ಸಂಭ್ರಮಪ್ರಭ ನ್ಯೂಸ್, ಬೆಂಗಳೂರು: ರಾಜ್ಯ ಸಹಕಾರ ಕ್ಷೇತ್ರದಲ್ಲಿ ಭಾರೀ ಕುತೂಹಲ ಮೂಡಿಸಿದ್ದ ಡಿಸಿಸಿ ಅಪೆಕ್ಸ್ ಬ್ಯಾಂಕ್ ಚುನಾವಣೆಯಲ್ಲಿ ಸಚಿವ ಕೆ.ಎನ್. ರಾಜಣ್ಣ ಅವರಿಗೆ ಅಧ್ಯಕ್ಷ ಸ್ಥಾನ ಕೈತಪ್ಪಿದೆ. ರವಿ ಅವರು ನೂತನ ಅಧ್ಯಕ್ಷರಾಗಿ ಆಯ್ಕೆಯಾಗಿದ್ದು, ಈ ಬಗ್ಗೆ ಎದ್ದಿರುವ ಪ್ರಶ್ನೆಗಳಿಗೆ ಪ್ರತಿಕ್ರಿಯಿಸಿರುವ ಸಚಿವ ಬಾಲಕೃಷ್ಣ, ಹಿರಿಯ ನಾಯಕರಾಗಿರುವ ರಾಜಣ್ಣ ಅವರಿಗೆ ಪಕ್ಷದಲ್ಲಿ ಸೂಕ್ತ ಗೌರವ ಸಿಗಲಿದೆ ಎಂದು ಸ್ಪಷ್ಟಪಡಿಸಿದ್ದಾರೆ.
ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, “ಅಪೆಕ್ಸ್ ಬ್ಯಾಂಕ್ ಅಧ್ಯಕ್ಷರ ಆಯ್ಕೆ ವಿಚಾರದಲ್ಲಿ ನಾವೆಲ್ಲರೂ ಕುಳಿತು ಚರ್ಚೆ ಮಾಡಿಯೇ ತೀರ್ಮಾನ ಕೈಗೊಂಡಿದ್ದೇವೆ. ಕೆ.ಎನ್. ರಾಜಣ್ಣ ಅವರು ಈ ಹಿಂದೆ ಐದು ವರ್ಷಗಳ ಕಾಲ ಇದೇ ಬ್ಯಾಂಕ್‌ಗೆ ಅಧ್ಯಕ್ಷರಾಗಿ ಯಶಸ್ವಿಯಾಗಿ ಕೆಲಸ ಮಾಡಿದ್ದರು. ಅವರು ಪಕ್ಷದ ಹಿರಿಯ ಮುಖಂಡರು ಹಾಗೂ ಮಂತ್ರಿಯಾಗಿದ್ದವರು. ಈ ಬಾರಿ ಹೊಸ ಮುಖಗಳಿಗೆ ಅವಕಾಶ ನೀಡಬೇಕು ಎಂಬ ಕಾರಣಕ್ಕೆ ರವಿ ಅವರಿಗೆ ಮಣೆ ಹಾಕಲಾಗಿದೆ. ರಾಜಣ್ಣ ಅವರಿಗೆ ತಕ್ಕುದಾದ ಸ್ಥಾನಮಾನ ಮತ್ತು ಗೌರವವನ್ನು ಪಕ್ಷ ಖಂಡಿತ ನೀಡಲಿದೆ” ಎಂದರು.
ನಮ್ಮ ಮನೆ ಮೇಲೆ ಐಟಿ ರೇಡ್ ಆಗಲ್ಲ!
ಇನ್ನು, ರಾಜ್ಯದಲ್ಲಿ ಮಂತ್ರಿಗಳ ಮೇಲೆ ಐಟಿ, ಇಡಿ ದಾಳಿಗಳು ನಡೆಯಬಹುದು ಎಂಬ ಸಿಎಂ ಸಿದ್ದರಾಮಯ್ಯ ಅವರ ಅನುಮಾನದ ಕುರಿತು ಕೇಳಿದ ಪ್ರಶ್ನೆಗೆ ಲಘುವಾಗಿ ಉತ್ತರಿಸಿದ ಸಚಿವರು, “ಯಾರ ಬಳಿ ಕಾಸು ಇದೆಯೋ ಅವರ ಮೇಲೆ ರೇಡ್ ಮಾಡ್ತಾರೆ ಬಿಡಿ. ನಮ್ಮ ಬಳಿ ಆ ಮಟ್ಟದ ದುಡ್ಡಿಲ್ಲ, ಹೀಗಾಗಿ ನಮ್ಮ ಮನೆಯಂತೂ ರೇಡ್ ಆಗುವುದಿಲ್ಲ, ತಲೆಕೆಡಿಸಿಕೊಳ್ಳುವ ಅಗತ್ಯವಿಲ್ಲ” ಎಂದು ನಕ್ಕರು.
ಬಿಜೆಪಿಗೆ ಟೀಕಿಸುವ ನೈತಿಕತೆ ಇಲ್ಲ:
‘ವಂದೇ ಮಾತರಂ’ ಗೀತೆಯ ಕೇವಲ ಎರಡು ಚರಣಗಳನ್ನು ಮಾತ್ರ ಹಾಡಿಸುವ ತೀರ್ಮಾನದ ಬಗ್ಗೆ ಬಿಜೆಪಿ ಮಾಡುತ್ತಿರುವ ಟೀಕೆಗಳಿಗೆ ಬಾಲಕೃಷ್ಣ ತೀಕ್ಷ್ಣ ತಿರುಗೇಟು ನೀಡಿದರು. “ಯಾರು ತಮ್ಮ ಆರ್.ಎಸ್.ಎಸ್ ಕಚೇರಿಯ ಮೇಲೆ ವರ್ಷಾನುಗಟ್ಟಲೆ ರಾಷ್ಟ್ರಧ್ವಜವನ್ನೇ ಹಾರಿಸಲಿಲ್ಲವೋ, ಯಾರು ರಾಷ್ಟ್ರಗೀತೆಗೆ ಗೌರವ ಕೊಡಲಿಲ್ಲವೋ ಅಂತವರಿಗೆ ನಮ್ಮನ್ನು ಟೀಕಿಸುವ ಯಾವುದೇ ನೈತಿಕತೆ ಇಲ್ಲ. ನಾವು ವಂದೇ ಮಾತರಂಗೆ ಸಂಪೂರ್ಣ ಗೌರವ ಕೊಡುತ್ತೇವೆ. ರಾಷ್ಟ್ರಕವಿ ಕುವೆಂಪು ಅವರು ಬರೆದ ನಾಡಗೀತೆ ತುಂಬಾ ಉದ್ದವಿದೆ ಎಂದು ಕೆಲವು ಸಾಲುಗಳನ್ನು ಮೊಟಕುಗೊಳಿಸಲಿಲ್ಲವೇ? ಅದೇ ರೀತಿಯೇ ಇಲ್ಲೂ ನಡೆದಿದೆ. ಬಿಜೆಪಿ ಅವರಿಂದ ನಾವು ದೇಶಭಕ್ತಿಯ ಪಾಠ ಕಲಿಯುವ ಅಗತ್ಯವಿಲ್ಲ” ಎಂದು ವಾಗ್ದಾಳಿ ನಡೆಸಿದರು.
ಸರ್ಕಾರದ ಪರ ದನಿ ಎತ್ತಲು ಸಿದ್ಧ:
ಸರ್ಕಾರದ ಯೋಜನೆಗಳು ಹಾಗೂ ಕಾರ್ಯಕ್ರಮಗಳ ಬಗ್ಗೆ ಜನರಿಗೆ ನಿಖರ ಮಾಹಿತಿ ನೀಡಲು ಎಂಟು ಜನ ಸಚಿವರ ತಂಡವನ್ನು ನೇಮಿಸಿರುವ ಬಗ್ಗೆಯೂ ಬಾಲಕೃಷ್ಣ ಹರ್ಷ ವ್ಯಕ್ತಪಡಿಸಿದರು. “ಮುಖ್ಯಮಂತ್ರಿಗಳು ನಮ್ಮ ಮೇಲೆ ವಿಶ್ವಾಸವಿಟ್ಟು ಈ ಜವಾಬ್ದಾರಿ ನೀಡಿದ್ದಾರೆ. ಸಿಕ್ಕ ಅವಕಾಶ ಬಳಸಿಕೊಂಡು, ಮಾಧ್ಯಮಗಳ ಮೂಲಕ ಸರ್ಕಾರದ ಮತ್ತು ಪಕ್ಷದ ಪರವಾಗಿ ಜನರಿಗೆ ಸತ್ಯಾಂಶವನ್ನು ಮುಟ್ಟಿಸುವ ಕೆಲಸವನ್ನು ನಾವು ಪ್ರಾಮಾಣಿಕವಾಗಿ ಮಾಡುತ್ತೇವೆ” ಎಂದು ತಿಳಿಸಿದರು.


