ಬೆಂಗಳೂರು (ಸಂಭ್ರಮಪ್ರಭ ನ್ಯೂಸ್): ಸಚಿವ ಸತೀಶ್ ಜಾರಕಿಹೊಳಿ ಅವರ ಆಪ್ತರು ಹಾಗೂ ಅವರಿಗೆ ಸಂಬಂಧಿಸಿದ ಸ್ಥಳಗಳ ಮೇಲೆ ಜಾರಿ ನಿರ್ದೇಶನಾಲಯ (ಇ.ಡಿ) ನಡೆಸಿರುವ ದಾಳಿ ಸಂಪೂರ್ಣ ರಾಜಕೀಯ ಪ್ರೇರಿತವಾಗಿದೆ ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಅವರು, “ಸತೀಶ್ ಜಾರಕಿಹೊಳಿ ಅವರು ಕಾನೂನು ಚೌಕಟ್ಟಿನಲ್ಲಿಯೇ ವ್ಯಾಪಾರ ವಹಿವಾಟು ನಡೆಸುತ್ತಿದ್ದಾರೆ. ಇದರಲ್ಲಿ ಮುಚ್ಚಿಡುವಂತಹದ್ದು ಯಾವುದೂ ಇಲ್ಲ. ಇ.ಡಿ ಅಧಿಕಾರಿಗಳು ಮಾಡುವ ತನಿಖೆಗೆ ಮತ್ತು ಅವರು ಕೇಳುವ ಎಲ್ಲಾ ಪ್ರಶ್ನೆಗಳಿಗೂ ಸತೀಶ್ ಅವರು ಖಂಡಿತ ಸೂಕ್ತ ಉತ್ತರ ನೀಡಲಿದ್ದಾರೆ. ಇದರಿಂದ ಯಾರು ಗಾಬರಿಯಾಗುವ ಅಗತ್ಯವಿಲ್ಲ,” ಎಂದು ಸ್ಪಷ್ಟಪಡಿಸಿದ್ದಾರೆ.
ದಲಿತ ನಾಯಕನ ಬೆಳವಣಿಗೆ ಸಹಿಸುತ್ತಿಲ್ಲ
“ಸತೀಶ್ ಜಾರಕಿಹೊಳಿ ಒಬ್ಬ ದಲಿತ ನಾಯಕರಾಗಿ ಎತ್ತರಕ್ಕೆ ಬೆಳೆಯುತ್ತಿರುವುದನ್ನು ಸಹಿಸಲು ಅವರಿಂದ (ಬಿಜೆಪಿ) ಆಗುತ್ತಿಲ್ಲ. ದಲಿತರನ್ನು ತುಳಿಯುವ ಉದ್ದೇಶದಿಂದಲೇ ಈ ರೀತಿ ಮಾಡಲಾಗುತ್ತಿದೆ. ಆದರೆ ಇದು ಅವರಿಗೇ ತಿರುಗೇಟು ನೀಡಲಿದೆ. ನಾಳೆ ನಮ್ಮ ಸರ್ಕಾರಕ್ಕೆ 100 ದಿನ ತುಂಬುತ್ತಿರುವ ಹಿನ್ನೆಲೆಯಲ್ಲಿ ಜನರಿಗೆ ಸರ್ಕಾರದ ಸಾಧನೆಗಳನ್ನು ಮತ್ತು ಕೆಲವು ವಿಚಾರಗಳನ್ನು ತಿಳಿಸಲು ಮುಂದಾಗಿದ್ದೆವು. ಆದರೆ ಜನರ ಗಮನ ಬೇರೆಡೆ ಸೆಳೆಯಲು (ಡಿವಿಯೇಟ್ ಮಾಡಲು) ಉದ್ದೇಶಪೂರ್ವಕವಾಗಿ ಇದೇ ಸಮಯವನ್ನು ದಾಳಿಗೆ ಆಯ್ಕೆ ಮಾಡಿಕೊಂಡಿದ್ದಾರೆ,” ಎಂದು ಡಿ.ಕೆ. ಶಿವಕುಮಾರ್ ಆರೋಪಿಸಿದ್ದಾರೆ.
ಇನ್ನೂ ಅನೇಕರ ಮೇಲೆ ಇಡಿ ದಾಳಿ ನಡೆಯಬಹುದು
“ಮುಂಬರುವ ದಿನಗಳಲ್ಲಿ ಇನ್ನೂ ಕೆಲವರ ಮೇಲೆ ಇ.ಡಿ ದಾಳಿ ನಡೆಯುವ ಸಾಧ್ಯತೆ ಇದೆ. ಈ ಬಗ್ಗೆ ನಮ್ಮ ಎಲ್ಲಾ ಮಂತ್ರಿಗಳಿಗೂ ಹಾಗೂ ಶಾಸಕರಿಗೂ ನಾನು ಆಗಲೇ ಎಚ್ಚರಿಕೆ ಗಂಟೆ ನೀಡಿದ್ದೇನೆ. ಅವರು ಯಾರನ್ನೂ ಬಿಡುವುದಿಲ್ಲ, ಕೇವಲ ಸುಳ್ಳು ಕಥೆಗಳನ್ನು ಕಟ್ಟುವುದು, ಸುಳ್ಳು ಆರೋಪ ಮಾಡುವುದು ಮತ್ತು ಜನರ ದಾರಿ ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ. ನಾವೆಲ್ಲರೂ ಬಹಳ ಹುಷಾರಾಗಿರಬೇಕು ಎಂದು ತಿಳಿಸಿದ್ದೇನೆ.”
“ಇಲ್ಲಿಯವರೆಗೆ ಯಾವೊಬ್ಬ ಬಿಜೆಪಿ ನಾಯಕನ ಮೇಲೂ ಇ.ಡಿ ದಾಳಿ ನಡೆದಿಲ್ಲ. ಈ ಹಿಂದೆ ನನ್ನನ್ನೂ ಎತ್ತಿಕೊಂಡು ಹೋಗಿ ಜೈಲಿನಲ್ಲಿಟ್ಟರು, ಆದರೆ ಏನಾಯಿತು? ಇವತ್ತು ರಾಜ್ಯದ ಮುಖ್ಯಮಂತ್ರಿಯಾಗಿ ಎಲ್ಲರೂ ಸ್ವೀಕಾರ ಮಾಡಲೇಬೇಕಾದಂತಹ ಪರಿಸ್ಥಿತಿ, ಅನಿವಾರ್ಯತೆ ಬಂತು. ಅದೇ ರೀತಿ ಸತೀಶ್ ಜಾರಕಿಹೊಳಿ ಕೂಡ ನಮ್ಮ ರಾಜ್ಯಕ್ಕೆ, ನಮ್ಮ ಪಕ್ಷಕ್ಕೆ ಪ್ರಬಲವಾದ ನಾಯಕರು, ಅವರ ಬೆಳವಣಿಗೆಯನ್ನು ಸಹಿಸಲು ಅವರಿಂದ ಆಗುತ್ತಿಲ್ಲ,” ಎಂದು ಡಿ.ಕೆ. ಶಿವಕುಮಾರ್ ಕಿಡಿಕಾರಿದ್ದಾರೆ.


