ಚಿನ್ನಸ್ವಾಮಿ ಮೈದಾನದಲ್ಲಿ ರಾಯಲ್ಸ್ ಚಾಲೆಂಜ್ನಲ್ಲಿ ಆರ್ಸಿಬಿ ರಾಯಲ್ ಗೆಲುವು ದಾಖಲಿಸಿದೆ. ರೋಚಕ ಫೈಟ್ನ ಕೊನೆಯ ಓವರ್ನಲ್ಲಿ ಬೆಂಗಳೂರು 7 ರನ್ಗಳಿಂದ ರಾಜಸ್ಥಾನ್ ರಾಯಲ್ಸ್ ತಂಡವನ್ನು ಮಣಿಸಿದೆ. ಈ ಗೆಲುವಿನೊಂದಿಗೆ ಅಂಕಪಟ್ಟಿಯಲ್ಲಿ 8 ಅಂಕ ಸಂಪಾದಿರುವ ಆರ್ಸಿಬಿ, 5ನೇ ಸ್ಥಾನದಲ್ಲಿದೆ. ಜೊತೆಗೆ ಹಸಿರು ಜೆರ್ಸಿಯಲ್ಲಿ 3ನೇ ಬಾರಿಗೆ ಜಯದ ನಗೆ ಬಾರಿಸಿದೆ.
ಬೆಂಗಳೂರು ನೀಡಿದ್ದ ಸವಾಲು ಬೆನ್ನತಿದ ರಾಜಸ್ಥಾನ್ ತಂಡವೂ ಆರಂಭಿಕ ಆಘಾತಕ್ಕೆ ಒಳಗಾಯಿತು. ಜೋಸ್ ಬಟ್ಲರ್ಗೆ ಸಿರಾಜ್ ಶೂನ್ಯಕ್ಕೆ ಹೊರ ಕಳುಹಿಸಿದರು. ಬಳಿಕ ಜೊತೆಯಾದ ಯಶಸ್ವಿ ಜೈಸ್ವಾಲ್ ಮತ್ತು ದೇವದತ್ ಪಡಿಕ್ಕಲ್, ಆರ್ಸಿಬಿ ಬೌಲರ್ಗಳ ಚಳಿ ಬಿಡಿಸಿದರು. ಆರಂಭಿಕ ಆತಂಕದಿಂದ ದೂರ ಮಾಡಿದ ಈ ಯುವ ಜೋಡಿ, ಎಚ್ಚರಿಕೆಯ ಆಟವಾಡುತ್ತಾ ತಂಡದ ಮೊತ್ತವನ್ನು ಏರಿಸಿದರು. ಪರಿಣಾಮ 2ನೇ ವಿಕೆಟ್ಗೆ 98 ರನ್ಗಳು ಹರಿದು ಬಂದವು.
ದೇವದತ್ ಪಡಿಕ್ಕಲ್ ಅರ್ಧಶತಕ
ಕಳೆದ ಪಂದ್ಯಗಳಲ್ಲಿ ವೈಫಲ್ಯ ಅನುಭವಿಸಿದ್ದ ಕನ್ನಡಿಗ ದೇವದತ್ ಪಡಿಕ್ಕಲ್, ತವರಿನ ಚಿನ್ನಸ್ವಾಮಿ ಮೈದಾನದಲ್ಲಿ ಫಾರ್ಮ್ಗೆ ಮರಳಿದರು. ಆರ್ಸಿಬಿ ವಿರುದ್ಧ ಭರ್ಜರಿ ಪ್ರದರ್ಶನ ನೀಡಿದ ಪಡಿಕ್ಕಲ್, ಆಕರ್ಷಕ ಅರ್ಧಶತಕ ಸಿಡಿಸಿ ಮಿಂಚಿದರು. ಜೊತೆಗೆ ಪಂದ್ಯದ ದಿಕ್ಕನ್ನೂ ಬದಲಿಸಿದರು. ಆದರೆ 34 ಎಸೆತಗಳಲ್ಲಿ 7 ಬೌಂಡರಿ, 1 ಸಿಕ್ಸರ್ ನೆರವಿನಿಂದ 52 ರನ್ ಚಚ್ಚಿ ವಿಕೆಟ್ ಒಪ್ಪಿಸಿದರು.
ಹರ್ಷಲ್ ಪಟೇಲ್ ಅಬ್ಬರ
ಆರಂಭದಿಂದಲೂ ಯಶಸ್ವಿ ಜೈಸ್ವಾಲ್, ತಾಳ್ಮೆಯುತ ಬ್ಯಾಟಿಂಗ್ ನಡೆಸುತ್ತಿದ್ದ ಯಶಸ್ವಿ ಜೈಸ್ವಾಲ್, ತಂಡಕ್ಕೆ ಆಧಾರವಾಗುತ್ತಿದ್ದರು. ಆದರೆ ಹರ್ಷಲ್ ಪಟೇಲ್ ಆತನ ಆಟಕ್ಕೆ ಬ್ರೇಕ್ ಹಾಕಿದರು. ಯಶಸ್ವಿ 37 ಎಸೆತಗಳಲ್ಲಿ 47 ರನ್ ಗಳಿಸಿದರು. ಇದರ ಬೆನ್ನಲ್ಲೇ ನಾಯಕ ಸಂಜು ಸ್ಯಾಮ್ಸನ್ಗೂ ಹರ್ಷಲ್ ಗೇಟ್ ಪಾಸ್ ನೀಡಿದರು. ಸಂಜು 22ಕ್ಕೆ ಆಟ ಮುಗಿಸಿದರು. ಶಿಮ್ರಾನ್ ಹೆಟ್ಮೆಯರ್ ಕೂಡ ನಿರಾಸೆ ಮೂಡಿಸಿದರು. ಆದರೆ ಕೊನೆಯಲ್ಲಿ ಧ್ರುವ್ ಜುರೆಲ್ ಮತ್ತು ಆರ್ ಅಶ್ವಿನ್ ಆರ್ಸಿಬಿ ಕ್ಯಾಂಪ್ನಲ್ಲಿ ಆತಂಕ ಹೆಚ್ಚಿಸಿದರು.
ಧ್ರುವ್ ಜುರೆಲ್ ಅಜೇಯ 16 ಎಸೆತಗಳಲ್ಲಿ ಅಜೇಯ 34 ರನ್ ಗಳಿಸಿದರೆ, ಅಶ್ವಿನ್ 6 ಎಸೆತಗಳಲ್ಲಿ 12 ರನ್ಗಳಿಸಿ ಗೆಲುವು ಕಸಿಯುವ ಯತ್ನದಲ್ಲಿದ್ದರು. ಆದರೆ ಹರ್ಷಲ್ ಇದಕ್ಕೆ ಅವಕಾಶ ನೀಡಲಿಲ್ಲ. ಕೊನೆಯ ಓವರ್ನಲ್ಲಿ ಆರ್ಆರ್ ಗೆಲುವಿಗೆ 20 ರನ್ ಬೇಕಿತ್ತು. ಆಗ ಅಶ್ವಿನ್ 2 ಬೌಂಡರಿ ಸಿಡಿಸಿ ಗಮನ ಸೆಳೆದರು. ಅಂತಿಮವಾಗಿ 7 ರನ್ಗಳಿಂದ ಶರಣಾಯಿತು. ಆರ್ಆರ್ 20 ಓವರ್ಗಳಲ್ಲಿ 6 ವಿಕೆಟ್ ನಷ್ಟಕ್ಕೆ 182 ರನ್ ಗಳಿಸಿತು.
ಹಸಿರು ಜೆರ್ಸಿಯಲ್ಲಿ ಕಣಕ್ಕಿಳಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಟಾಸ್ ಸೋತು ಮೊದಲು ಬ್ಯಾಟಿಂಗ್ ನಡೆಸಿತು. ಟ್ರೆಂಟ್ ಬೋಲ್ಟ್ ಎಸೆದ ಇನ್ನಿಂಗ್ಸ್ ಆರಂಭದ ಮೊದಲ ಎಸೆತದಲ್ಲೇ ವಿರಾಟ್ ಕೊಹ್ಲಿ ಎಲ್ಬಿಡಬ್ಲ್ಯೂ ಬಲೆಗೆ ಬಿದ್ದರು. ಬಳಿಕ ಕಣಕ್ಕಿಳಿದ ಶಹಬಾಜ್ ಅಹ್ಮದ್ (2), ಟ್ರೆಂಟ್ ಬೋಲ್ಟ್ 2ನೇ ಓವರ್ನಲ್ಲಿ ನಿರ್ಗಮಿಸಿದರು. ಸತತ ವಿಕೆಟ್ ಪತನದ ನಡುವೆಯೂ ನಿರ್ಭೀತಿಯಿಂದ ಬ್ಯಾಟ್ ಬೀಸಿದ ಗ್ಲೇನ್ ಮ್ಯಾಕ್ಸ್ವೆಲ್ ಮತ್ತು ಫಾಫ್ ಡು ಪ್ಲೆಸಿಸ್, ಬೌಲರ್ಗಳ ಮೇಲೆ ಸವಾರಿ ಮಾಡಿದರು.
ಆರ್ಸಿಬಿಯನ್ನು ಆರಂಭಿಕ ಡಬಲ್ ಆಘಾತದಿಂದ ಹೊರ ತಂದ ಮ್ಯಾಕ್ಸ್ವೆಲ್ ಮತ್ತು ಡು ಪ್ಲೆಸಿಸ್, ಶತಕದ ಜೊತೆಯಾಟವಾಡಿದರು. ಮ್ಯಾಕ್ಸಿ-ಫಾಫ್ ಕೇವಲ 66 ಎಸೆತಗಳಲ್ಲಿ ಬರೋಬ್ಬರಿ 127 ರನ್ ಪಾಲುದಾರಿಕೆ ನೀಡಿದರು. ಗಾಯದ ಸಮಸ್ಯೆಯ ನಡುವೆಯೂ ಅಬ್ಬರಿಸಿದ ಆರಂಭಿಕ ಆಟಗಾರ ಫಾಫ್ ಡು ಪ್ಲೆಸಿಸ್ ಪ್ರಸ್ತಕ್ತ ಐಪಿಎಲ್ ಟೂರ್ನಿಯಲ್ಲಿ 5ನೇ ಅರ್ಧಶತಕ ಸಿಡಿಸಿದರು. ಇಂಜುರಿ ನಡುವೆಯೂ ಮಿಂಚಿದ ಫಾಫ್, ಎದುರಿಸಿದ 39 ಎಸೆತಗಳಲ್ಲಿ 8 ಬೌಂಡರಿ, 2 ಸಿಕ್ಸರ್ಗಳ ನೆರವಿನಿಂದ 62 ರನ್ ಚಚ್ಚಿದರು.
ಕಳೆದ ಪಂದ್ಯದಲ್ಲಿ ಡಕೌಟ್ ಆಗಿದ್ದ ಗ್ಲೇನ್ ಮ್ಯಾಕ್ಸ್ವೆಲ್ ಈ ಪಂದ್ಯದಲ್ಲಿ ಘರ್ಜಿಸಿದರು. ಪರಿಣಾಮ 44 ಎಸೆತಗಳಲ್ಲಿ 6 ಬೌಂಡರಿ, 4 ಸಿಕ್ಸರ್ಗಳ ಸಹಾಯದಿಂದ 77 ರನ್ ಬಾರಿಸಿದರು. ಆದರೆ ಮಹಿಪಾಲ್ ಲೋಮ್ರೋರ್ ಮತ್ತು ಸುಯೇಶ್ ಪ್ರಭುದೇಸಾಯಿ ಮತ್ತೆ ನಿರಾಸೆ ಮೂಡಿಸಿದರು. ದಿನೇಶ್ ಕೊನೆಯ ಓವರ್ವರೆಗೂ ಇದ್ದರೂ ಗಳಿಸಿದ್ದು 16 ರನ್.. ಅಂತಿಮವಾಗಿ ಆರ್ಸಿಬಿ 20 ಓವರ್ಗಳಲ್ಲಿ 9 ವಿಕೆಟ್ ನಷ್ಟಕ್ಕೆ 189 ರನ್ ಗಳಿಸಿತು. ಆರ್ಆರ್ ಪರ ಟ್ರೆಂಟ್ ಬೋಲ್ಟ್, ಸಂದೀಪ್ ಶರ್ಮಾ ತಲಾ 2 ವಿಕೆಟ್, ಚಹಲ್, ಅಶ್ವಿನ್ ತಲಾ 1 ವಿಕೆಟ್ ಪಡೆದರು.