ಪಂಜಾಬ್: ಕಳೆದ ಹಲವು ದಿನಗಳಿಂದ ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸುತ್ತ ಪರಾರಿಯಾಗಿದ್ದ ಖಲಿಸ್ತಾನಿ ಬೆಂಬಲಿಗ, ವಾರೀಸ್ ಪಂಜಾಬ್ ದೇ ಸಂಘಟನೆಯ ನಾಯಕ ಅಮೃತ್ಪಾಲ್ ಸಿಂಗ್ (Amritpal Singh) ಬಂಧನವಾಗಿದೆ. ಪಂಜಾಬ್ನ ಮೋಗಾ ಜಿಲ್ಲೆಯಲ್ಲಿ ಈತನನ್ನು ಬಂಧಿಸಲಾಗಿದೆ. ಆತನನ್ನು ಅಸ್ಸಾಂನ ದಿಬ್ರುಗಢ ಜೈಲಿಗೆ ಕಳುಹಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.
ಈ ವರ್ಷದ ಫೆಬ್ರವರಿಯಲ್ಲಿ, ಅಮೃತ್ಪಾಲ್ ಸಿಂಗ್ ಅಮೃತಸರದ ಅಜ್ನಾಲಾ ಪೊಲೀಸ್ ಠಾಣೆಯ ಮುಂದೆ ಬೃಹತ್ ಪ್ರತಿಭಟನೆ ನಡೆಸಿದ್ದ. ಈ ಮೂಲಕ ಬಂಧನದಲ್ಲಿದ್ದ ತನ್ನ ಸಹಚರ ಲವ್ಪ್ರೀತ್ ತೂಫಾನ್ನನ್ನು ಜೈಲಿನಿಂದ ಬಿಡಿಸಿಕೊಂಡುಬಂದಿದ್ದ. ಮೃತ್ಪಾಲ್ ಸಿಂಗ್ ನೇತೃತ್ವದಲ್ಲಿ ಹೋರಾಟ ನಡೆದಿತ್ತು. ವಾರಿಸ್ ಪಂಜಾಬ್ ದೇ ಸಂಘಟನೆಯ ಕಾರ್ಯಕರ್ತರು ಖಡ್ಗ, ಬಂದೂಕು, ದೊಣ್ಣೆ ಹಿಡಿದುಕೊಂಡು ಪೊಲೀಸ್ ಠಾಣೆಗೆ ಮುತ್ತಿಗೆ ಹಾಕಿದ್ದರು. ಜನರ ಬೆದರಿಕೆಗೆ ಮಣಿದು ಆರೋಪಿಯನ್ನು ಬಿಡುಗಡೆ ಮಾಡಿರುವ ಆಮ್ ಆದ್ಮಿ ಕ್ರಮದ ಕುರಿತು ಸಾಕಷ್ಟು ಟೀಕೆಗಳೂ ಎದ್ದಿದ್ದವು.
ಅಮೃತ್ಪಾಲ್ ಸಿಂಗ್ ಮತ್ತು ತೂಫಾನ್ ಯಾರು?
ಜನವರಿ 17, 1993 ರಂದು ಜನಿಸಿದ ಅಮೃತಪಾಲ್ ಸಿಂಗ್ ಸಂಧುಗೆ ಈಗ ಕೇವಲ 30 ವರ್ಷ ವಯಸ್ಸು. ಪಂಜಾಬಿ ಕೇಂದ್ರಿತ ಸಾಮಾಜಿಕ ಸಂಘಟನೆ ವಾರಿಸ್ ಪಂಜಾಬ್ ದೇಯ ಎರಡನೇ ನಾಯಕ. ಕಳೆದ ವರ್ಷ ಫೆಬ್ರವರಿಯಲ್ಲಿ ರಸ್ತೆ ಅಪಘಾತದಲ್ಲಿ ಮೃತಪಟ್ಟ ನಟ ಮತ್ತು ಕಾರ್ಯಕರ್ತ ದೀಪ್ ಸಿಧು ‘ವಾರಿಸ್ ಪಂಜಾಬ್ ದೇ’ ಸಂಘಟನೆಯ ಸ್ಥಾಪಕ. ಅಮೃತ್ಪಾಲ್ ಸಿಂಗ್ ಕುಟುಂಬವು ದುಬೈನಲ್ಲಿ ಟ್ರಾನ್ಸ್ಪೋರ್ಟ್ ವ್ಯವಹಾರಹೊಂದಿದ್ದು, ಈ ಸಂಘಟನೆಗೆ ಸೇರುವ ಮೊದಲು ಸಿಂಗ್ ದುಬೈನಲ್ಲಿ ವಿಲಾಸಿ ಜೀವನ ನಡೆಸುತ್ತಿದ್ದ. ಕೇಂದ್ರ ಸರಕಾರವು ಕೃಷಿ ಕಾಯಿದೆ ಜಾರಿಗೆ ಬಂದ ಸಂದರ್ಭದಲ್ಲಿ ಪಂಜಾಬ್, ದೆಹಲಿಯಲ್ಲಿ ಈತ ಪ್ರತಿಭಟನೆಯನ್ನೂ ನಡೆಸಿದ್ದನು.
ಕೇಂದ್ರ ಸರಕಾರವು ಜಾರಿಗೆ ತಂದ ಕಾಯಿದೆಯ ವಿರುದ್ಧ ರೈತರು ಪ್ರತಿಭಟನೆ ನಡೆಸುತ್ತಿದ್ದರು. ಆ ಸಂದರ್ಭದಲ್ಲಿ ದೀಪ್ ಸಿಧು ದೆಹಲಿಯ ಕೆಂಪು ಕೋಟೆಯ ಮೇಲೆ ಖಲಿಸ್ತಾನಿ ಧ್ವಜ ಹಾರಿಸಿದ್ದ. ಬಳಿಕ ಈತ ಜೈಲು ಪಾಲಾಗಿದ್ದ. ಜೈಲಿನಿಂದ ಬಿಡುಗಡೆಯಾಗಿ ಬಂದ ಬಳಿಕ ವಾರೀಸ್ ಪಂಜಾಬ್ ದೇ ಎಂಬ ಸಂಘಟನೆ ಸ್ಥಾಪಿಸಿದ್ದ. ದೀಪ್ ಸಿಧು ಸಾವಿನ ಬಳಿಕ ಈ ಸಂಘಟನೆಗೆ ಅಮೃತ್ಪಾಲ್ ಸಿಂಗ್ ನಾಯಕನಾಗಿದ್ದ. ತಾನು ಭಿಂದ್ರನವಾಲೆ ಅನುಯಾಯಿ ಎಂದು ಅಮೃತ್ಪಾಲ್ ಸಿಂಗ್ ಹೇಳಿಕೊಳ್ಳುತ್ತ ಬಂದಿದ್ದ. ಈ ಸಂಘಟನೆಗೆ ಸೇರುವ ಮೊದಲು ಈತ ಯಾವುದೇ ಸಂಘಟನೆಯಲ್ಲಿ ಗುರುತಿಸಿಕೊಂಡಿರಲಿಲ್ಲ. ಸರಿಯಾಗಿ ಸಿಖ್ ಧರ್ಮವನ್ನೂ ಪಾಲಿಸುತ್ತಿರಲಿಲ್ಲವಂತೆ. ಪೊಲೀಸ್ ಠಾಣೆಗೆ ನುಗ್ಗಿ ತನ್ನ ಸಹಚರನನ್ನು ಬಿಡಿಸಿಕೊಂಡ ಬಳಿಕ ಈತನ ಹೆಸರು ಹೆಚ್ಚು ಚಾಲ್ತಿಗೆ ಬಂದಿತ್ತು.
ಲವ್ಪ್ರೀತ್ನನ್ನು ಬಂಧಿಸಿದ್ದು ಏಕೆ?
ಅಮೃತಪಾಲ್ ಸಿಂಗ್ ಮತ್ತು ಅವರ 30 ಬೆಂಬಲಿಗರ ವಿರುದ್ಧ ರೂಪನಗರ ಜಿಲ್ಲೆಯ ಚಮ್ಕೌರ್ ಸಾಹಿಬ್ ನಿವಾಸಿ ಬರೀಂದರ್ ಸಿಂಗ್ ಅವರನ್ನು ಅಪಹರಿಸಿ ಥಳಿಸಿದ ಆರೋಪದ ಮೇಲೆ ಪ್ರಕರಣ ದಾಖಲಾಗಿತ್ತು.
ಅಮೃತಪಾಲ್ ಸಿಂಗ್ ಅವರ ಸಹಚರರು ಅವರನ್ನು ಅಜ್ನಾಲಾದಿಂದ ಅಪಹರಿಸಿ ಅಜ್ಞಾತ ಸ್ಥಳಕ್ಕೆ ಕರೆದೊಯ್ದು ಅಲ್ಲಿ ಅಮಾನುಷವಾಗಿ ಥಳಿಸಿದ್ದಾರೆ ಎಂದು ಬರೀಂದರ್ ಸಿಂಗ್ ಅವರು ತಮ್ಮ ದೂರಿನಲ್ಲಿ ಪೊಲೀಸರಿಗೆ ತಿಳಿಸಿದ್ದರು. ಈ ಅಪಹರಣ ಪ್ರಕರಣದಲ್ಲಿ ತೂಫಾನ್ ಹೆಸರು ಇಲ್ಲದೆ ಇದ್ದರೂ ಬಂಧಿಸಲಾಗಿದೆ ಎಂದು ತೂಫಾನ್ ಕುಟುಂಬ ಹೇಳಿತ್ತು. ಆದರೆ, ತೂಫಾನ್ ಅಮೃತ್ಪಾಲ್ ಸಿಂಗ್ ಗುಂಪಿನ ಜತೆ ಕೆಲಸ ಮಾಡಿದ್ದಾನೆ ಎಂದು ಆತನ ಕುಟುಂಬ ಒಪ್ಪಿಕೊಂಡಿದ್ದಾರೆ. ಆದರೆ, ಅಪಹರಣದಲ್ಲಿ ತೂಫಾನ್ ಪಾತ್ರವಿಲ್ಲ ಎಂದು ಲವ್ಪ್ರೀತ್ ಕುಟುಂಬ ಹೇಳಿಕೊಂಡಿದೆ. ಲವ್ಪ್ರೀತ್ನನ್ನು ಪೊಲೀಸರು ಬಂಧಿಸಿದ್ದು ಅಮೃತ್ಪಾಲ್ ಸಿಂಗ್ಗೆ ಆಕ್ರೋಶ ಹೆಚ್ಚಿಸಿತ್ತು. ಆತ ತನ್ನ ಬೆಂಬಲಿಗರ ಪಡೆ ಜತೆ ಠಾಣೆಗೆ ಮುತ್ತಿಗೆ ಹಾಕಿದ್ದ.
ಇತ್ತೀಚೆಗೆ ಅಮೃತ್ಪಾಲ್ ಸಿಂಗ್ನನ್ನು ಬಂಧಿಸಲು ಪೊಲೀಸರು ಸಾಕಷ್ಟು ಪ್ರಯತ್ನಪಟ್ಟಿದ್ದರು. ಹಲವು ಕಾರುಗಳಲ್ಲಿ ಚೇಸ್ ಮಾಡಿದರೂ ಆತ ಸಿಕ್ಕಿರಲಿಲ್ಲ. ಅಮೃತ್ಪಾಲ್ ಸಿಂಗ್ಗೆ ಸಿಖ್ ಧಾರ್ಮಿಕ ಪೀಠವಾದ ಅಕಾಲ್ ತಖ್ತ್ನ ಜಥೇದಾರ್ ಗಿಯಾನಿ ಹರ್ಪ್ರೀತ್ ಸಿಂಗ್ ಸಂದೇಶವೊಂದನ್ನು ರವಾನಿಸಿತ್ತು. ಹೀಗೆ ತಲೆಮೆರೆಸಿಕೊಂಡು ಓಡಾಡುವುದನ್ನು ಬಿಟ್ಟು, ಪೊಲೀಸರಿಗೆ ಶರಣಾಗಿ ತನಿಖೆಗೆ ಸಹಕರಿಸುವಂತೆ ಜಥೇದಾರ್ ಗಿಯಾನಿ ಹರ್ಪ್ರೀತ್ ಸಿಂಗ್ ಸಲಹೆ ನೀಡಿದ್ದರು. ಅಮೃತ್ಪಾಲ್ ಸಿಂಗ್ ಈ ನೆಲದ ಕಾನೂನಿಗೆ ಗೌರವ ಕೊಡಬೇಕು. ಪೊಲೀಸರಿಗೆ ಶರಣಾಗಿ ತನಿಖೆಗೆ ಸಹಕರಿಸಬೇಕು. ಆತ ಹೀಗೆ ತಲೆಮರೆಸಿಕೊಂಡು ಓಡಾಡುವುದರಿಂದ ಯಾವ ಪ್ರಯೋಜನವೂ ಇಲ್ಲ ಎಂದು ಜಥೇದಾರ್ ಗಿಯಾನಿ ಹರ್ಪ್ರೀತ್ ಸಿಂಗ್ ಅಭಿಪ್ರಾಯಪಟ್ಟಿದ್ದರು. ಕೊನೆಗೂ ನಿನ್ನೆ ಅಮೃತ್ಪಾಲ್ ಬಂಧನವಾಗಿದೆ. ಈ ಸಮಯದಲ್ಲಿ ಪಂಜಾಬ್ ಜನರು ಶಾಂತಿಯಿಂದ ವರ್ತಿಸಬೇಕು. ಯಾವುದೇ ವದಂತಿಗಳಿಗೆ ಕಿವಿಕೊಡಬಾರದೆಂದು ಪೊಲೀಸರು ಮನವಿ ಮಾಡಿದ್ದಾರೆ.