Updated By: Priyalachhi
ಬೆಂಗಳೂರು: ಒಂದೆಡೆ ಕಾಂಗ್ರೆಸ್ ಪವರ್ ಫೈಟ್ಗೆ ತಾತ್ಕಾಲಿಕ ಬ್ರೇಕ್ ಬಿದ್ದಿದೆ. ಇನ್ನೊಂದೆಡೆ ಸಿಎಂ-ಡಿಸಿಎಂ ನಡುವೆ ಮತ್ತೊಂದು ಬ್ರೇಕ್‌ಫಾಸ್ಟ್ ಮೀಟಿಂಗ್ ನಡೆಯಲಿದೆ. ಇತ್ತೀಚೆಗೆ ಸಿಎಂ ಆಯೋಜಿಸಿದ ಬ್ರೇಕ್‌ಫಾಸ್ಟ್ ಬಳಿಕ ಇಂದು ಡಿಸಿಎಂ ಡಿಕೆಶಿ ತಮ್ಮ ನಿವಾಸದಲ್ಲಿ ಸಿದ್ದರಾಮಯ್ಯನವರನ್ನು ಬೆಳಗಿನ ಉಪಹಾರಕ್ಕೆ ಆಹ್ವಾನಿಸಿದ್ದಾರೆ. ಬೆಳಗ್ಗೆ 9.30ಕ್ಕೆ ಡಿಕೆಶಿ ಅವರ ಸದಾಶಿವನಗರದ ನಿವಾಸದಲ್ಲಿ ಉಭಯ ನಾಯಕರು ಬ್ರೇಕ್‌ಫಾಸ್ಟ್ ಮಾಡಲಿದ್ದಾರೆ.
ಕಳೆದ ಶನಿವಾರ ಸಿಎಂ ನಿವಾಸದಲ್ಲಿ ಡಿಸಿಎಂಗೆ ಬ್ರೇಕ್‌ಫಾಸ್ಟ್ ಆಯೋಜಿಸಲಾಗಿತ್ತು. ಅಂದೇ ಸಿಎಂಗೂ ತಮ್ಮ ಮನೆಗೆ ಬ್ರೇಕ್‌ಫಾಸ್ಟ್‌ಗೆ ಬರುವಂತೆ ಡಿಕೆಶಿ ಆಹ್ವಾನಿಸಿದ್ದರು. ಹೀಗಾಗಿ ಇಂದು ಸಿಎಂಗೆ ಡಿಸಿಎಂ ಬ್ರೇಕ್‌ಫಾಸ್ಟ್ ಆತಿಥ್ಯ ನೀಡಲಿದ್ದು, ಸಹಜವಾಗಿಯೇ ರಾಜಕೀಯವಾಗಿ ಕುತೂಹಲ ಮೂಡಿಸಿದೆ.
ನಾನು ಮತ್ತು ಸಿಎಂ ಸಹೋದರರಂತೆ ಕೆಲಸ ಮಾಡ್ತಿದ್ದೀವಿ-ಡಿಕೆಶಿ: ಬ್ರೇಕ್‌ಫಾಸ್ಟ್ ಸಭೆ ಬಗ್ಗೆ ಸೋಮವಾರ ಮಾತಾಡಿರುವ ಡಿಕೆಶಿ, “ನಮ್ಮ ನಡುವೆ ಯಾವುದೇ ಗೊಂದಲ ಇಲ್ಲ. ಗುಂಪು ಇಲ್ಲ. ನಾನು ಮತ್ತು ಸಿಎಂ ಸಹೋದರರಂತೆ ಕೆಲಸ ಮಾಡ್ತಿದ್ದೀವಿ. 140 ಜನ ಶಾಸಕರೂ ನಮ್ಮವರೇ, ಒಟ್ಟಿಗೇ ಹೋಗ್ತೀವಿ. ಬ್ರೇಕ್‌ಫಾಸ್ಟ್ ಎಲ್ಲ ಅಗತ್ಯವಿಲ್ಲ. ಆದರೂ ಮಾಧ್ಯಮಗಳ ಒತ್ತಡಕ್ಕೆ ಇದೆಲ್ಲ ಅಂದಿದ್ದಾರೆ” ಎಂದು ಹೇಳಿದರು.
ನಾಳೆ ಪಕ್ಷದ ಗೊಂದಲಗಳ ಜತೆಗೆ ಕೇಂದ್ರಕ್ಕೆ ಸರ್ವಪಕ್ಷ ನಿಯೋಗ ಕೊಂಡೊಯ್ಯುವ ಬಗ್ಗೆಯೂ ಸಿಎಂ – ಡಿಸಿಎಂ ತೀರ್ಮಾನ ಮಾಡುವ ಸಾಧ್ಯತೆ ಇದೆ. ಇಂದಿನಿಂದ ಸಂಸತ್ ಅಧಿವೇಶನದ ಹಿನ್ನೆಲೆಯಲ್ಲಿ ಸಂಸತ್ನಲ್ಲಿ ರಾಜ್ಯದ ಜಲ ಯೋಜನೆ, ಬೆಳೆಗಳಿಗೆ ಬೆಂಬಲ ಬೆಲೆ, ಖರೀದಿ ಕೇಂದ್ರ, ಅನುದಾನ ಸೇರಿ ಹಲವು ವಿಚಾರಗಳನ್ನು ಪ್ರಸ್ತಾಪಿಸಿ ಕೇಂದ್ರದ ಗಮನಕ್ಕೆ ತರಲು ನಿಯೋಗ ಕೊಂಡೊಯ್ಯಲಿದ್ದಾರೆ. ಈ ವಾರದಲ್ಲೇ ದೆಹಲಿಗೆ ಸಿಎಂ-ಡಿಸಿಎಂ ಹೋಗುವ ಸಾಧ್ಯತೆಯಿದ್ದು, ದೆಹಲಿಯಲ್ಲಿ ಸರ್ವಪಕ್ಷ ಸಭೆ ನಡೆಸಲಿದ್ದಾರೆ. ರಾಜ್ಯದ ಎಲ್ಲ ಸಂಸದರೊಂದಿಗೆ ಚರ್ಚೆ ನಡೆಸಿ ಪ್ರಧಾನಿ ಹಾಗೂ ಕೇಂದ್ರದ ಸಚಿವರಿಗೆ ಮನವಿ ಕೊಡಲಿದ್ದಾರೆ.
