ರಾಜಕೀಯರಾಜ್ಯ

ಮಕ್ಕಳ ಮನಸ್ಸಿಗೆ ವಿಷ ತುಂಬುವ ಶಾಲಾ ಪಠ್ಯ, ಪಾಠಗಳಿಗೆ ಅವಕಾಶ ಕೊಡುವುದಿಲ್ಲ, ಸಾಹಿತಿಗಳಿಗೆ ಸಿಎಂ ಸಿದ್ದರಾಮಯ್ಯ ಭರವಸೆ

CM Siddaramaiah assures writers that school curriculum and lessons that poison children's minds will not be allowed

ವರದಿ: ಪ್ರಿಯಲಚ್ಛಿ ಗಂಧನಹಳ್ಳಿ
ಬೆಂಗಳೂರು: ಹಿಂದಿನ ಸರಕಾರ ಶಾಲಾ ಪಠ್ಯ ಪುಸ್ತಕಗಳಲ್ಲಿ ಸೇರಿಸಿದ ವಿಷಯಗಳನ್ನು ತೆಗೆದುಹಾಕಬೇಕೆಂದು ಬರಹಗಾರರು, ಸಾಹಿತಿಗಳು ರಾಜ್ಯ ಸರಕಾರಕ್ಕೆ ಮಾಡಿದ ಮನವಿಗೆ ಸಿಎಂ ಸಿದ್ದರಾಮಯ್ಯ ಸಕಾರಾತ್ಮಕ ಪ್ರತಿಕ್ರಿಯೆ ನೀಡಿದ್ದಾರೆ. ಕನ್ನಡ ನಾಡಿನ ಸೌಹಾರ್ಧ ಮತ್ತು ಜಾತ್ಯತೀತ ಪರಂಪರೆಯ ರಕ್ಷಣೆ ವಿಚಾರದಲ್ಲಿ ರಾಜಿ ಮಾಡಿಕೊಳ್ಳುವ ಪ್ರಶ್ನೆಯೇ ಇಲ್ಲ. ದ್ವೇಷ ರಾಜಕಾರಣವನ್ನು ಬಲಿ ಹಾಕಿ, ಭಯದ ವಾತಾವರಣ ಅಳಿಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.

ಇಂದು ಸಿದ್ದರಾಮಯ್ಯ ಅವರು ಗೃಹ ಕಚೇರಿ ಕೃಷ್ಣದಲ್ಲಿ ಸುಮಾರು 40 ಕ್ಕೂ ಹೆಚ್ಚು ಮಂದಿ ಸಾಹಿತಿ ಬರಹಗಾರರು ಹಾಗೂ ನಾನಾ ಜನಪರ ಸಂಘಟನೆಗಳ ಮುಖ್ಯಸ್ಥರ ಜತೆಗೆ ಚರ್ಚೆ ನಡೆಸಿದ್ದಾರೆ. ಈ ಸಂದರ್ಭದಲ್ಲಿ ಮಕ್ಕಳ ಮನಸ್ಸಿಗೆ ವಿಷ ತುಂಬುವ ಶಾಲಾ ಪಠ್ಯ ಪುಸ್ತಕಗಳು, ಪಾಠಗಳಿಗೆ ಅವಕಾಶ ಕೊಡುವುದಿಲ್ಲ ಎಂಬ ಭರವಸೆಯನ್ನು ನೀಡಿದ್ದಾರೆ.

ದೇಶವನ್ನು ಅಪಾಯದ ಸುಳಿಗೆ ದೂಡುತ್ತಾ , ಈ‌ ಮಣ್ಣಿನ ಬಹುತ್ವವನ್ನು ನಾಶ ಮಾಡುತ್ತಿರುವ ಬಿಜೆಪಿ ಪರಿವಾರದ ವಿರುದ್ಧ ಖಚಿತ ನಿಲುವು ತೆಗೆದುಕೊಂಡು ಸ್ವಯಂಪ್ರೇರಿತವಾಗಿ ಈ ಚುನಾವಣೆಯಲ್ಲಿ ಜನರನ್ನು ಎಚ್ಚರಿಸುವ ಕೆಲಸ ಮಾಡಿದ್ದಕ್ಕಾಗಿ ಸಾಹಿತಿ-ಬರಹಗಾರರಿಗೆ ಅಭಿನಂದನೆ ಸಲ್ಲಿಸಿದ್ದಾರೆ.

ಮಕ್ಕಳಿಗೆ ತೊಂದರೆಯಾಗದಂತೆ ಕ್ರಮ
ಕರ್ನಾಟಕದ ಶಾಲಾ ಪಠ್ಯ ಮತ್ತು ಪಾಠಗಳ ಮೂಲಕ ಮಕ್ಕಳ ಮನಸ್ಸನ್ನು ಕಲುಷಿತಗೊಳಿಸಲು ನಡೆಸಿರುವ ಕೃತ್ಯವನ್ನು ಕ್ಷಮಿಸಲು ಸಾಧ್ಯವಿಲ್ಲ. ಶೈಕ್ಷಣಿಕ ವರ್ಷ ಆರಂಭ ಆಗಿರುವುದರಿಂದ ಮಕ್ಕಳ ಶಿಕ್ಷಣಕ್ಕೆ ತೊಂದರೆ ಆಗದಂತೆ ಚರ್ಚಿಸಿ ಕ್ರಮ ಕೈಗೊಳ್ಳುತ್ತೇವೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.

ಬರಹಗಾರರ ಮೇಲಿನ ಕೇಸ್‌ ವಾಪಸ್‌
ಕನ್ನಡ ಹೋರಾಟಗಾರರು, ರೈತ-ಕಾರ್ಮಿಕ-ದಲಿತ ಚಳವಳಿಗಳ ಹೋರಾಟಗಾರರು ಮತ್ತು ಸಾಹಿತಿ, ಬರಹಗಾರರ ಮೇಲೆ ಹಾಕಿರುವ ಸುಳ್ಳು ಮೊಕದ್ದಮೆಗಳನ್ನು ಹಿಂದಕ್ಕೆ ಪಡೆಯಲಾಗುವುದು ಎಂದು ಅವರು ಹೇಳಿದ್ದಾರೆ. ಅನೈತಿಕ ಪೊಲೀಸ್ ಗಿರಿ, ದ್ವೇಷದ ರಾಜಕಾರಣ, ತೇಜೋವಧೆ ಮಾಡುವ ಟ್ರೋಲ್ ಗಳು ಮತ್ತು ಸಾಹಿತಿಗಳಿಗೆ ಬೆದರಿಕೆ ಹಾಕುವವರ ವಿರುದ್ಧ ಕಠಿಣ ಕಾನೂನು ಕ್ರಮಕ್ಕೆ ಈಗಾಗಲೇ ರಾಜ್ಯ ಪೊಲೀಸ್ ಮಹಾ ನಿರ್ದೇಶಕರಿಗೆ ಖಡಕ್ ಸೂಚನೆ ನೀಡಿದ್ದೇನೆ ಎಂದರು

ಹೊಸ ಶಿಕ್ಷಣ ನೀತಿ ಹೆಸರಲ್ಲಿ ಶಿಕ್ಷಣ ಕ್ಷೇತ್ರವನ್ನು ಗಬ್ಬೆಬ್ಬಿಸಲು ಅವಕಾಶ ಕೊಡುವುದಿಲ್ಲ. ಈ ಬಗ್ಗೆ ಮತ್ತೊಮ್ಮೆ ಪ್ರತ್ಯೇಕವಾದ ಸಭೆ ಕರೆದು ಸಮಗ್ರವಾಗಿ ಚರ್ಚಿಸಿ ನಿಷ್ಠುರವಾದ ಮತ್ತು ಖಚಿತವಾದ ತೀರ್ಮಾನಗಳನ್ನು ತೆಗೆದುಕೊಳ್ಳಲಾಗುವುದು. ಉಳಿದಂತೆ ಸಾಹಿತಿ ಬರಹಗಾರರು ನೀಡಿರುವ ಮನವಿ ಪತ್ರದಲ್ಲಿನ ಸಂಗತಿಗಳನ್ನು ಗಂಭೀರವಾಗಿ ಪರಿಗಣಿಸುತ್ತೇನೆ. ಅಗತ್ಯಕ್ಕೆ ತಕ್ಕಂತೆ ನಮ್ಮ ಸರ್ಕಾರ ಕ್ರಮ ಕೈಗೊಳ್ಳಲಿದೆ ಎಂದು ಅವರು ಭರವಸೆ ನೀಡಿದ್ದಾರೆ.

ಸಾಹಿತಿಗಳು, ಬರಹಗಾರರ ಮನವಿ ಏನಾಗಿತ್ತು?
ಈಗಾಗಲೇ ಮುದ್ರವಾಗಿ ಬಿಇಒ ಕಚೇರಿಗಳನ್ನು/ಶಾಲೆಗಳಿಗೆ ತಲುಪಿರುವ ಕಲುಷಿತ ಪುಸ್ತಕಗಳನ್ನು ಯಥಾವತ್ತಾಗಿ ಮಕ್ಕಳಿಗೆ ವಿತರಿಸದಿರಲು ಸ್ಪಷ್ಟ ಸೂಚನೆಯನ್ನು ಸಂಬಂಧಿಸಿದ ಅಧಿಕಾರಿಗಳಿಗೆ ನೀಡಬೇಕು.

ಈ ಪಠ್ಯಪುಸ್ತಕಗಳಲ್ಲಿ ಬದಲಾಗಿದ್ದ ಪ್ರಮುಖ ಪಾಠಗಳನ್ನು ಮತ್ತು ಕಲಿಕಾಂಶಗಳನ್ನು ಈ ಪುಸ್ತಕಗಳಿಂದ ತೆಗೆದು ಹಾಕಿ ವಿತರಿಸಲು ಅಯಾ ವ್ಯಾಪ್ತಿಯ ಸಿ ಆರ್‌ ಪಿ ಮತ್ತು ಶಾಲೆಯ ಶಿಕ್ಷಕರನ್ನು ಹೊಣೆ ಮಾಡಬೇಕು. ಜೊತೆಗೆ, ಈ ವಿಷಯಗಳನ್ನು ಕಲಿಕೆ ಮತ್ತು ಮೌಲ್ಯಮಾಪನದಿಂದ ಕೈಬಿಡಲು ಸ್ಪಷ್ಟ ಸೂಚನೆ ನೀಡಬೇಕು . ಜೊತೆಗೆ , ಶಿಕ್ಷಣ ಹಕ್ಕು ಕಾಯಿದೆ ಅನ್ವಯ ಕಡ್ಡಾಯವಾಗಿ ನಿರಂತರ ಮತ್ತು ವ್ಯಾಪಕ ಮೌಲ್ಯಮಾಪನ ಅಳವಡಿಸಿಕೊಳ್ಳುವ ಮೂಲಕ ಅತ್ಯುತ್ತಮವಾಗಿ ಕಲಿಸುವಂತೆ ಸ್ಪಷ್ಟ ಮಾರ್ಗಸೂಚಿ ಹೊರಡಿಸಬೇಕು ಎನ್ನುವುದು ಸೇರಿದಂತೆ ಹಲವು ಮನವಿಯನ್ನು ಸಾಹಿತಿಗಳು, ಬರಹಗಾರರು ಸಲ್ಲಿಸಿದ್ದರು.

 

ಇದನ್ನೂ ಓದಿ...

Back to top button
>