ದಾವಣಗೆರೆ: ರಾಜ್ಯ ರಾಜಕಾರಣದಲ್ಲಿ ಸಂಚಲನ ಸೃಷ್ಟಿಸಿರುವ ಸ್ಟಿಂಗ್ ಆಪರೇಷನ್ ಬೆಳವಣಿಗೆಗಳ ಬಗ್ಗೆ ಚನ್ನಗಿರಿ ಕ್ಷೇತ್ರದ ಕಾಂಗ್ರೆಸ್ ಶಾಸಕ ಶಿವಗಂಗಾ ಬಸವರಾಜ್ ಅಚ್ಚರಿಯ ಹೇಳಿಕೆಯೊಂದನ್ನು ನೀಡಿದ್ದಾರೆ. “ಸ್ಟಿಂಗ್ ಆಪರೇಷನ್ ನಡೆಯುವುದು ಒಂದು ರೀತಿಯಲ್ಲಿ ಒಳ್ಳೆಯದೇ, ಇದರಿಂದ ಮನೆಯಲ್ಲಿರುವ ಹೆಣ್ಣುಮಕ್ಕಳಿಗೆ ಗೌರವ ಜಾಸ್ತಿಯಾಗುತ್ತದೆ” ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಸೋಮವಾರ ದಾವಣಗೆರೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, “ಸ್ಟಿಂಗ್ ಆಪರೇಷನ್ ಭಯದಿಂದಾಗಿ ಯಾರು ಎಲ್ಲೆಂದರಲ್ಲಿ ಹೋಗುವುದಿಲ್ಲ. ಬದಲು ತಮ್ಮ ಮನೆ, ಸಂಸಾರದ ಕಡೆ ಹೆಚ್ಚು ಗಮನ ಹರಿಸುತ್ತಾರೆ. ಈ ನಿಟ್ಟಿನಲ್ಲಿ ಯೋಚಿಸಿದರೆ ಇದೊಂದು ರೀತಿ ಒಳ್ಳೆಯದೇ ಎನಿಸುತ್ತದೆ. ಆದರೆ, ಈ ಸ್ಟಿಂಗ್ ಆಪರೇಷನ್ ಟ್ರೆಂಡ್ ನೋಡಿದರೆ ನಮಗೂ ಭಯವಾಗುತ್ತಿದೆ. ಜನರ ನಡುವೆ ಹೇಗೆ ಇರಬೇಕು, ಮುಂದಿನ ದಿನಗಳಲ್ಲಿ ಯಾವ ರೀತಿ ರಾಜಕಾರಣ ಮಾಡಬೇಕು ಎಂಬ ಆತಂಕ ಕಾಡಲಾರಂಭಿಸಿದೆ. ಆದರೆ ರಾಜಕೀಯದಲ್ಲಿ ಹೀಗೆ ಸ್ಟಿಂಗ್ ಆಪರೇಷನ್ ಮಾಡುವುದು ತಪ್ಪು, ಈ ವ್ಯವಸ್ಥೆಯನ್ನು ಸರಿಪಡಿಸುವ ಕೆಲಸವಾಗಬೇಕು” ಎಂದು ಹೇಳಿದರು.
ಸಿದ್ದರಾಮಯ್ಯ ರಾಜೀನಾಮೆಗೆ ಸ್ಟಿಂಗ್ ಕಾರಣವಲ್ಲ:
ಇದೇ ವೇಳೆ, ಸ್ಟಿಂಗ್ ಆಪರೇಷನ್ ಬೆದರಿಕೆಯಿಂದಲೇ ಸಿದ್ದರಾಮಯ್ಯ ಅವರನ್ನು ಮುಖ್ಯಮಂತ್ರಿ ಹುದ್ದೆಯಿಂದ ಕೆಳಗಿಳಿಸಲಾಗಿದೆ ಎಂಬ ವಿರೋಧ ಪಕ್ಷಗಳ ಆರೋಪವನ್ನು ಶಾಸಕರು ಸಾರಾಸಗಟಾಗಿ ತಳ್ಳಿಹಾಕಿದರು.
“ಸಿದ್ದರಾಮಯ್ಯನವರು ಅತ್ಯಂತ ಸ್ವಚ್ಛ ರಾಜಕಾರಣಿ. ಇಂತಹ ಯಾವುದೇ ಸ್ಟಿಂಗ್ ಆಪರೇಷನ್‌ಗಳಿಗೆ ಬಗ್ಗುವ ಅಥವಾ ಹೆದರುವ ವ್ಯಕ್ತಿ ಅವರಲ್ಲ. ಹೈಕಮಾಂಡ್ ನಾಯಕರಾದ ರಾಹುಲ್ ಗಾಂಧಿ ಅವರ ಸೂಚನೆಯಂತೆ, ಈ ಹಿಂದೆ ಮಾಡಿಕೊಂಡಿದ್ದ 3-2 ವರ್ಷದ ಅಧಿಕಾರ ಹಂಚಿಕೆ ಒಪ್ಪಂದದ ಪ್ರಕಾರವೇ ಮೂರು ವರ್ಷದ ಬಳಿಕ ಅವರು ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ” ಎಂದು ಸ್ಪಷ್ಟಪಡಿಸಿದರು.
“ಸಿದ್ದರಾಮಯ್ಯನವರು ಕಾಂಗ್ರೆಸ್ ಪಕ್ಷದ ಬಹುದೊಡ್ಡ ಆಸ್ತಿ ಹಾಗೂ ಪ್ರಶ್ನಾತೀತ ಮಾಸ್ ಲೀಡರ್. ಅವರನ್ನು ಮಾನಸಿಕವಾಗಿ ಕುಗ್ಗಿಸಲು ಮತ್ತು ಡಿಸ್ಟರ್ಬ್ ಮಾಡಲು ವಿರೋಧ ಪಕ್ಷದವರು ಉದ್ದೇಶಪೂರ್ವಕವಾಗಿ ಈ ರೀತಿಯ ಸುಳ್ಳು ಆರೋಪಗಳನ್ನು ಮಾಡುತ್ತಿದ್ದಾರೆ” ಎಂದು ಶಿವಗಂಗಾ ಬಸವರಾಜ್ ವಾಗ್ದಾಳಿ ನಡೆಸಿದರು.
– ಸಂಭ್ರಮಪ್ರಭ ನ್ಯೂಸ್ ಡೆಸ್ಕ್ (Sambramaprabha.com)
