ಬೆಂಗಳೂರು: ರಾಜ್ಯದಲ್ಲಿ ಆವರಿಸಿರುವ ಭೀಕರ ಬರಗಾಲ ಹಾಗೂ ಮಲೆನಾಡಿಗರ ನಿದ್ದೆಗೆಡಿಸಿರುವ ಕಸ್ತೂರಿರಂಗನ್ ವರದಿ ವಿಚಾರವಾಗಿ ಚರ್ಚಿಸಲು ಇಂದಿನಿಂದ ಮೂರು ದಿನಗಳ ಕಾಲ ರಾಜ್ಯ ವಿಧಾನಸಭೆಯ ವಿಶೇಷ ಅಧಿವೇಶನ ನಡೆಯಲಿದೆ. ಆದರೆ, ಕಲಾಪ ಆರಂಭಕ್ಕೂ ಮುನ್ನವೇ ‘ವಂದೇ ಮಾತರಂ’ ಗೀತೆಯ ವಿಚಾರವಾಗಿ ಸದನದಲ್ಲಿ ಆಡಳಿತ ಮತ್ತು ವಿಪಕ್ಷಗಳ ನಡುವೆ ಭಾರೀ ವಾಕ್ಸಮರ ನಡೆಯುವ ಲಕ್ಷಣಗಳು ದಟ್ಟವಾಗಿವೆ.
ಬರಗಾಲ ಹಾಗೂ ಕಸ್ತೂರಿರಂಗನ್ ವರದಿಯೇ ಪ್ರಮುಖ ಅಜೆಂಡಾ
ಕಳೆದ ಮುಂಗಾರು ಅಧಿವೇಶನವು ಗೊಂದಲ-ಗದ್ದಲಗಳ ನಡುವೆ ಮೊಟುಕುಗೊಂಡಿದ್ದರಿಂದ, ಈ ಬಾರಿ ಕೇವಲ ಎರಡು ಪ್ರಮುಖ ವಿಚಾರಗಳನ್ನು ಮುಂದಿಟ್ಟುಕೊಂಡು ಈ ವಿಶೇಷ ಅಧಿವೇಶನ ಕರೆಯಲಾಗಿದೆ. ಹೀಗಾಗಿ ಈ ಬಾರಿ ಯಾವುದೇ ‘ಪ್ರಶ್ನೋತ್ತರ ಕಲಾಪ’ಗಳು ಇರುವುದಿಲ್ಲ. ಬದಲಾಗಿ, ರಾಜ್ಯದಲ್ಲಿನ ತೀವ್ರ ಬರ ಪರಿಸ್ಥಿತಿ, ಬೆಳೆಹಾನಿ ಕುರಿತು ಸಮಗ್ರ ಚರ್ಚೆ ನಡೆಯಲಿದ್ದು, ಮತ್ತಷ್ಟು ತಾಲೂಕುಗಳನ್ನು ಬರಪೀಡಿತ ಪಟ್ಟಿಗೆ ಸೇರಿಸುವ ಸಾಧ್ಯತೆಯಿದೆ.
ಇದರ ಜೊತೆಗೆ, ಕಸ್ತೂರಿರಂಗನ್ ವರದಿ ಜಾರಿಯಿಂದ ಆಗುವ ಸಾಧಕ-ಬಾಧಕಗಳ ಬಗ್ಗೆಯೂ ಚರ್ಚೆ ನಡೆಯಲಿದೆ. ಕೇಂದ್ರ ಸರ್ಕಾರ ಈಗಾಗಲೇ 7ನೇ ಕರಡು ಅಧಿಸೂಚನೆ ಹೊರಡಿಸಿದ್ದು, ಆಕ್ಷೇಪಣೆ ಸಲ್ಲಿಸಲು ಇದೇ ತಿಂಗಳ 30ರವರೆಗೆ (ರಾಜ್ಯ ಸರ್ಕಾರಕ್ಕೆ 27ರವರೆಗೆ ಸಮಯಾವಕಾಶ) ಗಡುವು ನೀಡಿದೆ. ಹೀಗಾಗಿ, ಈ ಅಧಿಸೂಚನೆ ವಿರುದ್ಧ ಸದನದಲ್ಲಿ ರಾಜ್ಯ ಸರ್ಕಾರ ಮಹತ್ವದ ನಿರ್ಣಯ ಕೈಗೊಳ್ಳುವ ಸಾಧ್ಯತೆಗಳಿವೆ.
ಕಲಾಪದ ಆರಂಭದಲ್ಲೇ ‘ವಂದೇ ಮಾತರಂ’ ಗದ್ದಲ?
ಅಧಿವೇಶನದ ಆರಂಭದಲ್ಲಿ ಸರ್ಕಾರದ ಆದೇಶದ ಪ್ರಕಾರ ‘ವಂದೇ ಮಾತರಂ’ ಗೀತೆಯ ಕೇವಲ ಎರಡು ಪ್ಯಾರಾಗಳನ್ನು ಮಾತ್ರ ಹಾಡಲು ಸೂಚಿಸಲಾಗಿದೆ. ಆದರೆ, ಇದನ್ನು ವಿಪಕ್ಷಗಳಾದ ಬಿಜೆಪಿ ಮತ್ತು ಜೆಡಿಎಸ್ ಒಟ್ಟಾಗಿ ವಿರೋಧಿಸುತ್ತಿವೆ. ಪೂರ್ಣ ಪ್ರಮಾಣದಲ್ಲಿ (ನಾಲ್ಕು ಪ್ಯಾರಾ) ವಂದೇ ಮಾತರಂ ಹಾಡಲೇಬೇಕು ಎಂದು ಅವು ಪಟ್ಟು ಹಿಡಿದಿವೆ. ಒಂದು ವೇಳೆ ಸರ್ಕಾರ ಎರಡೇ ಪ್ಯಾರಾಗೆ ಹಾಡನ್ನು ನಿಲ್ಲಿಸಿದರೆ, ತಾವೇ ಎದ್ದು ನಿಂತು ಪೂರ್ತಿ ಗೀತೆಯನ್ನು ಹಾಡುವುದಾಗಿ ವಿಪಕ್ಷಗಳು ಸರ್ಕಾರಕ್ಕೆ ಎಚ್ಚರಿಕೆ ನೀಡಿವೆ.
ಇದಕ್ಕೆ ಪ್ರತಿಕ್ರಿಯಿಸಿರುವ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ್ ತಂಗಡಗಿ, “ಸರ್ಕಾರದ ಅಧಿಸೂಚನೆ ಮತ್ತು ಮಾರ್ಗದರ್ಶನದಂತೆಯೇ ನಾವು ನಡೆದುಕೊಳ್ಳುತ್ತೇವೆ. ಒಂದು ವೇಳೆ ಸರ್ಕಾರ ನಾಲ್ಕು ಪ್ಯಾರಾ ಹಾಡಲು ಸೂಚಿಸಿದರೆ, ಅದಕ್ಕೂ ಅವಕಾಶ ನೀಡಲಾಗುವುದು” ಎಂದು ಸ್ಪಷ್ಟಪಡಿಸಿದ್ದಾರೆ.
ತಾಕತ್ತಿದ್ದರೆ ತಡೆಯಿರಿ, ನಾವಂತೂ ಹಾಡೇ ಹಾಡುತ್ತೇವೆ – ಆರ್. ಅಶೋಕ್ ಗುಡುಗು
ಸರ್ಕಾರದ ನಿಲುವಿನ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿರುವ ವಿಪಕ್ಷ ನಾಯಕ ಆರ್. ಅಶೋಕ್, “ವಂದೇ ಮಾತರಂ ಎಂಬುದು ನಮ್ಮ ರಕ್ತದ ಕಣಕಣದಲ್ಲಿದೆ. ಡಿಕೆ ಶಿವಕುಮಾರ್ ಅವರಂಥ ನೂರು ಜನ ಬಂದರೂ ನಾವು ವಂದೇ ಮಾತರಂ ಹಾಡೇ ಹಾಡುತ್ತೇವೆ. ವಿಧಾನಸಭೆಯಲ್ಲೂ ಹಾಡುತ್ತೇವೆ, ಹೊರಗಡೆಯೂ ಹಾಡುತ್ತೇವೆ. ತಾಕತ್ತಿದ್ದರೆ ನಮ್ಮನ್ನು ತಡೆಯಲಿ” ಎಂದು ಸವಾಲು ಹಾಕಿದ್ದಾರೆ.
“ಮಂತ್ರಿಗಳು ಕೇಸ್ ಹಾಕುತ್ತೇವೆ ಎಂದು ಹೇಳಿದ್ದಾರೆ; ಹಾಕಲಿ ನೋಡೋಣ. ಯಾರು ಆ ಮಾತು ಹೇಳಿದ್ದಾರೋ, ಆ ಮಂತ್ರಿಯ ಮುಂದೆಯೇ ನಾನು ಎದ್ದು ನಿಂತು ವಂದೇ ಮಾತರಂ ಹಾಡುತ್ತೇನೆ” ಎಂದು ಆರ್. ಅಶೋಕ್ ಗುಡುಗಿದ್ದಾರೆ.
