ವರದಿ: ಪ್ರಿಯಲಚ್ಛಿ ಗಂಧನಹಳ್ಳಿ
ದೋಹಾ: ಕತಾರ್ ಅಧ್ಯಕ್ಷ ಶೇಖ್ ತಮೀಮ್ ಬಿನ್ ಹಮದ್ ಅಲ್-ಥಾನಿ ಅವರೊಂದಿಗೆ ದ್ವಿಪಕ್ಷೀಯ ಮಾತುಕತೆ ನಡೆಸಿದ ಪ್ರಧಾನಿ ನರೇಂದ್ರ ಮೋದಿ ಅವರು ಈ ಹಿಂದೆ ಮರಣದಂಡನೆ ಶಿಕ್ಷೆಗೆ ಗುರಿಯಾಗಿದ್ದ ಎಂಟು ಭಾರತೀಯರ ಬಿಡುಗಡೆ ಮಾಡಿದ್ದಕ್ಕಾಗಿ ಗುರುವಾರ ಧನ್ಯವಾದ ಅರ್ಪಿಸಿದ್ದಾರೆ.
ಈ ಕತಾರ್ ರಾಜಧಾನಿ ನಗರದ ಭವ್ಯವಾದ ಅಮಿರಿ ಅರಮನೆಯಲ್ಲಿ ನಡೆದ ಮಾತುಕತೆಯ ನಂತರ, ಎಮಿರ್ ಅವರೊಂದಿಗಿನ ತಮ್ಮ ಭೇಟಿ “ಅದ್ಭುತ” ಎಂದು ಪ್ರಧಾನಿ ಮೋದಿ ಬಣ್ಣಿಸಿದ್ದಾರೆ ಮತ್ತು ದ್ವಿಪಕ್ಷೀಯ ಸಂಬಂಧಗಳು ಮತ್ತಷ್ಟು “ಬಲವಾಗಿ” ಬೆಳೆಯುತ್ತಿವೆ. ಎರಡೂ ರಾಷ್ಟ್ರಗಳು ಭವಿಷ್ಯದ ಕ್ಷೇತ್ರಗಳಲ್ಲಿ ಸಹಯೋಗವನ್ನು ಎದುರು ನೋಡುತ್ತಿವೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.
ಪ್ರಮುಖ ಕ್ಷೇತ್ರಗಳಲ್ಲಿ ವಿಶೇಷವಾಗಿ ಹೂಡಿಕೆ, ಶಕ್ತಿ ಮತ್ತು ಹೊಸ ತಂತ್ರಜ್ಞಾನದ ಕ್ಷೇತ್ರಗಳಲ್ಲಿ ಸಹಕಾರವನ್ನು ವಿಸ್ತರಿಸುವುದು, ತೃತೀಯ ರಾಷ್ಟ್ರಗಳಲ್ಲಿನ ಪಾಲುದಾರಿಕೆಯನ್ನು ಪರಿಶೀಲಿಸುವುದು ಮತ್ತು ಒಟ್ಟಾರೆ ಸಂಬಂಧಗಳನ್ನು ವಹಿವಾಟಿನ ದೃಷ್ಟಿಕೋನದಿಂದ ನೋಡದೆ ಕಾರ್ಯತಂತ್ರದ ದೃಷ್ಟಿಕೋನದಿಂದ ನೋಡುವ ಕುರಿತು ಮಾತುಕತೆಗಳು ಕೇಂದ್ರೀಕೃತವಾಗಿವೆ ಎಂದು ವಿದೇಶಾಂಗ ಕಾರ್ಯದರ್ಶಿ ವಿನಯ್ ಕ್ವಾತ್ರಾ ಅವರು ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಗಲ್ಫ್ ರಾಷ್ಟ್ರದಲ್ಲಿರುವ ಭಾರತೀಯ ಸಮುದಾಯದ ಕಲ್ಯಾಣಕ್ಕಾಗಿ ಕತಾರ್ ನೀಡಿದ ಬೆಂಬಲಕ್ಕಾಗಿ ಪ್ರಧಾನಿ ಮೋದಿ ಅವರು ಧನ್ಯವಾದ ಅರ್ಪಿಸಿದರು ಎಂದು ಅವರು ಹೇಳಿದರು.
ಇತ್ತೀಚೆಗೆ ಕತಾರ್‌ನಲ್ಲಿ ಬೇಹುಗಾರಿಕೆ ಆರೋಪದ ಮೇಲೆ ಮರಣದಂಡನೆ ಶಿಕ್ಷೆಗೆ ಗುರಿಯಾಗಿದ್ದ ಭಾರತೀಯ ನೌಕಾಪಡೆಯ ಎಂಟು ಮಂದಿ ಮಾಜಿ ಯೋಧರನ್ನು ಸೋಮವಾರ ಕತಾರ್ ಸರ್ಕಾರ ಬಿಡುಗಡೆ ಮಾಡಿತ್ತು. ಈಗಾಗಲೇ ಏಳು ಮಂದಿ ಭಾರತಕ್ಕೆ ಬಂದಿಳಿದಿದ್ದಾರೆ. ಇದರ ಬೆನ್ನಲ್ಲೇ ಮೋದಿ ಕತಾರ್‌ಗೆ ಭೇಟಿ ನೀಡಿರುವುದು ಗಮನಾರ್ಹ.