ವರದಿ: ಪ್ರಿಯಾಂಕಾ ಚಂದ್ರಶೇಖರ್ ಗಂಧನಹಳ್ಳಿ

ಜಮ್ಮು: ಹಿಂದೂಗಳ ಪವಿತ್ರ ಯಾತ್ರಾಸ್ಥಳ ಅಮರನಾಥಕ್ಕೆ ಯಾತ್ರೆ ಹೋಗಲು ನೋಂದಣಿ ಪ್ರಕ್ರಿಯೆ ಆರಂಭವಾಗಿದೆ. ಏಪ್ರಿಲ್ 15ರಿಂದ ಮುಂಗಡ ನೋಂದಣಿ ಪ್ರಕ್ರಿಯೆ ಶುರುವಾಗಲಿದೆ ಎಂದು ಶ್ರೀ ಅಮರನಾಥ ದೇಗುಲ ಮಂಡಳಿ ತಿಳಿಸಿದೆ.

ವಾರ್ಷಿಕ ಯಾತ್ರೆ ಯಾವಾಗ ಪ್ರಾರಂಭವಾಗುತ್ತದೆ ಎಂಬುದರ ಕುರಿತು ಮಂಡಳಿ ಸದ್ಯಕ್ಕೆ ಯಾವುದೇ ಖಚಿತ ಮಾಹಿತಿ ನೀಡಿಲ್ಲ. ಆದರೆ, ಯಾತ್ರೆಗಳಿಗೆ ಮುಂಗಡ ನೋಂದಣಿಯಿಂದ ಹಿಡಿದು ಆರೋಗ್ಯ ತಪಾಸಣೆ ಹಾಗೂ ಅಲ್ಲಿಗೆ ಹೋಗಿ ಏನು ಮಾಡಬೇಕು, ಏನು ಮಾಡಬಾರದು ಎಂಬ ಸಂಪೂರ್ಣ ಮಾರ್ಗಸೂಚಿ ಬಿಡುಗಡೆ ಮಾಡಿದೆ.

ಯಾತ್ರಾರ್ಥಿಗಳು ಅಧಿಕೃತ ಶ್ರೀ ಅಮರನಾಥ ದೇಗುಲ ಮಂಡಳಿ (SASB) ವೆಬ್‌ಸೈಟ್ jksasb.nic.in ಅಥವಾ ಭಾರತದಾದ್ಯಂತ ಜಮ್ಮು ಮತ್ತು ಕಾಶ್ಮೀರ ಬ್ಯಾಂಕ್, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಪಂಜಾಬ್ ನ್ಯಾಷನಲ್ ಬ್ಯಾಂಕ್ ಮತ್ತು ಯೆಸ್ ಬ್ಯಾಂಕ್‌ನ 554 ಶಾಖೆಗಳಲ್ಲಿ ಮುಂಗಡ ನೋಂದಣಿ ಮಾಡಿಕೊಳ್ಳಬಹುದು ಎಂದು ಮಂಡಳಿ ತಿಳಿಸಿದೆ.

ಈ ಸಾಲಿನ ವಾರ್ಷಿಕ ಅಮರನಾಥ ಯಾತ್ರೆಗೆ ಏ.15ರಿಂದ ದೇಶಾದ್ಯಂತ 554 ಗೊತ್ತುಪಡಿಸಿದ ಬ್ಯಾಂಕ್ ಶಾಖೆಗಳಲ್ಲಿ ಮುಂಗಡ ನೋಂದಣಿ ಆರಂಭವಾಗಲಿದ್ದು, ಯಾತ್ರಿಕರಿಗೆ ವಿವರವಾದ ಮಾಹಿತಿ ನೀಡಲಾಗುತ್ತದೆ. ಯಾತ್ರಾ ಪರವಾನಗಿಗಳ ನೋಂದಣಿ ಮತ್ತು ವಿತರಣೆಯನ್ನು ಮೊದಲು ಬಂದವರಿಗೆ ಆದ್ಯತೆಯ ಆಧಾರದ ಮೇಲೆ ನೀಡಲಾಗುತ್ತದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

SASB ನೀಡುವ ಕಡ್ಡಾಯ ಆರೋಗ್ಯ ಪ್ರಮಾಣಪತ್ರ (CHC)ವನ್ನು ಅರ್ಜಿದಾರರು ಏಪ್ರಿಲ್ 8ರಂದು ಅಥವಾ ನಂತರ ಭರ್ತಿ ಮಾಡಬೇಕು. ಅರ್ಜಿಯಲ್ಲಿ ಯಾತ್ರಿಕರು ತಮ್ಮ ಆರೋಗ್ಯ ಸಂಬಂಧಿತ ಸಮಸ್ಯೆಗಳ ಬಗ್ಗೆ ಸಂಪೂರ್ಣ ವಿವರಗಳೊಂದಿಗೆ ಪ್ರತಿ ಪರವಾನಗಿಗೆ 150 ರೂ.ಗಳ ನಿಗದಿತ ಶುಲ್ಕದೊಂದಿಗೆ ಹೆಸರು, ಪ್ರಯಾಣದ ದಿನಾಂಕ, ಆಧಾರ್ ಕಾರ್ಡ್ ಸಂಖ್ಯೆ ಮತ್ತು ಮೊಬೈಲ್ ಸಂಖ್ಯೆ ಸೇರಿದಂತೆ ಅಗತ್ಯವಿರುವ ಎಲ್ಲಾ ವೈಯಕ್ತಿಕ ವಿವರಗಳನ್ನು ಭರ್ತಿ ಮಾಡಿ ಗೊತ್ತುಪಡಿಸಿದ ಶಾಖೆಯಲ್ಲಿ ಸಲ್ಲಿಸಬೇಕಾಗುತ್ತದೆ. ಇದಲ್ಲದೇ ಪ್ರಮಾಣಪತ್ರದಲ್ಲಿ, ಅರ್ಜಿದಾರರು ಉಸಿರಾಟದ ತೊಂದರೆ ಇದ್ದಲ್ಲಿ, ಮಧುಮೇಹ, ಉಸಿರಾಟದ ಕಾಯಿಲೆ, ಅಧಿಕ ರಕ್ತದೊತ್ತಡ, ರಕ್ತದ ಅಸ್ವಸ್ಥತೆ, ಅಸ್ತಮಾ, ರಕ್ತಸ್ರಾವದ ಪ್ರವೃತ್ತಿ, ಅಪಸ್ಮಾರ, ಹೃದಯ ಕಾಯಿಲೆ, ನರಗಳ ಕುಸಿತ, ಕೀಲು ನೋವು, ಎತ್ತರದ ಕಾಯಿಲೆ, ಕಿವಿಯಿಂದ ಸ್ರವಿಸುವಿಕೆ, ಪಾರ್ಶ್ವವಾಯು ಮತ್ತು ಧೂಮಪಾನಕ್ಕೆ ಸಂಬಂಧಿಸಿದ ಯಾವುದೇ ಸಮಸ್ಯೆಗಳಿದ್ದರೆ ಈ ಬಗ್ಗೆ ವಿವರ ನೀಡಬೇಕಾಗುತ್ತದೆ. ಮದುವೆಯಾದ ಮಹಿಳೆಯರು ತಾವು ತಾಯಿಯಾಗುತ್ತಿರುವ ಬಗ್ಗೆ ಗೊತ್ತಿದ್ದರೆ ಅದನ್ನೂ ಸಹ ಪ್ರಸ್ತಾಪಿಸಬೇಕಾಗುತ್ತದೆ.

ಇದಲ್ಲದೆ, ಅರ್ಜಿದಾರರು ಹೃದಯಾಘಾತದಿಂದ ಬಳಲುತ್ತಿದ್ದರೆ, ಕುಟುಂಬದಲ್ಲಿ ಸಂಭವಿಸಿದ ಹಠಾತ್ ಸಾವು, ಈ ಹಿಂದೆ ಗಾಯಗಳಾಗಿದ್ದರೆ, ಯಾವುದೇ ಇತರ ಕಾಯಿಲೆ, ಮಾಡಲಾದ ಶಸ್ತ್ರಚಿಕಿತ್ಸೆಗಳು, ಔಷಧಿಗಳನ್ನು ತೆಗೆದುಕೊಳ್ಳುತ್ತಿರುವ ಬಗ್ಗೆ ಮತ್ತು ಯಾವುದೇ ರೀತಿಯ ಔಷಧಿಗಳಿಗೆ ಅಲರ್ಜಿಯನ್ನು ಹೊಂದಿದ್ದರೆ ಅದನ್ನೂ ಸಹ ಘೋಷಿಸಬೇಕಾಗುತ್ತದೆ. ಅರ್ಜಿದಾರರ ಛಾಯಾಚಿತ್ರ ಇರಬೇಕು ಮತ್ತು ನಮೂನೆಯನ್ನು ಅಧಿಕೃತ ವೈದ್ಯರು ಸರಿಯಾಗಿ ದೃಢೀಕರಿಸಬೇಕು. ಈ ಪ್ರಕ್ರಿಯೆಗಾಗಿ, 37 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಕಡ್ಡಾಯ ಆರೋಗ್ಯ ಪ್ರಮಾಣಪತ್ರಗಳನ್ನು ನೀಡಲು ಅಧಿಕಾರ ಹೊಂದಿರುವ ವೈದ್ಯರು ಮತ್ತು ಸಂಸ್ಥೆಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ ಎಂದು ಮಂಡಳಿ ಹೇಳಿದೆ.
Share.

'ಸಂಭ್ರಮಪ್ರಭ.ಕಾಮ್' (sambramaprabha.com) ಕನ್ನಡಿಗರ ವಿಶ್ವಾಸಾರ್ಹ ಡಿಜಿಟಲ್ ನ್ಯೂಸ್ ಪೋರ್ಟಲ್. ರಾಜ್ಯ, ರಾಷ್ಟ್ರ, ರಾಜಕೀಯ, ಮನರಂಜನೆ, ಕ್ರೀಡೆ ಹಾಗೂ ಸ್ಥಳೀಯ ವಿದ್ಯಮಾನಗಳ ನಿಖರ ಮತ್ತು ನೈಜ ಸುದ್ದಿಗಳನ್ನು ಅತ್ಯಂತ ವೇಗವಾಗಿ ನಿಮ್ಮ ಮುಂದಿಡುವುದೇ ನಮ್ಮ ಪ್ರಮುಖ ಗುರಿ. ಸತ್ಯ, ನಿಷ್ಪಕ್ಷಪಾತ ಹಾಗೂ ಜನಪರ ಪತ್ರಿಕೋದ್ಯಮದ ಆಶಯದೊಂದಿಗೆ ನಾವು ಹೆಜ್ಜೆ ಇಡುತ್ತಿದ್ದೇವೆ. ಸದಾ ಸತ್ಯದ ಪರ, ನಿಮ್ಮ ಧ್ವನಿಯಾಗಿ. ಸಂಪಾದಕರು: ಸುರೇಶ್ ಕೆ.ಟಿ (Suresh K.T)

Leave A Reply

Exit mobile version