ರಾಜ್ಯ

ಹೊಸ ಆವಿಷ್ಕಾರಗಳಿಗೆ ಪ್ರೇರಣೆ: ಪ್ರಧಾನಿ ಮೋದಿ ಘೋಷಣೆಗಳಿಗೆ ಇಸ್ರೋ ವಿಜ್ಞಾನಿಗಳ ಹರ್ಷ

Inspiration for new inventions: ISRO scientists cheered by PM Modi's announcements

ವರದಿ: ಪ್ರಿಯಲಚ್ಛಿ ಗಂಧನಹಳ್ಳಿ

ಬೆಂಗಳೂರು: ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಇಂದು (ಶನಿವಾರ) ಬೆಂಗಳೂರಿನ ಇಸ್ರೋ ಕಚೇರಿಗೆ ಆಗಮಿಸಿ ವಿಜ್ಞಾನಿಗಳ ಸಾಹಸ ಮತ್ತು ಶ್ರಮವನ್ನು ಹೊಗಳಿದ್ದು, ಅದು ವಿಜ್ಞಾನಿಗಳಲ್ಲಿ ಹೊಸ ಹುರುಪು ತಂದಿದೆ.

ಪ್ರಧಾನಿಗಳ ಈ ಶ್ಲಾಘನೆ ನಮಗೆ ಹೊಸ ಆವಿಷ್ಕಾರಗಳಿಗೆ ಪ್ರೇರಣೆ, ಪ್ರೋತ್ಸಾಹ ನೀಡಿದೆ ಎಂದು ಹಲವು ವಿಜ್ಞಾನಿಗಳು ಹೇಳಿದರು.

ಚಂದ್ರಯಾನ-3 ಉಪಗ್ರಹವು ಚಂದ್ರನ ಮೇಲೆ ಇಳಿದು ಚರಿತ್ರೆ ಸೃಷ್ಟಿಸಿದೆ. ಈಗ ಸೂರ್ಯನ ಅಧ್ಯಯನಕ್ಕಾಗಿ ಆದಿತ್ಯ ಎಲ್​-1 ಮಿಷನ್​ ಸಿದ್ಧವಾಗಿದೆ. ಸೆಪ್ಟೆಂಬರ್ 2 ರಂದು ಉಡಾವಣೆ ಮಾಡುವ ಯೋಜನೆ ಇದೆ ಎಂದು ಅಹಮದಾಬಾದ್‌ನ ಬಾಹ್ಯಾಕಾಶ ಅಪ್ಲಿಕೇಶನ್ ಕೇಂದ್ರದ (ಎಸ್‌ಎಸಿ) ನಿರ್ದೇಶಕ ನಿಲೇಶ್ ಎಂ.ದೇಸಾಯಿ ಅವರು ತಿಳಿಸಿದರು.

ಪ್ರಧಾನಿ ನರೇಂದ್ರ ಮೋದಿ ಅವರು ಭಾಷಣವು ಪ್ರೇರಕವಾಗಿತ್ತು. ಇಸ್ರೋ ಚಂದ್ರನ ಮೇಲೆ ಲ್ಯಾಂಡರ್​ ಅನ್ನು ಇಳಿಸಿದ ಜಾಗವನ್ನು ಶಿವಶಕ್ತಿ ಪಾಯಿಂಟ್​, ಆಗಸ್ಟ್​ 23 ದಿನವನ್ನು ರಾಷ್ಟ್ರೀಯ ಬಾಹ್ಯಾಕಾಶ ದಿನ ಎಂದು ಘೋಷಣೆ ಮಾಡಿದ್ದು ನಮಗೆಲ್ಲಾ ಹೆಚ್ಚಿನ ಅಧ್ಯಯನಕ್ಕೆ ಹುರುಪು ತಂದಿದೆ. ಇದು ನಮ್ಮಂತಹ ಬಾಹ್ಯಾಕಾಶ ವಿಜ್ಞಾನಿಗಳಿಗೆ ದೊಡ್ಡ ವಿಷಯವಾಗಿದೆ ಎಂದು ಸಂತಸ ವ್ಯಕ್ತಪಡಿಸಿದರು.

ಪ್ರಧಾನಿಯವರ ಮಾತು ಮತ್ತು ಪ್ರಕಟಣೆಗಳು ಬಾಹ್ಯಾಕಾಶ ಕ್ಷೇತ್ರದಲ್ಲಿ ದೇಶಕ್ಕಾಗಿ ಹೆಚ್ಚಿನ ಕೆಲಸ ಮಾಡಲು ಮತ್ತು ಪುನರ್ ಸಮರ್ಪಿಸಿಕೊಳ್ಳಲು ಉತ್ಸಾಹ ತುಂಬಿದೆ ಎಂದು ವಿಜ್ಞಾನಿ ನಿಲೇಶ್ ಎಂ. ದೇಸಾಯಿ ಹೇಳಿದರು.

ಪ್ರತಿಭೆಗೆ ಕೊರತೆಯಿಲ್ಲ: ಇಸ್ರೋದಲ್ಲಿ ಪ್ರತಿಭೆಗಳಿಗೆ ಕೊರತೆಯಿಲ್ಲ. ನಮಗೆ ಬೇಕಾಗಿರುವುದು ಒಬ್ಬ ನಾಯಕ. ಸ್ಫೂರ್ತಿ ತುಂಬುವ ವ್ಯಕ್ತಿ. ಪ್ರಸ್ತುತ ಪ್ರಧಾನಿ ಮೋದಿ ಅವರು ಮಾಡುತ್ತಿದ್ದಾರೆ. ಅವರು ನಮಗೆ ಉತ್ತಮ ಮಾರ್ಗದರ್ಶನ ನೀಡುತ್ತಿದ್ದಾರೆ. ಅವರ ನಾಯಕತ್ವದಲ್ಲಿ ದೇಶವು ಅದ್ಭುತಗಳನ್ನು ಸಾಧಿಸುತ್ತಿದೆ. ಇಸ್ರೋ ವಿಜ್ಞಾನಿಗಳ ಬಗ್ಗೆ ಇಂದು ಅವರು ಆಡಿದ ಮಾತು ಪ್ರೇರಣೆ ತುಂಬಿದೆ. ಅವರು ದೂರದೃಷ್ಟಿಯುಳ್ಳ ನಾಯಕ ಎಂದು ನ್ಯಾವಿಗೇಷನ್ ಸಿಸ್ಟಮ್ ಯುನಿಟ್​ನ ಉಪ ಪ್ರಧಾನ ವ್ಯವಸ್ಥಾಪಕ ಮತ್ತು ಚಂದ್ರಯಾನ-3 ರ ಸಂಘಟನಾ ಸಮಿತಿಯ ಎಫ್‌ಬಿ ಸಿಂಗ್ ಹೇಳಿದರು.

ಪ್ರಧಾನಿಗಳು ವಿದೇಶ ಪ್ರವಾಸದಿಂದ ಬಂದ ತಕ್ಷಣವೇ ನಮ್ಮನ್ನು ಭೇಟಿ ಮಾಡಿ ಹೊಗಳಿದರು. ಇದಲ್ಲವೇ ನಾಯಕನ ಲಕ್ಷಣ. ಖುದ್ದಾಗಿ ಅವರು ಇಲ್ಲಿಗೆ ಬಂದು ಮಾತನಾಡಿಸಿದ್ದು, ನಮ್ಮಲ್ಲಿ ಹೊಸ ಚೈತನ್ಯ ತುಂಬಿದೆ. ಅದಕ್ಕಿಂತ ವಿಜ್ಞಾನಿಗಳು ಏನನ್ನು ನಿರೀಕ್ಷಿಸಬಹುದು. ಚಂದ್ರಯಾನ ಇಳಿದ ಪಾಯಿಂಟ್​ಗಳಿಗೆ ಹೆಸರು, ಬಾಹ್ಯಾಕಾಶ ದಿನ ಘೋಷಣೆ ಮಾಡಿದ್ದು ಸ್ಮರಣಾರ್ಥ ಎಂದು ಇನ್ನೊಬ್ಬ ವಿಜ್ಞಾನಿ ಸುಧೀರ್ ಕುಮಾರ್ ಹೇಳಿದರು.

ಇದನ್ನೂ ಓದಿ...

Back to top button
>