Updated By: Priyalachhi
ಹಾಸನ: “ನೀವು 135 ಸೀಟ್ ಗೆದ್ರಲ್ಲಾ? ಇವಿಎಂ ಬಳಸಿದ್ರಾ ಅಥವಾ ಬ್ಯಾಲೆಟ್ ಪೇಪರ್ ಬಳಸಿದ್ರಾ?” ಎಂದು ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಪ್ರಶ್ನಿಸಿದ್ದಾರೆ.
ಹಾಸನದಲ್ಲಿ ಬುಧವಾರ ಮಾತನಾಡಿದ ಅವರು, “ನಮ್ಮ ಪಕ್ಷ ಇದುವರೆಗೂ ಇವಿಎಂ ಬಗ್ಗೆ ಚರ್ಚೆ ಮಾಡಿಲ್ಲ. ಬ್ಯಾಲೆಟ್ ಪೇಪರ್ ಬಗ್ಗೆನೂ ಚರ್ಚಿಸಿಲ್ಲ. ಚರ್ಚೆ ಮಾಡುತ್ತಿರುವವರು ಯೋಚನೆ ಮಾಡಬೇಕು. ಕಾಂಗ್ರೆಸ್‌ನವರು ಇವಿಎಂ ಬಗ್ಗೆ ಚರ್ಚೆ ಮಾಡ್ತಾರೆ” ಎಂದರು.
“ಸ್ಥಳೀಯ ಸಂಸ್ಥೆಗಳ ಚುನಾವಣೆಯನ್ನು ಮೈತ್ರಿ ಹೊಂದಾಣಿಕೆಯಲ್ಲಿ ಎದುರಿಸಬೇಕು ಎಂಬುದು ನಮ್ಮ ನಿಲುವು. ನಮ್ಮ ಪಕ್ಷದ ರಾಷ್ಟ್ರೀಯ ಅಧ್ಯಕ್ಷರು ಸ್ಥಳೀಯ ಸಂಸ್ಥೆಗಳ ಚುನಾವಣೆ ಬಗ್ಗೆ ಈಗಾಗಲೇ ಹೇಳಿದ್ದಾರೆ. ಸ್ಥಳೀಯ ಸಂಸ್ಥೆಗಳ ಚುನಾವಣೆಗಳಲ್ಲಿ ಒಡಂಬಡಿಕೆ ಮಾಡಿಕೊಳ್ಳಲು ಕುಳಿತು ಮಾತನಾಡಬೇಕು. ಹಾಸನದಲ್ಲಿ ಒಂದಿಬ್ಬರಿಗೆ ಅಸಮಾಧಾನವಿದೆ. ಅವರ ಕೇಂದ್ರ ನಾಯಕರು ನೋಡಿಕೊಳ್ಳುತ್ತಾರೆ. ನಾಡಿನ ಜನರ ಅಭಿಪ್ರಾಯವೂ ಮೈತ್ರಿಯೇ ಆಗಿದೆ” ಎಂದು ಹೇಳಿದರು.
“ಮೊದಲು ಇಂತಹ ಕೆಟ್ಟ ಸರ್ಕಾರ ತೊಲಗಬೇಕು. ಇದು ನಾನು ಹೇಳುತ್ತಿರುವುದಲ್ಲ, ಕೆಟ್ಟ ಸರ್ಕಾರವನ್ನು ತೆಗೆಯಬೇಕೆಂಬ ಭಾವನೆ ಜನರಲ್ಲಿದೆ. 2006-2007ರಲ್ಲಿ ಮಾಡದೇ ಇರುವ ತಪ್ಪನ್ನು ನನ್ನ ತಲೆ ಮೇಲೆ ಹಾಕಿಕೊಳ್ಳಬೇಕಾಯಿತು. ಮೈತ್ರಿ ವಿಚಾರದಲ್ಲಿ ನಮ್ಮ ಪಕ್ಷದಿಂದ ಕೆಟ್ಟ ಹೆಸರು ಬರಬಾರದು. ಈಗಾಗಲೇ ಒಂದು ಸುತ್ತು ಬಿಜೆಪಿ ನಾಯಕರೊಂದಿಗೆ ಮಾತನಾಡಿದ್ದೇನೆ. ಹೊಸ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರು ಸ್ಥಳೀಯ ಸಂಸ್ಥೆ ಚುನಾವಣೆಗೆ ಉಸ್ತುವಾರಿ ಹಾಕಿದ್ದಾರೆ” ಎಂದು ತಿಳಿಸಿದರು.
ಪೊಲೀಸ್ ಅಧಿಕಾರಿ ರಾಮಚಂದ್ರರಾವ್ ವಿಡಿಯೋ ಪ್ರಕರಣ: ಆ ವ್ಯಕ್ತಿಯ ಹಿನ್ನಲೆ ಏನು? ಘಟನೆ ಬೆಳಕಿಗೆ ಬಂದ ಕೂಡಲೇ ಅಮಾನತು ಮಾಡಬೇಕಿತ್ತು ಎಂದರು. ಇದೇ ವೇಳೆ, 2016-2017ರಲ್ಲಿ ಬಿಳಿಕೆರೆ ಬಳಿ ಚಿನ್ನದ ವ್ಯಾಪಾರಿ ಬಸ್ನಲ್ಲಿ ಮೂರು ಕೋಟಿ ಹಣ ತೆಗೆದುಕೊಂಡು ಬರಬೇಕಾದರೆ ಕಳ್ಳತನ ಮಾಡಿಸಿದರು. ಭ್ರಷ್ಟ ಅಧಿಕಾರಿಗಳಿಗೆ ಈ ಸರ್ಕಾರದಲ್ಲಿ ಸಿಗುವಷ್ಟು ರಕ್ಷಣೆ ಯಾವ ಸರ್ಕಾರದಲ್ಲೂ ಸಿಗಲ್ಲ. 25 ಲಕ್ಷ ಲಂಚದ ಹಣವನ್ನು ಅಬಕಾರಿ ಡಿಸಿ ಸೇರಿ ಇಬ್ಬರು ಅಧಿಕಾರಿಗಳು ತೆಗೆದುಕೊಂಡಿದ್ದಾರೆ. ಅವರನ್ನೇ ಲೋಕಾಯುಕ್ತ ಅಧಿಕಾರಿಗಳು ಹಿಡಿದಿದ್ದಾರೆ. ಇದಕ್ಕಿಂತ ದಾಖಲೆ ಏನು ಬೇಕು ನಿಮಗೆ?” ಎಂದು ಕಿಡಿ ಕಾರಿದರು.
