೊಂದಿಲ್ಲವೆಂದು ಸಾಬೀತುಪಡಿಸುವ ಜವಾಬ್ದಾರಿ ಅವನ ಮೇಲೆಯೇ ಹೊರಿಸಲಾಗುವುದು.
ಪ್ರಕರಣ 30ರಡಿಯಲ್ಲಿ ಕೆಲವು ದಂಡಗಳನ್ನು ಜೀವಾವಧಿ ಶಿಕ್ಷೆಗೆ ವಿಸ್ತರಿಸುವುದು ಮತ್ತು ಈ ಅಧಿನಿಯಮದ ಅಡಿಯಲ್ಲಿ ಎಲ್ಲಾ ಅಪರಾಧಗಳನ್ನು ಸನ್ನೆಯ ಅಪರಾಧವೆಂದು ಹಾಗೂ ಜಾಮೀನುರಹಿತ ಅಪರಾಧವೆಂದು ಮಾರ್ಪಾಡಿಸಲಾಗುವುದು. ಪ್ರಕರಣ 33 ಮತ್ತು 33N ಇದರಡಿಯಲ್ಲಿ ಶುಲ್ಕ ನಿಗದಿಪಡಿಸುವುದು ಮತ್ತು ಹೆಚ್ಚುವರಿ ಷರತ್ತುಗಳನ್ನು ನಿಗದಿಪಡಿಸಲು ನಿಯಮಗಳನ್ನು ರಚಿಸಲಾಗುವುದು.

