Updated By: Priyalachhi
ಬೆಂಗಳೂರು: ಶಿಕ್ಷಕರ ಅರ್ಹತಾ ಪರೀಕ್ಷೆ (TET) ಇಂದು ಯಶಸ್ವಿಯಾಗಿ ಮುಕ್ತಾಯಗೊಂಡಿತು. 5 ಮತ್ತು 8ನೇ ತರಗತಿಗಳಿಗೆ ಬೋಧಿಸಲು ಶಿಕ್ಷಕರ ನೇಮಕಾತಿಗೆ ಎರಡು ಅವಧಿಯಲ್ಲಿ ಪರೀಕ್ಷೆ ನಡೆಸಲಾಯಿತು.
ಬೆಳಗಿನ ಮೊದಲ ಪರೀಕ್ಷಾ ಅವಧಿಯಲ್ಲಿ ಶೇ.93.35 ಮತ್ತು ಮಧ್ಯಾಹ್ನದ ನಂತರದ ಎರಡನೇ ಅವಧಿಯಲ್ಲಿ ಶೇ.94.79ರಷ್ಟು ಹಾಜರಾತಿ ದಾಖಲಾಗಿದೆ. ಯಾವುದೇ ಅಡೆತಡೆಗಳಿಲ್ಲದೆ ಪರೀಕ್ಷೆ ಸುಸೂತ್ರವಾಗಿ ನಡೆಯಿತು ಎಂದು ಶಿಕ್ಷಣ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.
ಐದನೇ ತರಗತಿಗಾಗಿ ಮೊದಲ ಪರೀಕ್ಷೆ ಬೆಳಗ್ಗೆ 9:30ರಿಂದ 12:00ರ ವರೆಗೆ ನಡೆಯಿತು. ಒಟ್ಟು 85,042 ಅಭ್ಯರ್ಥಿಗಳು ನೋಂದಣಿ ಮಾಡಿಕೊಂಡಿದ್ದು, ಶೇ.100ರಷ್ಟು ಹಾಜರಾತಿ ದಾಖಲಾಗಿದೆ. ಬಾಹ್ಯ ಮೌಲ್ಯಮಾಪನ ಕೆಟಗರಿಯಲ್ಲಿ ಒಟ್ಟು ನೋಂದಣಿಯಾದ 85,042 ಅಭ್ಯರ್ಥಿಗಳ ಪೈಕಿ 79,394 ಅಭ್ಯರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು. ಈ ಮೂಲಕ ಶೇ.93.35ರಷ್ಟು ಹಾಜರಾತಿ ದಾಖಲಾಗಿದೆ.
8ನೇ ತರಗತಿಗೆ ಮಧ್ಯಾಹ್ನದ ನಂತರದ ಎರಡನೇ ಅವಧಿಯ ಪರೀಕ್ಷೆ 2:00ರಿಂದ 4:30ರ ವರೆಗೆ ನಡೆಯಿತು. ಈ ಪರೀಕ್ಷೆಗೂ ಉತ್ತಮ ಹಾಜರಾತಿ ದಾಖಲಾಗಿದೆ. ನೋಂದಣಿಯಾದ ಎಲ್ಲ 2,50,189 ಅಭ್ಯರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು. ಅದೇ ರೀತಿ, ಬಾಹ್ಯ ಮೌಲ್ಯಮಾಪನ ಕೆಟಗರಿಯಲ್ಲಿ 2,37,164 ವಿದ್ಯಾರ್ಥಿಗಳು ಹಾಜರಾಗಿದ್ದು, ಶೇ.94.79ರಷ್ಟು ಹಾಜರಾತಿ ದಾಖಲಾಗಿದೆ.

