ರಾಜಕೀಯರಾಜ್ಯ

ಬಿಜೆಪಿಯಿಂದ ಸೈಲೆಂಟ್ ಸುನೀಲ್ ಸದಸ್ಯತ್ವ ರದ್ದು..

Silent Sunil's membership canceled by BJP..

ಬಿಜೆಪಿಯಿಂದ ಸೈಲೆಂಟ್ ಸುನೀಲ್ ಸದಸ್ಯತ್ವ ರದ್ದು..

ಬೆಂಗಳೂರು: ಬಿಜೆಪಿ ಸದಸ್ಯತ್ವದ ವಿಚಾರವಾಗಿ ಚರ್ಚೆಗೆ ಕಾರಣವಾಗಿದ್ದ ರೌಡಿಶೀಟರ್​ ಸುನೀಲ್ ಕುಮಾರ್ ಅಲಿಯಾಸ್​ ಸೈಲೆಂಟ್ ಸುನೀಲ್ ಸದಸ್ಯತ್ವವನ್ನು ರದ್ದುಗೊಳಿಸಲಾಗಿದ್ದು, ಪಕ್ಷದಿಂದ ಅವರನ್ನು ಉಚ್ಚಾಟಿಸಲಾಗಿದೆ ಎಂದು ರಾಜ್ಯ ಬಿಜೆಪಿ ಬೆಂಗಳೂರು ಘಟಕ ಘೋಷಿಸಿದೆ.
ಬೆಂಗಳೂರಿನ ಚಾಮರಾಜಪೇಟೆಯಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಸೈಲೆಂಟ್ ಸುನೀಲ್​ಗೆ ಬಿಜೆಪಿ ಸದಸ್ಯತ್ವ ನೀಡಲಾಗಿತ್ತು ಎಂದು ಹೇಳಲಾಗಿತ್ತು. ಕಾರ್ಯಕ್ರಮದಲ್ಲಿ ಬಿಜೆಪಿ ನಾಯಕರು ರೌಡಿಶೀಟರ್​ ಸೈಲೆಂಟ್ ಸುನೀಲ್ ಜೊತೆ ವೇದಿಕೆ ಹಂಚಿಕೊಂಡಿರುವುದು ವಿವಾದಕ್ಕೆ ಕಾರಣವಾಗಿತ್ತು. ಅಲ್ಲದೇ ಇತ್ತೀಚೆಗೆ ಸೈಲೆಂಟ್ ಸುನೀಲ್ ಅವರ ಅಧಿಕೃತ ಬಿಜೆಪಿ ಸದಸ್ಯತ್ವ ಕಾರ್ಡ್ ಸೋಷಿಯಲ್​ ಮೀಡಿಯಾದಲ್ಲಿ ವೈರಲ್​ ಆಗಿತ್ತು.

ಇದರ ಬೆನ್ನಲ್ಲೇ ಬಿಜೆಪಿ ಸುನೀಲ್​ ಸದಸ್ಯತ್ವ ರದ್ದಿನ ಕುರಿತು ಪ್ರಕಟಣೆಯೊಂದನ್ನು ಹೊರಡಿಸಿದೆ. “ಚಾಮರಾಜಪೇಟೆ ವಿಧಾನಸಭಾ ಕ್ಷೇತ್ರದಲ್ಲಿ ಸದಸ್ಯತ್ವ ಅಭಿಯಾನದ ವೇಳೆ ಅಥವಾ ಮಿಸ್ ಕಾಲ್ ಮೂಲಕ ಸೈಲೆಂಟ್ ಸುನೀಲ್ ಬಿಜೆಪಿ ಸೇರಿರಬಹುದು. ಸೈಲೆಂಟ್ ಸುನೀಲ್ ಅವರ ಸದಸ್ಯತ್ವವನ್ನು ರದ್ದುಪಡಿಸಲಾಗಿದೆ. ಈಗಾಗಲೇ ನಮ್ಮ ಪಕ್ಷದ ರಾಜ್ಯಾಧ್ಯಕ್ಷರು ಹೇಳಿರುವ ಪ್ರಕಾರ ಯಾವುದೇ ಕಾರಣಕ್ಕೂ ಸೈಲೆಂಟ್​ ಸುನೀಲ್​ ಅಂತವರಿಗೆ ಎಂದು ಪಕ್ಷದಲ್ಲಿ ಅವಕಾಶ ನೀಡುವುದಿಲ್ಲ” ಬೆಂಗಳೂರು ಬಿಜೆಪಿ ಕೇಂದ್ರ ಘಟಕದ ಜಿಲ್ಲಾಧ್ಯಕ್ಷರಾದ ಮಂಜುನಾಥ್ ಅವರು ಪ್ರಕಟಣೆಯ ಮೂಲಕ ತಿಳಿಸಿದ್ದಾರೆ.

ಸುನೀಲ್ ಕುಮಾರ್ ಅವರನ್ನು ಬೆಂಗಳೂರು ಪೊಲೀಸರು ಸೈಲೆಂಟ್ ಸುನೀಲ್ ಎಂದು ಕರೆಯುತ್ತಾರೆ, ಏಕೆಂದರೆ ಆತ ಪೊಲೀಸ್ ವಿಚಾರಣೆಯ ಸಮಯದಲ್ಲಿ ಮೌನವಾಗಿರುತ್ತಾನೆ, ಇಲ್ಲವೆಂದರೆ ಪೊಲೀಸರು ಕೇಳುವ ಪ್ರಶ್ನೆಗಳಿಗೆ ಕೇವಲ ಒಂದೇ ಪದದ ಉತ್ತರಗಳನ್ನು ನೀಡುತ್ತಾನಂತೆ. ಒಂದು ಕಾಲದಲ್ಲಿ ಬೆಂಗಳೂರಿನ ಅತ್ಯಂತ ಭಯಭೀತ ಕಿಲ್ಲರ್​ಗಳಲ್ಲಿ ಒಬ್ಬ ಎಂದು ಪರಿಗಣಿಸಲ್ಪಟ್ಟಿದ್ದ ಸುನೀಲ್, ಈಗ ತಾನು ಅಪರಾಧ ಚಟುವಟಿಕೆಗಳನ್ನು ದೂರವಿದ್ದು ಸಮಾಜ ಸೇವೆಯ ಕಾರ್ಯವನ್ನು ಕೈಗೊಂಡಿರುವುದಾಗಿ ಹೇಳಿಕೊಂಡಿದ್ದಾನೆ.

ಕಳೆದ ವರ್ಷ ನವೆಂಬರ್​​ನಲ್ಲಿ ಚಾಮರಾಜಪೇಟೆಯಲ್ಲಿ ರಾಜ್ಯ ಕೂಲಿ ಕಾರ್ಮಿಕರ ಹಾಗೂ ಆಟೋ ಚಾಲಕರ ಸಂಘ ಸೇರಿದಂತೆ ವಿವಿಧ ಸಂಸ್ಥೆಗಳು ಜಂಟಿಯಾಗಿ ಅಪ್ಪು ನಮನ ಮತ್ತು ರಕ್ತದಾನ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಈ ಕಾರ್ಯಕ್ರಮದಲ್ಲಿ ರೌಡಿ ಶೀಟರ್ ಸೈಲೆಂಟ್ ಸುನೀಲ್ ಜೊತೆ ಸಂಸದರಾದ ಪಿಸಿ ಮೋಹನ್, ತೇಜಸ್ವಿ ಸೂರ್ಯ, ಚಿಕ್ಕಪೇಟೆ ಶಾಸಕ ಉದಯ್ ಗರುಡಾಚಾರ್, ಬೆಂಗಳೂರು ದಕ್ಷಿಣ ಬಿಜೆಪಿ ಅಧ್ಯಕ್ಷ ಎನ್ ಆರ್ ರಮೇಶ್ ಕಾಣಿಸಿಕೊಂಡಿದ್ದರು. ಇದರ ವಿಡಿಯೋ ಹಾಗೂ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ವೈರಲ್​ ಆಗಿ, ಬಿಜೆಪಿ ಸರ್ಕಾರವು ಕಾಂಗ್ರೆಸ್​​ ವಾಗ್ದಾಳಿಗೆ ತುತ್ತಾಗಿತ್ತು.

ಈ ಬಗ್ಗೆ ಸರಣಿ ಟ್ವೀಟ್ ಗಳನ್ನು ಮಾಡಿದ್ದ ಕಾಂಗ್ರೆಸ್, “ಬಿಜೆಪಿಯಲ್ಲಿ ಈ ಮೊದಲು ವೈಟ್ ಕಾಲರ್ ರೌಡಿಗಳಿದ್ದರು, ಈಗ ರಿಯಲ್ ರೌಡಿಗಳು ಸೇರಿದ್ದಾರೆ. ಮುಂದೆ ಭೂಗತ ಪಾತಕಿ ದಾವೂದ್ ಇಬ್ರಾಹಿಂ ಕೂಡ ಬಿಜೆಪಿ ಸೇರಿ ಪಾವನನಾಗಬಹುದು! ಪಾತಕಿಗಳು, ದರೋಡೆಕೋರರು, ಡ್ರಗ್ ಪೆಡ್ಲರ್‌ಗಳು, ಕ್ರೀಮಿನಲ್‌ಗಳು, ಭ್ರಷ್ಟರು, ರೇಪಿಸ್ಟರು ಎಲ್ಲರಿಗೂ ಭಾರತೀಯ ಜನತಾ ಪಕ್ಷ ತವರು ಮನೆ ಇದ್ದಂತೆ!” ಎಂದು ತರಾಟೆಗೆ ತೆಗೆದುಕೊಂಡಿತ್ತು.

“ವಾಂಟೆಂಡ್ ಕ್ರಿಮಿನಲ್‌ಗಳೆಲ್ಲ ಈಗ ಬಿಜೆಪಿಗೆ ವಾಂಟೆಂಡ್! ರೌಡಿ ಶೀಟರ್‌ಗಳನ್ನು ಪಕ್ಕದಲ್ಲಿಟ್ಟುಕೊಳ್ಳುವ ಹಾಗೂ ಪಕ್ಷಕ್ಕೆ ಸೇರಿಸಿಕೊಳ್ಳುವ ಮೂಲಕ ಬಿಜೆಪಿ ಕಚೇರಿ ಈಗ ರೌಡಿಗಳ ಅಡ್ಡೆಯಾಗಿದೆ. ಬಿಜೆಪಿ ಈಗ ಮತ್ತೊಬ್ಬ ರೌಡಿ ಫೈಟರ್ ರವಿ ಎಂಬಾತನನ್ನು ಪಕ್ಷಕ್ಕೆ ಸೇರಿಸಿಕೊಂಡ ಸಂಸ್ಕೃತಿ ಪಾಲನೆಗೆ ಮುಂದಾಗಿದೆ!” ಎಂದು ಕಾಂಗ್ರೆಸ್​ ಹೇಳಿತ್ತು. “ಬಿಜೆಪಿಯವರಿಗೆ ಕುಸ್ತಿ ಮಾಡಲು ಜನ ಬೇಕಾಗಿದೆ. ಹೀಗಾಗಿ ರೌಡಿಗಳನ್ನು ಪಕ್ಷಕ್ಕೆ ಸೇರಿಸಿಕೊಳ್ಳುತ್ತಿದ್ದಾರೆ” ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್​ ವ್ಯಂಗ್ಯವಾಡಿದ್ದರು.

ಆದರೆ ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್​ ಕುಮಾರ್​ ಕಟೀಲ್​, “ಯಾವುದೇ ಕಾರಣಕ್ಕೂ ಸೈಲೆಂಟ್ ಸುನೀಲ್ ನನ್ನು ಪಕ್ಷಕ್ಕೆ ಸೇರಿಸಿಕೊಳ್ಳುವುದಿಲ್ಲ. ಆತನ ಜೊತೆಗೆ ಪಕ್ಷದ ಕೆಲವು ಮುಖಂಡರು ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿರುವ ಬಗ್ಗೆ ಮಾಹಿತಿ ಸಂಗ್ರಹಿಸುತ್ತಿದ್ದೇನೆ. ಆ ನಾಯಕರಿಂದ ವಿವರಣೆ ಕೇಳಲಾಗುವುದು. ಇಂತಹ ಘಟನೆಗಳು ಮರುಕಳಿಸದಂತೆ ನೋಡಿಕೊಳ್ಳುವಂತೆ ನಾಯಕರಿಗೆ ಸೂಚಿಸಿದ್ದು, ಎಲ್ಲ ವಿಷಯಗಳನ್ನು ಪಕ್ಷದ ಗಮನಕ್ಕೆ ತರುವಂತೆ ಸೂಚಿಸಲಾಗಿದೆ. ಪಕ್ಷವು ಭಯೋತ್ಪಾದಕರು, ಭಯೋತ್ಪಾದಕ ಚಟುವಟಿಕೆಗಳನ್ನು ಬೆಂಬಲಿಸುವವರು ಮತ್ತು ಅಪರಾಧ ಹಿನ್ನೆಲೆ ಹೊಂದಿರುವವರನ್ನು ಎಂದಿಗೂ ಸಹಿಸುವುದಿಲ್ಲ” ಎಂದು ಹೇಳಿದ್ದರು.

ಇದನ್ನೂ ಓದಿ...

Back to top button
>