- ಅಕ್ಟೋಬರ್ 29ರ ಸುಪ್ರೀಂ ಕೋರ್ಟ್ ತೀರ್ಪು ಮರುಪರಿಶೀಲಿಸುವಂತೆ ರಾಜ್ಯ ಸರ್ಕಾರದಿಂದ ಅರ್ಜಿ
- ವಕೀಲ ರಾಜೇಶ್ ಜಿ. ಇನಾಮ್‌ದಾರ್ ಮೂಲಕ ನವೆಂಬರ್ 22ರಂದು ಅರ್ಜಿ ಸಲ್ಲಿಕೆ
- ಬಾಧಿತ ಅಭ್ಯರ್ಥಿಗಳ ವಾದ ಆಲಿಸದೆ ತೀರ್ಪು ನೀಡಿರುವುದು ನೈಸರ್ಗಿಕ ನ್ಯಾಯದ ಉಲ್ಲಂಘನೆ ಎಂದು ವಾದ
- ಕೆಎಟಿ ವ್ಯಾಪ್ತಿ ಹಾಗೂ ಹಿಂದಿನ ಸುಪ್ರೀಂ ಕೋರ್ಟ್ ತೀರ್ಪುಗಳ ಉಲ್ಲೇಖ
ಬೆಂಗಳೂರು (ಸಂಭ್ರಮಪ್ರಭ ವಾರ್ತೆ): 2011ನೇ ಸಾಲಿನ ಗೆಜೆಟೆಡ್ ಪ್ರೊಬೇಷನರಿ 362 ಹುದ್ದೆಗಳ ಭರ್ತಿಗೆ ಕರ್ನಾಟಕ ಲೋಕಸೇವಾ ಆಯೋಗ (ಕೆಪಿಎಸ್‌ಸಿ) ನಡೆಸಿದ್ದ ಪರೀಕ್ಷೆಯಲ್ಲಿ ಆಯ್ಕೆಯಾಗಿದ್ದ ಅಭ್ಯರ್ಥಿಗಳ ನೇಮಕಾತಿಗೆ ಸಿಂಧುತ್ವ ನೀಡಲು ರಾಜ್ಯ ಸರ್ಕಾರ ರೂಪಿಸಿದ್ದ ‘ಕರ್ನಾಟಕ ನಾಗರಿಕ ಸೇವೆಗಳ (2011ನೇ ಸಾಲಿನ ಗೆಜೆಟೆಡ್ ಪ್ರೊಬೇಷನರ್‌ಗಳ ಆಯ್ಕೆ ಮತ್ತು ನೇಮಕಾತಿಯ ಸಿಂಧುಗೊಳಿಸುವಿಕೆ) ಕಾಯ್ದೆ– 2022’ ಅನ್ನು ರದ್ದುಪಡಿಸಿದ್ದ ಸುಪ್ರೀಂ ಕೋರ್ಟ್ ತೀರ್ಪನ್ನು ಪ್ರಶ್ನಿಸಿ ರಾಜ್ಯ ಸರ್ಕಾರ ಮರು ಪರಿಶೀಲನಾ ಅರ್ಜಿ (Review Petition) ಸಲ್ಲಿಸಿದೆ.
ಕಳೆದ ಅಕ್ಟೋಬರ್ 29ರಂದು ಸುಪ್ರೀಂ ಕೋರ್ಟ್ ಈ ಕಾಯ್ದೆಯನ್ನು ‘ಅಸಾಂವಿಧಾನಿಕ’ ಎಂದು ಘೋಷಿಸಿ ರದ್ದುಪಡಿಸಿತ್ತು. ಇದೀಗ ಈ ತೀರ್ಪಿನ ಮರುಪರಿಶೀಲನೆ ಕೋರಿ ವಕೀಲ ರಾಜೇಶ್ ಜಿ. ಇನಾಮ್‌ದಾರ್ ಅವರ ಮೂಲಕ ರಾಜ್ಯ ಸರ್ಕಾರ ನವೆಂಬರ್ 22ರಂದು ಸುಪ್ರೀಂ ಕೋರ್ಟ್ ಮೆಟ್ಟಿಲೇರಿದೆ.
ನೈಸರ್ಗಿಕ ನ್ಯಾಯದ ತತ್ವಗಳ ಉಲ್ಲಂಘನೆ
ಕಾಯ್ದೆಯನ್ನು ರದ್ದುಪಡಿಸಿರುವುದರಿಂದ ಕಳೆದ ಐದು ವರ್ಷಗಳಿಂದ ಸೇವೆಯಲ್ಲಿರುವ ಅಭ್ಯರ್ಥಿಗಳು ತಮ್ಮ ಉದ್ಯೋಗ ಕಳೆದುಕೊಳ್ಳುವಂತಾಗಿದೆ ಎಂದು ಸರ್ಕಾರ ಅರ್ಜಿಯಲ್ಲಿ ಆತಂಕ ವ್ಯಕ್ತಪಡಿಸಿದೆ. “ನೈಸರ್ಗಿಕ ನ್ಯಾಯದ ತತ್ವಗಳ ಪ್ರಕಾರ, ಯಾರ ಉದ್ಯೋಗ ಪ್ರಶ್ನಾರ್ಹವಾಗಿದೆಯೋ ಮತ್ತು ಯಾರು ತೀರ್ಪಿನಿಂದ ಪ್ರತಿಕೂಲ ಪರಿಣಾಮಕ್ಕೆ ಒಳಗಾಗಿದ್ದಾರೋ ಅಂತಹ ಎಲ್ಲ ಬಾಧಿತ ಅಭ್ಯರ್ಥಿಗಳ ವಾದವನ್ನು ನ್ಯಾಯಾಲಯ ಅತ್ಯಗತ್ಯವಾಗಿ ಆಲಿಸಬೇಕಿತ್ತು. ಆದರೆ, ಅವರ ಉದ್ಯೋಗ ರದ್ದುಗೊಳಿಸುವ ಮುನ್ನ ವಾದ ಮಂಡಿಸಲು ಅವಕಾಶ ನೀಡದಿರುವುದು ನ್ಯಾಯದ ವೈಫಲ್ಯ ಮತ್ತು ಸಹಜ ನ್ಯಾಯದ ತತ್ವಗಳ ಉಲ್ಲಂಘನೆಯಾಗಿದೆ” ಎಂದು ಸರ್ಕಾರ ಪ್ರತಿಪಾದಿಸಿದೆ.
ಪ್ರತಿವಾದಿಗಳನ್ನಾಗಿ ಮಾಡದಿರುವ ಬಗ್ಗೆ ಆಕ್ಷೇಪ
ಆಯ್ಕೆಯಾದ ಹಲವು ಅಭ್ಯರ್ಥಿಗಳು ಮೂಲ ಅರ್ಜಿಯಲ್ಲಿ ಪ್ರತಿವಾದಿಗಳಾಗಿದ್ದರೂ, ಕರ್ನಾಟಕ ಆಡಳಿತ ನ್ಯಾಯಮಂಡಳಿ (ಕೆಎಟಿ) ನೀಡಿದ್ದ ಮಧ್ಯಂತರ ಆದೇಶದಿಂದ ಉದ್ಭವಿಸಿದ ವಿಶೇಷ ಮೇಲ್ಮನವಿಯನ್ನು ಇತ್ಯರ್ಥಪಡಿಸುವಾಗ ಈ ಅಂಶವನ್ನು ಸುಪ್ರೀಂ ಕೋರ್ಟ್ ಗಮನಕ್ಕೆ ತರಲಾಗಿರಲಿಲ್ಲ ಹಾಗೂ ಅವರನ್ನು ಪ್ರತಿವಾದಿಗಳನ್ನಾಗಿ ಮಾಡಿರಲಿಲ್ಲ. ‘ಪ್ರಬೋಧ್ ವರ್ಮಾ ವಿರುದ್ಧ ಉತ್ತರ ಪ್ರದೇಶ ರಾಜ್ಯ’ (1984) ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ಸ್ಥಾಪಿಸಿರುವ ಕಾನೂನು ತತ್ವದ ಪ್ರಕಾರವೂ ಬಾಧಿತರನ್ನು ಆಲಿಸದೆ ತೀರ್ಪು ನೀಡುವುದು ಸರಿಯಲ್ಲ. ತಮ್ಮ ಪರ ವಾದ ಮಂಡಿಸಲು ಅವಕಾಶ ಸಿಗುವಂತೆ ಸುಪ್ರೀಂ ಕೋರ್ಟ್‌ನಲ್ಲಿ ವಾದಿಸಲು ಅಭ್ಯರ್ಥಿಗಳು ಸರ್ಕಾರವನ್ನು ಒತ್ತಾಯಿಸಿದ್ದಾರೆ ಎಂದು ಅರ್ಜಿಯಲ್ಲಿ ವಿವರಿಸಲಾಗಿದೆ.
ಕೆಎಟಿ ವ್ಯಾಪ್ತಿ ಮತ್ತು ಮೇಲ್ಮನವಿ ಹಕ್ಕಿನ ಪ್ರಸ್ತಾಪ
ಆಕ್ಷೇಪಾರ್ಹ ಕಾಯ್ದೆಯ ಸಿಂಧುತ್ವವನ್ನು ಪ್ರಶ್ನಿಸುವ ವಿಷಯವು ಇನ್ನೂ ಕೆಎಟಿ ಮುಂದೆ ಬಾಕಿ ಇದೆ. ಸುಪ್ರೀಂ ಕೋರ್ಟ್ ಅರ್ಜಿದಾರರು ಕೆಎಟಿಯಲ್ಲೂ ಈ ಪ್ರಕರಣವನ್ನು ಮುಂದುವರಿಸುತ್ತಿದ್ದಾರೆ. ನ್ಯಾಯಮಂಡಳಿಗಳು ಆಯಾ ಕಾನೂನು ಕ್ಷೇತ್ರಗಳಿಗೆ ‘ಮೊದಲ ಹಂತದ ನ್ಯಾಯಾಲಯ’ಗಳಾಗಿ ಕಾರ್ಯನಿರ್ವಹಿಸುತ್ತವೆ; ಶಾಸನವೊಂದರ ಸಿಂಧುತ್ವವನ್ನೇ ಪ್ರಶ್ನಿಸುವ ಸಂದರ್ಭ ಬಂದರೂ ನ್ಯಾಯಮಂಡಳಿಯ ವ್ಯಾಪ್ತಿಯನ್ನು ಕಡೆಗಣಿಸಿ ನೇರವಾಗಿ ಉನ್ನತ ನ್ಯಾಯಾಲಯಗಳನ್ನು ಸಂಪರ್ಕಿಸಲು ಸಾಧ್ಯವಿಲ್ಲ ಎಂದು ಸುಪ್ರೀಂ ಕೋರ್ಟ್ ಈ ಹಿಂದೆ ಸ್ಪಷ್ಟಪಡಿಸಿದೆ.
ಹೀಗಿರುವಾಗ, ಕೆಎಟಿ ಹೊರಡಿಸಿದ ಮಧ್ಯಂತರ ಆದೇಶದಿಂದ ಉದ್ಭವಿಸಿದ ವಿಶೇಷ ಮೇಲ್ಮನವಿಯಲ್ಲೇ ಅಂತಿಮ ತೀರ್ಪು ನೀಡಿರುವುದರಿಂದ, ಮೊದಲ ಹಂತದ ನ್ಯಾಯಾಲಯದಲ್ಲಿ ವಿಚಾರಣೆ ಎದುರಿಸುವ ಅವಕಾಶ ಹಾಗೂ ನಂತರ ಲಭ್ಯವಾಗಬಹುದಾಗಿದ್ದ ಮೇಲ್ಮನವಿ ಸಲ್ಲಿಸುವ ಹಕ್ಕನ್ನು ಪ್ರತಿವಾದಿಗಳು ಕಳೆದುಕೊಂಡಂತಾಗಿದೆ. ‘ಗರಿಕಪತಿ ವೀರಯ್ಯ ವಿರುದ್ಧ ಎನ್. ಸುಬ್ಬಯ್ಯ ಚೌಧರಿ’ (1957) ಪ್ರಕರಣದಲ್ಲಿ ಸಂವಿಧಾನ ಪೀಠವು, “ನ್ಯಾಯಾಲಯದ ನಿರ್ದೇಶನವೊಂದು ಕಾನೂನುಬದ್ಧವಾಗಿ ಲಭ್ಯವಿರುವ ಪರಿಹಾರ ಪಡೆಯದಂತೆ ಪ್ರತಿವಾದಿಗಳನ್ನು ತಡೆಹಿಡಿದರೆ, ಅಂತಹ ನಿರ್ದೇಶನವನ್ನು ನ್ಯಾಯಾಲಯ ಸರಿಪಡಿಸಬೇಕು” ಎಂದು ಹೇಳಿರುವುದನ್ನು ಸರ್ಕಾರ ಅರ್ಜಿಯಲ್ಲಿ ಉಲ್ಲೇಖಿಸಿದೆ.
ಹುದ್ದೆಯಲ್ಲಿ ಮುಂದುವರಿಯಲು ಅವಕಾಶ ನೀಡಬೇಕಿತ್ತು
ಆಯ್ಕೆಯಾದ ಅಭ್ಯರ್ಥಿಗಳು ಯಾವುದೇ ಅಕ್ರಮದಲ್ಲಿ ಭಾಗಿಯಾಗಿದ್ದಾರೆಂದು ಯಾವುದೇ ತನಿಖೆಯಿಂದ ದೃಢಪಟ್ಟಿಲ್ಲ. ಹೀಗಾಗಿ, ಕಾಯ್ದೆಯನ್ನು ಅಸಂವಿಧಾನಿಕ ಎಂದು ತೀರ್ಪು ನೀಡುವ ಸಂದರ್ಭದಲ್ಲೂ, ಈ ಹಿಂದೆ ಸುಪ್ರೀಂ ಕೋರ್ಟ್ ಪ್ರತಿಪಾದಿಸಿರುವ ಕಾನೂನು ತತ್ವಗಳಿಗೆ ಅನುಗುಣವಾಗಿ ನೇಮಕಗೊಂಡ ಅಭ್ಯರ್ಥಿಗಳು ತಮ್ಮ ಹುದ್ದೆಗಳಲ್ಲಿ ಮುಂದುವರಿಯಲು ನ್ಯಾಯಾಲಯ ಅವಕಾಶ ನೀಡಬೇಕಿತ್ತು ಎಂಬ ಕಾರಣಗಳನ್ನು ಮುಂದಿಟ್ಟು ರಾಜ್ಯ ಸರ್ಕಾರ ಮರು ಪರಿಶೀಲನಾ ಅರ್ಜಿ ಸಲ್ಲಿಸಿದೆ.
