Updated By: Priyalachhi

ಕನ್ನಡದ ಬಹುಬೇಡಿಕೆ ತಾರೆ ದರ್ಶನ್ ತೂಗುದೀಪ ಬಣ್ಣ ಹಚ್ಚಿರುವ ಈ ವರ್ಷದ ಬಹುನಿರೀಕ್ಷಿತ ಚಿತ್ರ ‘ದಿ ಡೆವಿಲ್’ ಕಳೆದ ಗುರುವಾರ, ಡಿಸೆಂಬರ್ 11ರಂದು ಗ್ರ್ಯಾಂಡ್​​ ರಿಲೀಸ್​ ಕಂಡಿದೆ. ನಿರೀಕ್ಷೆಯಂತೆ ಸಿನಿಮಾ ಉತ್ತಮ ಪ್ರದರ್ಶನ ಮುಂದುವರಿಸಿದೆ. ತೆರೆಕಂಡ ನಾಲ್ಕೇ ದಿನಗಳಲ್ಲಿ ಪ್ರಕಾಶ್​ ವೀರ್​ ನಿರ್ದೇಶನದ ಈ ಚಿತ್ರವು 21.45 ಕೋಟಿ ರೂಪಾಯಿ ಕಲೆಕ್ಷನ್​​ ಮಾಡಿದೆ.

ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಆರೋಪದಲ್ಲಿ ದರ್ಶನ್​​ ಕೇಂದ್ರ ಕಾರಾಗೃಹ ಸೇರಿದ್ದು, ನಾಯಕ ನಟನ ಅನುಪಸ್ಥಿತಿ ಸಿನಿಮಾ ಸುತ್ತಲಿನ ಕುತೂಹಲದ ಜೊತೆಗೆ ಗದ್ದಲವನ್ನು ಹೆಚ್ಚಿಸಿತ್ತು. ನಮ್ಮ ಮೆಚ್ಚಿನ ನಟನನ್ನು ನಾವು ಗೆಲ್ಲಿಸಿಕೊಡುತ್ತೇವೆ ಎಂದು ಅಭಿಮಾನಿಗಳು ಪಣ ತೊಟ್ಟಿದ್ದರೂ, ಇದು ಎಷ್ಟರ ಮಟ್ಟಿಗೆ ಸಾಧ್ಯ ಎಂಬ ಅನುಮಾನ ಸೋಷಿಯಲ್​ ಮೀಡಿಯಾಗಳಲ್ಲಿ ಎದ್ದಿತ್ತು. ಸಿನಿಮಾ ರಿಲೀಸ್​ಗೂ ಮುನ್ನ ದರ್ಶನ್ ಅವರು ತಮ್ಮ ಪತ್ನಿ ವಿಜಯಲಕ್ಷ್ಮಿ ಮೂಲಕ ಅಭಿಮಾನಿಗಳಿಗೆ ಪತ್ರವೊಂದನ್ನು ಕಳುಹಿಸಿದ್ದರು. ಸೋಷಿಯಲ್​ ಮೀಡಿಯಾದಲ್ಲಿ ಶೇರ್ ಮಾಡಲಾದ ಸಂದೇಶದಲ್ಲಿ, ಯಾವುದೇ ನೆಗೆಟಿವಿಟಿಗೆ ಗಮನ ಹರಿಸದೇ ಸಿನಿಮಾಗೆ ಬೆಂಬಲ ಕೊಡಿ ಎಂದು ನಾಯಕ ನಟ ಮನವಿ ಮಾಡಿಕೊಂಡಿದ್ದರು. ಅದರಂತೆ, ಅಭಿಮಾನಿಗಳೂ ಕೂಡಾ ತಾವು ಬೆಂಬಲ ಸೂಚಿಸುವುದಾಗಿ ಭರವಸೆ ನೀಡಿದ್ದರು. ಸಿನಿಮಾವೀಗ ಯಶಸ್ಸಿನಲೆಯಲ್ಲಿದ್ದು, ಅಭಿಮಾನಿಗಳು ಸಂತಸಗೊಂಡಿದ್ದಾರೆ.

‘ದಿ ಡೆವಿಲ್’ 4ನೇ ದಿನದ ಕಲೆಕ್ಷನ್​​: ಸಿನಿಮಾ ಇಂಡಸ್ಟ್ರಿ ಟ್ರ್ಯಾಕರ್​​ ಸ್ಯಾಕ್ನಿಲ್ಕ್ ವರದಿ ಪ್ರಕಾರ, 10 ಕೋಟಿ ರೂಪಾಯಿಯೊಂದಿಗೆ ಬಾಕ್ಸ್​​ ಆಫೀಸ್​ ಪ್ರಯಾಣ ಪ್ರಾರಂಭಿಸಿದ ‘ದಿ ಡೆವಿಲ್’​, ತನ್ನ 4ನೇ ದಿನ ಭಾನುವಾರದಂದು 4.25 ಕೋಟಿ ರೂಪಾಯಿ ಕಲೆಕ್ಷನ್​​ ಮಾಡಿದೆ. ಪ್ಯಾನ್​ ಇಂಡಿಯಾ ಟ್ರೆಂಡ್​ ಜೋರಾಗಿರುವ ಸದ್ಯದ ಪರಿಸ್ಥಿತಿಯಲ್ಲಿ, ಒಂದೇ ಭಾಷೆಯಲ್ಲಿ ತೆರೆಕಂಡು ಈ ಮಟ್ಟಿಗೆ ಕಲೆಕ್ಷನ್​ ಮಾಡುತ್ತಿರೋದು ಒಂದು ಅದ್ಭುತ ಯಶಸ್ಸೇ.

ತ್ರತಂಡ ಕುರಿತು.. ಪ್ರಕಾಶ್ ವೀರ್ ಕಥೆ, ಚಿತ್ರಕಥೆ ಬರೆದು ಆ್ಯಕ್ಷನ್​ ಕಟ್ ಹೇಳಿದ್ದಾರೆ. ಶ್ರೀ ಜೈ ಮಾತಾ ಕಂಬೈನ್ಸ್ ಲಾಂಛನದಲ್ಲಿ ಪ್ರಕಾಶ್ ವೀರ್ ಅವರೇ ಬಿಗ್​ ಬಜೆಟ್​ನಲ್ಲಿ ಚಿತ್ರ ನಿರ್ಮಾಣ ಮಾಡಿದ್ದಾರೆ. ತಾರಾಬಳಗದಲ್ಲಿ ರಚನಾ ರೈ, ಶರ್ಮಿಳಾ ಮಾಂಡ್ರೆ, ತುಳಸಿ,‌ ಅಚ್ಯುತ್​ ಕುಮಾರ್, ಮಹೇಶ್ ಮಂಜ್ರೇಕರ್, ಶ್ರೀನಿವಾಸ ಪ್ರಭು, ಶೋಭ್ ರಾಜ್, ಹುಲಿ ಕಾರ್ತಿಕ್, ಸೋನಿಯಾ, ಯುವರಾಜ್ ಸೇರಿದಂತೆ ಹಲವರಿದ್ದಾರೆ.

Share.

'ಸಂಭ್ರಮಪ್ರಭ.ಕಾಮ್' (sambramaprabha.com) ಕನ್ನಡಿಗರ ವಿಶ್ವಾಸಾರ್ಹ ಡಿಜಿಟಲ್ ನ್ಯೂಸ್ ಪೋರ್ಟಲ್. ರಾಜ್ಯ, ರಾಷ್ಟ್ರ, ರಾಜಕೀಯ, ಮನರಂಜನೆ, ಕ್ರೀಡೆ ಹಾಗೂ ಸ್ಥಳೀಯ ವಿದ್ಯಮಾನಗಳ ನಿಖರ ಮತ್ತು ನೈಜ ಸುದ್ದಿಗಳನ್ನು ಅತ್ಯಂತ ವೇಗವಾಗಿ ನಿಮ್ಮ ಮುಂದಿಡುವುದೇ ನಮ್ಮ ಪ್ರಮುಖ ಗುರಿ. ಸತ್ಯ, ನಿಷ್ಪಕ್ಷಪಾತ ಹಾಗೂ ಜನಪರ ಪತ್ರಿಕೋದ್ಯಮದ ಆಶಯದೊಂದಿಗೆ ನಾವು ಹೆಜ್ಜೆ ಇಡುತ್ತಿದ್ದೇವೆ. ಸದಾ ಸತ್ಯದ ಪರ, ನಿಮ್ಮ ಧ್ವನಿಯಾಗಿ. ಸಂಪಾದಕರು: ಸುರೇಶ್ ಕೆ.ಟಿ (Suresh K.T)

Leave A Reply

Exit mobile version