Updated By: Priyalachhi

ಶಿವಮೊಗ್ಗ: ನಗರದಿಂದ‌ ಬೆಂಗಳೂರಿಗೆ ಹೊರಟಿದ್ದ ಖಾಸಗಿ ನಾನ್ ಎಸಿ ಸ್ಲೀಪರ್ ಬಸ್​ನಲ್ಲಿ ಆಕಸ್ಮಿಕವಾಗಿ ಬೆಂಕಿ ಕಾಣಿಸಿಕೊಂಡು ಬಸ್ ಸಂಪೂರ್ಣ ಸುಟ್ಟು ಕರಕಲಾಗಿರುವ ಘಟನೆ ಸೂಡೂರು ಗ್ರಾಮದ ಬಳಿ ನಡೆದಿದೆ.‌ ಈ ದೃಶ್ಯ ಭಯಾನಕವಾಗಿದೆ.

ಹೊಸನಗರ ತಾಲೂಕು ಅರಸಾಳು ಬಳಿಯ 9ನೇ ಮೈಲಿಗಲ್ಲಿನ ಬಳಿ ಬಸ್​ಗೆ ಆಕಸ್ಮಿಕ ಬೆಂಕಿ ತಗುಲಿದೆ. ಈ ವೇಳೆ ಬಸ್​ನಲ್ಲಿ ಸುಮಾರು 36 ಜನ ಪ್ರಯಾಣಿಕರಿದ್ದರು‌‌. ಎಲ್ಲರಿಗೂ ಸಣ್ಣಪುಟ್ಟ ಗಾಯಗಳಾಗಿವೆ. ಇದರಲ್ಲಿ 12 ಜನರನ್ನು ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ಉಳಿದ ಪ್ರಯಾಣಿಕರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಎಲ್ಲರನ್ನೂ ರಿಪ್ಪನ್​ಪೇಟೆಯ ಆಸ್ಪತ್ರೆಗೆ ದಾಖಲಿಸಿದ್ದು, ಚಿಕಿತ್ಸೆ ಮುಂದುವರೆದಿದೆ. ಸ್ಥಳಕ್ಕೆ ರಿಪ್ಪನ್​ಪೇಟೆ ಠಾಣೆಯ ಪೊಲೀಸರು ಹಾಗೂ ಅಗ್ನಿಶಾಮಕ ದಳದವರು ಆಗಮಿಸಿ ಬೆಂಕಿ ನಂದಿಸುವ ಕಾರ್ಯಾಚರಣೆ ನಡೆಸಿದರು.

ಅನ್ನಪೂರ್ಣ ಹೆಸರಿನ ಖಾಸಗಿ ಬಸ್ ಹೊಸನಗರ ತಾಲೂಕು ನಗರದಿಂದ ಬೆಂಗಳೂರಿಗೆ ಬಸ್ ಪ್ರಯಾಣ ಬೆಳೆಸಿದೆ. ಬಸ್ ನಗರ, ಹೊಸನಗರ ಹಾಗೂ ರಿಪ್ಪನ್​ಪೇಟೆಯಲ್ಲಿ ಪ್ರಯಾಣಿಕರನ್ನು ಪಿಕ್ ಅಪ್ ಮಾಡಿಕೊಂಡು ಅರಸಾಳು ಗ್ರಾಮವನ್ನು ದಾಟಿ 9ನೇ ಮೈಲಿಗಲ್ಲು ಬಳಿ ಬರುತ್ತಿದ್ದಂತೆ ಬಸ್​ನಲ್ಲಿ ಹೊಗೆ ಕಾಣಿಸಿಕೊಂಡಿದೆ. ತಕ್ಷಣ ಬಸ್​ಗೆ ಬೆಂಕಿ ತಗುಲಿದೆ. ಇದರಿಂದ ಗಾಬರಿಯಾದ ಬಸ್ ಚಾಲಕ ಬಸ್ ಅನ್ನು ರಸ್ತೆ ಪಕ್ಕದ ಮರಕ್ಕೆ ಡಿಕ್ಕಿ ಹೊಡೆದು ಬಸ್ ನಿಲ್ಲಿಸಿದ್ದಾರೆ. ಬಸ್ ಪ್ರಯಾಣ ಆರಂಭಿಸಿ ಕೇವಲ‌ 30 ನಿಮಿಷವಾಗಿದೆ. ಅಲ್ಲದೆ ಪ್ರಯಾಣಿಕರು ಇನ್ನೂ ನಿದ್ದೆ ಮಾಡದ ಕಾರಣ ಬಸ್​ಗೆ ಬೆಂಕಿ ಬೀಳುತ್ತಿದ್ದಂತೆ ಬಸ್​ನಿಂದ ಎಲ್ಲರೂ ಇಳಿದು ಬಚಾವ್ ಆಗಿದ್ದಾರೆ.

ಸಮಯ ಪ್ರಜ್ಞೆ ಮೆರೆದ ಬಸ್​ ಚಾಲಕ: ಒಂದು ವೇಳೆ ಬಸ್ ಮರಕ್ಕೆ ಡಿಕ್ಕಿ ಹೊಡೆಯದೆ ಮುಂದಕ್ಕೆ ಸಾಗಿದ್ದರೆ ಸಾಕಷ್ಟು ಅನಾಹುತ ಸಂಭಿಸುವ ಸಾಧ್ಯತೆ ಇತ್ತು. ಅಲ್ಲದೆ, ಬಸ್ ಹೊರಟು ಹೆಚ್ಚಿನ ಸಮಯ ಸಹ ಆಗಿರದ ಕಾರಣ ಬಸ್​ಗೆ ಹೇಗೆ ಬೆಂಕಿ ಬಿದ್ದಿದೆ ಅನ್ನೋದರ ಬಗ್ಗೆ ತಿಳಿದುಬಂದಿಲ್ಲ. ಬಸ್ ಚಾಲಕನ ಸಮಯಪ್ರಜ್ಞೆಯಿಂದ ಹೆಚ್ಚಿನ ಅನಾಹುತ ತಪ್ಪಿದಂತಾಗಿದೆ.‌

Share.

'ಸಂಭ್ರಮಪ್ರಭ.ಕಾಮ್' (sambramaprabha.com) ಕನ್ನಡಿಗರ ವಿಶ್ವಾಸಾರ್ಹ ಡಿಜಿಟಲ್ ನ್ಯೂಸ್ ಪೋರ್ಟಲ್. ರಾಜ್ಯ, ರಾಷ್ಟ್ರ, ರಾಜಕೀಯ, ಮನರಂಜನೆ, ಕ್ರೀಡೆ ಹಾಗೂ ಸ್ಥಳೀಯ ವಿದ್ಯಮಾನಗಳ ನಿಖರ ಮತ್ತು ನೈಜ ಸುದ್ದಿಗಳನ್ನು ಅತ್ಯಂತ ವೇಗವಾಗಿ ನಿಮ್ಮ ಮುಂದಿಡುವುದೇ ನಮ್ಮ ಪ್ರಮುಖ ಗುರಿ. ಸತ್ಯ, ನಿಷ್ಪಕ್ಷಪಾತ ಹಾಗೂ ಜನಪರ ಪತ್ರಿಕೋದ್ಯಮದ ಆಶಯದೊಂದಿಗೆ ನಾವು ಹೆಜ್ಜೆ ಇಡುತ್ತಿದ್ದೇವೆ. ಸದಾ ಸತ್ಯದ ಪರ, ನಿಮ್ಮ ಧ್ವನಿಯಾಗಿ. ಸಂಪಾದಕರು: ಸುರೇಶ್ ಕೆ.ಟಿ (Suresh K.T)

Leave A Reply

Exit mobile version