ವರದಿ: ಪ್ರಿಯಾಂಕಾ ಚಂದ್ರಶೇಖರ್ ಗಂಧನಹಳ್ಳಿ
ಕೊಪ್ಪಳ: ಇನ್ನುಮುಂದೆ ಶಾಲೆಯಲ್ಲಿ ಹಾಜರಾತಿ ವೇಳೆ ‘yes sir’ ಎಂದು ಹೇಳುವ ಬದಲು ಜೈ ಶ್ರೀರಾಮ್ ಅಂತ ಹೇಳಿ ಎಂದು ಕರೆ ನೀಡಿದ್ದ ಬಿಜೆಪಿ ಉಚ್ಚಾಟಿತ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರ ಹೇಳಿಕೆಗೆ ಬಿಜೆಪಿಯ ಮತ್ತೊಬ್ಬ ಶಾಸಕ ಗಾಲಿ ಜನಾರ್ದನ ರೆಡ್ಡಿ ಅವರು ಮಂಗಳವಾರ ಬೆಂಬಲ ನೀಡಿದ್ದಾರೆ.
ಇಂದು ಕೊಪ್ಪಳದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಜನಾರ್ದನ ರೆಡ್ಡಿ, ಬಸನಗೌಡ ಪಾಟೀಲ್ ಯತ್ನಾಳ್ ಅವರ ಹೇಳಿಕೆಯನ್ನು ಬೆಂಬಲಿಸುತ್ತೇನೆ. ಈ ವಿಷಯಕ್ಕೆ ನೂರಕ್ಕೆ ನೂರು ನನ್ನ ಬೆಂಬಲ ಇದೆ ಎಂದರು.
ಇದೇ ವೇಳೆ ರಾಜ್ಯದ ಕಾಂಗ್ರೆಸ್ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ ಅವರು, ಸರ್ಕಾರ ಅಲ್ಪಸಂಖ್ಯಾತರನ್ನು ಓಲೈಸುತ್ತಿದೆ. ಹಿಜಾಬ್ ವಿವಾದದ ಕುರಿತು ಹೈಕೋರ್ಟ್ ಮತ್ತು ಸುಪ್ರೀಂ ಕೋರ್ಟ್‌ನಲ್ಲಿ ಪ್ರಕರಣವಿದ್ದರೂ, ಸರ್ಕಾರವು ಆದೇಶ ಹೊರಡಿಸಿದೆ. ಕಾಂಗ್ರೆಸ್ ಪಕ್ಷವು ಸಮಾಜವನ್ನು ಒಡೆಯುವ ಪ್ರಯತ್ನ ಮಾಡುತ್ತಿದೆ ಎಂದು ಆರೋಪಿಸಿದರು.
ಜೂನ್‌ನಲ್ಲಿ ಶಾಲೆಗಳು ಆರಂಭವಾದ ಬಳಿಕ ಪ್ರತಿಯೊಬ್ಬರಿಗೂ ಕೇಸರಿ ಶಾಲು ವಿತರಣೆ ಮಾಡುತ್ತೇನೆ. ಇನ್ಮುಂದೆ ಶಾಲೆಯಲ್ಲಿ ಹಾಜರಾತಿ ಹಾಕುವ ವೇಳೆ ‘ಯೆಸ್ ಸರ್’ ಎನ್ನುವ ಬದಲು ಜೈ ಶ್ರೀರಾಮ್ ಅಂತ ಹೇಳಿ. ಶಿಕ್ಷಕರಿಗೆ ನಮಸ್ಕರಿಸುವಾಗ ಜೈ ಶ್ರೀರಾಮ್ ಎನ್ನಿ ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರು ಭಾನುವಾರ ಕರೆ ಕೊಟ್ಟಿದ್ದರು.



