Updated By: Priyalachhi
ನವದೆಹಲಿ/ಮೈಸೂರು: ಕೇಂದ್ರ ಸರ್ಕಾರದ ವಾರ್ತಾ ಮತ್ತು ಪ್ರಸಾರ ಸಚಿವಾಲಯದ ಅಧೀನದಲ್ಲಿ ಮೈಸೂರಿನಲ್ಲಿ ಕಾರ್ಯ ನಿರ್ವಹಿಸುತ್ತಿರುವ ಕೇಂದ್ರೀಯ ಸಂಪರ್ಕ ಬ್ಯೂರೋ (ಸೆಂಟ್ರಲ್ ಬ್ಯೂರೋ ಆಫ್ ಕಮ್ಯುನಿಕೇಷನ್-CBC) ಕಚೇರಿಯನ್ನು ಸ್ಥಗಿತಗೊಳಿಸುವ ಕ್ರಮ ಕೈಗೊಳ್ಳಬಾರದು ಎಂದು ಕೇಂದ್ರದ ಬೃಹತ್ ಕೈಗಾರಿಕೆ ಮತ್ತು ಉಕ್ಕು ಖಾತೆ ಸಚಿವ ಹೆಚ್.ಡಿ.ಕುಮಾರಸ್ವಾಮಿ ಮನವಿ ಮಾಡಿದ್ದಾರೆ.
ಕೇಂದ್ರ ವಾರ್ತಾ ಮತ್ತು ಪ್ರಸಾರ ಖಾತೆ ಸಚಿವ ಅಶ್ವಿನಿ ವೈಷ್ಣವ್ ಅವರಿಗೆ ಪತ್ರ ಬರೆದಿರುವ ಕುಮಾರಸ್ವಾಮಿ, “ಮೈಸೂರಿನಲ್ಲಿ ಕೇಂದ್ರೀಯ ಸಂಪರ್ಕ ಬ್ಯೂರೋವನ್ನು ಮತ್ತಷ್ಟು ಉನ್ನತೀಕರಿಸಿ ಯಥಾಸ್ಥಿತಿಯಲ್ಲಿ ಮುಂದುವರಿಸುವುದು ಅತ್ಯಗತ್ಯ. ರಾಜ್ಯದಲ್ಲೇ ಮೈಸೂರು ನಗರಕ್ಕೆ ಐತಿಹಾಸಿಕ ಪ್ರಾಮುಖ್ಯತೆ ಇದೆ. ಇಲ್ಲಿಗೆ ದೇಶ, ವಿದೇಶಗಳಿಂದ ಅಸಂಖ್ಯಾತ ಪ್ರವಾಸಿಗರು ಭೇಟಿ ನೀಡುತ್ತಾರೆ. ಕೇಂದ್ರ ಸರ್ಕಾರ ಕೈಗೊಳ್ಳುತ್ತಿರುವ ಜನಪರ ಕಾರ್ಯಕ್ರಗಳನ್ನು ಪ್ರಸರಿಸುವಲ್ಲಿ ಈ ಬ್ಯೂರೋ ಪ್ರಮುಖ ಪಾತ್ರ ವಹಿಸುತ್ತಿದೆ. ಮುಖ್ಯವಾಗಿ ಮೈಸೂರು, ಚಾಮರಾಜನಗರ, ಕೊಡಗು, ಹಾಸನ ಜಿಲ್ಲೆಗಳ ಜನತೆಗೆ ಮಾಹಿತಿ ನೀಡುವಲ್ಲಿ ಉತ್ತಮವಾಗಿ ಕೆಲಸ ಮಾಡುತ್ತಿದೆ. ಒಂದು ವೇಳೆ ಈ ಬ್ಯೂರೋದ ಕಚೇರಿ ಸ್ಥಗಿತವಾದರೆ ಕೇಂದ್ರ ಸರ್ಕಾರ ಹಾಗೂ ಜನರ ನಡುವಿನ ಸಂಪರ್ಕ ಸೇತುವೆ ಇಲ್ಲದಾಗುತ್ತದೆ”.
“ಮೈಸೂರು ಮತ್ತು ಸುತ್ತಮುತ್ತಲಿನ ಜಿಲ್ಲೆಗಳು ಅನನ್ಯ ಸಾಂಸ್ಕೃತಿಕ ಮತ್ತು ಐತಿಹಾಸಿಕ ಮಹತ್ವವನ್ನು ಹೊಂದಿವೆ. ಮೈಸೂರು ನಗರವನ್ನು ಕರ್ನಾಟಕದ ಸಾಂಸ್ಕೃತಿಕ ರಾಜಧಾನಿ ಎಂದು ಪರಿಗಣಿಸಲಾಗಿದೆ. ಈ ನಗರವು ಮೈಸೂರು ಅರಮನೆ ಮತ್ತು ಜಗನ್ಮೋಹನ ಅರಮನೆಯಂತಹ ಸಾಂಪ್ರದಾಯಿಕ ಪರಂಪರೆಯ ಹೆಗ್ಗುರುತುಗಳಿಗೆ ನೆಲೆಯಾಗಿದೆ ಮತ್ತು ಅಲ್ಲದೆ ಜಗದ್ವಿಖ್ಯಾತ ದಸರಾ ಮಹೋತ್ಸವದ ಮೂಲಕ ವಿಶ್ವಪ್ರಸಿದ್ಧಿ ಹೊಂದಿದೆ. ಈ ಮೂಲಕ ಭಾರತೀಯ ಶ್ರೀಮಂತ ಸಾಂಸ್ಕೃತಿಕ ಮೇರು ನೆಲೆಯಾಗಿ ಮೈಸೂರು ಗುರುತಿಸಲ್ಪಡುತ್ತದೆ. ಹೀಗಾಗಿ ಇಲ್ಲಿ ಅನೇಕ ಸಾಂಸ್ಕೃತಿಕ, ಕಲಾ, ಸಂಗೀತ, ಪ್ರವಾಸಿ ಕಾರ್ಯಕ್ರಮಗಳು ನಿರಂತರವಾಗಿ ನಡೆಯುತ್ತವೆ. ಇಂಥ ಸಮಯದಲ್ಲಿ ಸುಗಮ ಸಂವಹನ, ಸಮನ್ವಯ ಮತ್ತು ಸಾರ್ವಜನಿಕ ಸಂಪರ್ಕವನ್ನು ಖಚಿತಪಡಿಸಿಕೊಳ್ಳಲು ಕ್ರಿಯಾತ್ಮಕವಾಗಿ ಕೆಲಸ ಮಾಡುವ ಕೇಂದ್ರೀಯ ಸಂಪರ್ಕ ಬ್ಯೂರೋ ಕಚೇರಿ ಇರುವುದು ಅತ್ಯಗತ್ಯ.”

