Updated By: Priyalachhi
ಬೆಂಗಳೂರು: ರಾಜ್ಯದಲ್ಲಿ 2020 ರಿಂದ 2025 ರವರೆಗಿನ ಐದು ವರ್ಷದ ಅವಧಿಯಲ್ಲಿ ಕಾಣೆಯಾದವರ ಕುರಿತು ದಾಖಲಾಗಿರುವ ದೂರುಗಳ ಸಂಖ್ಯೆ ಮತ್ತು ಅಂತಹ ದೂರುಗಳ ಮೇಲೆ ಎಷ್ಟು ಕ್ರಮ ಕೈಗೊಳ್ಳಲಾಗಿದೆ ಮತ್ತು ಎಷ್ಟು ಪ್ರಕರಣಗಳಲ್ಲಿ ನಾಪತ್ತೆಯಾದವರನ್ನು ಪತ್ತೆ ಹಚ್ಚಲಾಗಿದೆ ಎಂಬುದಕ್ಕೆ ಸಂಬಂಧಿಸಿದಂತೆ ಅಂಕಿ – ಅಂಶಗಳನ್ನು ಸಲ್ಲಿಸುವಂತೆ ಹೈಕೋರ್ಟ್ ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಿದೆ.
ತಮ್ಮ ಸಹೋದರ ಕುಮಾರ್ ಅವರು ಕಾಣೆಯಾದ ಪ್ರಕರಣ ಸಂಬಂಧ ದಾಖಲಾಗಿರುವ ದೂರಿನ ಕುರಿತ ವಿವರವಾದ ತನಿಖೆ ನಡೆಸಿ ಪತ್ತೆ ಹಚ್ಚಲು ಪೊಲೀಸರಿಗೆ ನಿರ್ದೇಶನ ನೀಡಬೇಕು ಎಂದು ಕೋರಿ ಮಹೇಶ್ ಎಂಬವರು ಅರ್ಜಿ ಸಲ್ಲಿಸಿದ್ದರು. ಈ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸೂರಜ್ ಗೋವಿಂದರಾಜು ಅವರಿದ್ದ ನ್ಯಾಯಪೀಠ ಈ ಸೂಚನೆ ನೀಡಿ ವಿಚಾರಣೆ ಮುಂದೂಡಿದೆ.
2020 ರಿಂದ 2025ರವರೆಗಿನ ಕಳೆದ ಐದು ವರ್ಷಗಳಲ್ಲಿ ಕಾಣೆಯಾದ ಆರೋಪದ ದೂರುಗಳ ಸಂಖ್ಯೆ, ಪುರುಷರು, ಮಹಿಳೆಯರು, ಮಕ್ಕಳಂತೆ (ಪುರಷ ಮತ್ತು ಮಹಿಳೆ), ವಯಸ್ಸು ಸೇರಿದಂತೆ ವರ್ಗವಾರು ಅಂಕಿ – ಅಂಶಗಳನ್ನು ಸಲ್ಲಿಸಬೇಕು. ಅಲ್ಲದೇ, ಎಷ್ಟು ಪ್ರಕರಣಗಳಲ್ಲಿ ಕಾಣೆಯಾದ ವ್ಯಕ್ತಿಗಳನ್ನು ಪತ್ತೆಹಚ್ಚಿರುವುದು ಸೇರಿದಂತೆ ಕೈಗೊಂಡ ಕ್ರಮಗಳೂ ಸೇರಿ ಸಂಪೂರ್ಣ ದತ್ತಾಂಶವನ್ನು ಸಲ್ಲಿಸಲು ಸೂಚನೆ ನೀಡಿ ವಿಚಾರಣೆಯನ್ನು ಮುಂದೂಡಿದೆ.
ಮಹಿಳೆಯರು, ಮಕ್ಕಳು, ವೃದ್ಧರು ಕಾಣೆಯಾಗುವಂತೆ ಪ್ರಕರಣಗಳು ಅತ್ಯಂತ ಗಂಭೀರ ವಿಚಾರವಾಗಿದೆ. ಈ ರೀತಿಯ ಆರೋಪಗಳಲ್ಲಿ ದಾಖಲಾಗುತ್ತಿರುವ ಪ್ರಕರಣಗಳ ತನಿಖೆಯಲ್ಲಿ ಯಾವುದೇ ಪ್ರಗತಿ ಕಾಣುತ್ತಿಲ್ಲ ಎಂದು ಪೀಠ ಮೌಖಿಕವಾಗಿ ಅಭಿಪ್ರಾಯ ವ್ಯಕ್ತಪಡಿಸಿದೆ.
ವಿಚಾರಣೆ ವೇಳೆ ಸರ್ಕಾರದ ಪರ ವಕೀಲರು, ಈ ಪ್ರಕರಣದಲ್ಲಿ ಕುಮಾರ್ ಎಂಬುವರು ಕಾಣೆಯಾದ ಒಂದು ವರ್ಷದ ಬಳಿಕ ದೂರು ದಾಖಲಾಗಿದೆ ಮತ್ತು ಕಾಣೆಯಾದ ವ್ಯಕ್ತಿಯನ್ನು ಪತ್ತೆ ಹಚ್ಚಲು ಪೊಲೀಸರು ಅಗತ್ಯವಿರುವ ಎಲ್ಲ ಪ್ರಯತ್ನಗಳನ್ನು ಮಾಡಿದ್ದಾರೆ ಎಂದು ಪೀಠಕ್ಕೆ ವಿವರಿಸಿದರು. ವಾದ ಆಲಿಸಿದ ಪೀಠ, ಈ ಸೂಚನೆ ನೀಡಿ ವಿಚಾರಣೆಯನ್ನು ಮುಂದೂಡಿತು.

