ಪರಿಸ್ಥಿತಿ ಬದಲಾಗದಿದ್ದರೆ ದಶಕಗಳ ಪರಿಶ್ರಮ ವ್ಯರ್ಥ, ಮತ್ತೆ ಭಾರಿ ಬಡತನ ಮರಳಬಹುದು: ಪ್ರಧಾನಿ ಮೋದಿ ಎಚ್ಚರಿಕೆ

0
10

ವರದಿ: ಪ್ರಿಯಾಂಕಾ ಚಂದ್ರಶೇಖರ್ ಗಂಧನಹಳ್ಳಿ

ನವದೆಹಲಿ: ಮಧ್ಯ ಪ್ರಾಚ್ಯ ಸಂಘರ್ಷ ಜಗತ್ತಿನಾದ್ಯಂತ ವ್ಯಾಪಕ ಆತಂಕಕ್ಕೆ ಕಾರಣವಾಗಿದ್ದು, ಜಾಗತಿಕ ಇಂಧನ ಸಂಕಷ್ಟ ತೀವ್ರಗೊಳ್ಳುತ್ತಿರುವಂತೆಯೇ ಪರಿಸ್ಥಿತಿ ಬದಲಾಗದಿದ್ದರೆ ಭಾರತಕ್ಕೆ ಮತ್ತೆ ಭಾರಿ ಬಡತನ ಮರಳಬಹುದು ಎಂದು ಪ್ರಧಾನಿ ನರೇಂದ್ರ ಮೋದಿ ಎಚ್ಚರಿಕೆ ನೀಡಿದ್ದಾರೆ.

ಶುಕ್ರವಾರ ಜಾಗತಿಕ ನಾಯಕರು, ಕೈಗಾರಿಕಾ ತಜ್ಞರು ಭಾಗವಹಿಸಿದ್ದ ಅಂತರರಾಷ್ಟ್ರೀಯ ಇಂಧನ ಮತ್ತು ಆರ್ಥಿಕ ಶೃಂಗಸಭೆಯನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಜಾಗತಿಕ ಇಂಧನ ಸಂಕಷ್ಟ ತೀವ್ರಗೊಳ್ಳುತ್ತಿರುವ ಬಗ್ಗೆ ಗಂಭೀರ ಆತಂಕ ವ್ಯಕ್ತಪಡಿಸಿದರು.

‘ಜಾಗತಿಕ ರಾಜಕೀಯ ಉದ್ವಿಗ್ನತೆಗಳು ಮತ್ತು ಇಂಧನ ಸರಬರಾಜು ಸರಪಳಿಯ ವ್ಯತ್ಯಯಗಳು ವಿಶ್ವದ ಆರ್ಥಿಕತೆಗಳ ಮೇಲೆ, ವಿಶೇಷವಾಗಿ ಅಭಿವೃದ್ಧಿಶೀಲ ರಾಷ್ಟ್ರಗಳ ಮೇಲೆ, ದೊಡ್ಡ ಪರಿಣಾಮ ಬೀರುತ್ತವೆ ಎಂದು ಅವರು ಎಚ್ಚರಿಸಿದರು.

ಅಂತೆಯೇ ಎಲ್ಲರಿಗೂ ಸ್ಥಿರ, ಕೈಗೆಟುಕುವ ಮತ್ತು ಶಾಶ್ವತ ಇಂಧನ ಲಭ್ಯತೆ ಖಚಿತಪಡಿಸಲು ರಾಷ್ಟ್ರಗಳು ಒಟ್ಟಾಗಿ ಕೆಲಸ ಮಾಡಬೇಕೆಂದು ಒತ್ತಿಹೇಳಿದರು.

ದಶಕಗಳ ಪರಿಶ್ರಮ ವ್ಯರ್ಥ, ಬಡತನ ಮರಳಿಬಹುದು

‘ಸಂಘರ್ಷಗಳು, ಕಚ್ಚಾ ತೈಲದ ಬೆಲೆ ಏರಿಕೆ, ಸರಬರಾಜಿನ ವ್ಯತ್ಯಯಗಳು ಮತ್ತು ಹೆಚ್ಚುತ್ತಿರುವ ಇಂಧನ ಬೇಡಿಕೆಗಳಿಂದ ವಿಶ್ವವು ಅಪೂರ್ವ ಅನಿಶ್ಚಿತತೆಯ ಅವಧಿಯನ್ನು ಎದುರಿಸುತ್ತಿದೆ.

ಈ ಪರಿಸ್ಥಿತಿ ದರ ಏರಿಕೆಯ ಒತ್ತಡವನ್ನು ಉಂಟುಮಾಡಿ, ಆರ್ಥಿಕ ಬೆಳವಣಿಗೆಯನ್ನು ನಿಧಾನಗೊಳಿಸಿ, ಆಮದು ಇಂಧನದ ಮೇಲೆ ಅವಲಂಬಿತವಾಗಿರುವ ಬಡ ರಾಷ್ಟ್ರಗಳಿಗೆ ಗಂಭೀರ ಸಂಕಷ್ಟವನ್ನು ತರಬಹುದು ಎಂದು ಎಚ್ಚರಿಸಿದರು.

ಅಲ್ಲದೆ “ವಿಷಯಗಳು ಬದಲಾಗದಿದ್ದರೆ, ಕಳೆದ ಕೆಲವು ದಶಕಗಳಲ್ಲಿ ಸಾಧಿಸಿದ ಪ್ರಗತಿಯನ್ನು ಇದು ಅಳಿಸಿಹಾಕಬಹುದು ಮತ್ತು ಭಾರಿ ಬಡತನ ಮರಳಬಹುದು” ಎಂದು ಎಚ್ಚರಿಕೆ ನೀಡಿದರು.

ಮಾನವೀಯ ಕಳಕಳಿಯ ವಿಷಯ

“ಜಾಗತಿಕ ಇಂಧನ ಮಾರುಕಟ್ಟೆ ಭಾರೀ ಒತ್ತಡದಲ್ಲಿದೆ. ಇಂಧನ ಭದ್ರತೆ ಇಂದು ಕೇವಲ ಆರ್ಥಿಕ ವಿಷಯವಲ್ಲ, ಅದು ತಂತ್ರಾತ್ಮಕ ಮತ್ತು ಮಾನವೀಯ ಕಳಕಳಿಯ ವಿಷಯವೂ ಆಗಿದೆ. ಜಾಗತಿಕ ಇಂಧನ ಬೆಲೆಗಳ ಏರಿಳಿತದಿಂದ ಅಭಿವೃದ್ಧಿಶೀಲ ರಾಷ್ಟ್ರಗಳು ಅತ್ಯಂತ ಹೆಚ್ಚು ಹಾನಿಗೊಳಗಾಗುತ್ತಿವೆ.

ತೈಲ ಮತ್ತು ಅನಿಲದ ಬೆಲೆಗಳಲ್ಲಿ ಏಕಾಏಕಿ ಉಂಟಾಗುವ ಏರಿಕೆಗಳು ಸಾರಿಗೆ, ಆಹಾರ ಸರಬರಾಜು ಸರಪಳಿ, ಉತ್ಪಾದನಾ ವೆಚ್ಚ ಮತ್ತು ಗೃಹ ಖರ್ಚುಗಳ ಮೇಲೆ ನೇರ ಪರಿಣಾಮ ಬೀರುತ್ತವೆ. ಇಂಧನ ಮೂಲಗಳನ್ನು ವೈವಿಧ್ಯಗೊಳಿಸುವುದು ಮತ್ತು ಪ್ರಮುಖ ಇಂಧನ ಸರಬರಾಜಿಗಾಗಿ ಕೆಲವು ಪ್ರದೇಶಗಳ ಮೇಲೆ ಅವಲಂಬನೆಯನ್ನು ಕಡಿಮೆ ಮಾಡುವ ಅಗತ್ಯವನ್ನೂ ಪ್ರಧಾನಿ ಮೋದಿ ಒತ್ತಿಹೇಳಿದರು.

sambrama prabha editor suresh kt

LEAVE A REPLY

Please enter your comment!
Please enter your name here