ಬೆಳಗಾವಿ (ಸಂಭ್ರಮಪ್ರಭ ವಾರ್ತೆ): ತಮ್ಮ ಪಕ್ಷಾಂತರದ ಕುರಿತು ಹರಿದಾಡುತ್ತಿದ್ದ ಎಲ್ಲಾ ರಾಜಕೀಯ ಊಹಾಪೋಹಗಳಿಗೆ ಮಾಜಿ ಸಚಿವ ಹಾಗೂ ಗೋಕಾಕ ಶಾಸಕ ರಮೇಶ್ ಜಾರಕಿಹೊಳಿ ತೆರೆ ಎಳೆದಿದ್ದಾರೆ. “ಕಾಂಗ್ರೆಸ್ ಪಕ್ಷದಿಂದ ನನಗೆ ಮೇಲಿಂದ ಮೇಲೆ ಆಫರ್ಗಳು ಬರುತ್ತಿರುವುದು ನಿಜ. ಆದರೆ, ಯಾವುದೇ ಕಾರಣಕ್ಕೂ ನಾನು ಕಾಂಗ್ರೆಸ್ಗೆ ಹೋಗುವುದಿಲ್ಲ; 2028ರ ವಿಧಾನಸಭಾ ಚುನಾವಣೆಯಲ್ಲಿ ರಾಜ್ಯದಲ್ಲಿ ಮತ್ತೆ ಬಿಜೆಪಿಯನ್ನು ಅಧಿಕಾರಕ್ಕೆ ತರುತ್ತೇವೆ” ಎಂದು ಅವರು ಘೋಷಿಸಿದ್ದಾರೆ.
ಬೆಳಗಾವಿಯಲ್ಲಿ ನಡೆದ ಕಾರ್ಯಕರ್ತರ ಸಭೆ ಹಾಗೂ ಸಾರ್ವಜನಿಕ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಮಾಜಿ ಡಿಸಿಎಂ ಲಕ್ಷ್ಮಣ ಸವದಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು. “ಲಕ್ಷ್ಮಣ ಸವದಿ ಮತ್ತೆ ಬಿಜೆಪಿಗೆ ಬರುವುದಿಲ್ಲ. ಹಿಂದೆ ಬಿಜೆಪಿಯಲ್ಲಿದ್ದಾಗ ಚುನಾವಣೆಯಲ್ಲಿ ಸೋತು ಮನೆಯಲ್ಲಿದ್ದ ಅವರನ್ನು ಕರೆದು ಉಪಮುಖ್ಯಮಂತ್ರಿ ಸ್ಥಾನ ನೀಡಲಾಗಿತ್ತು. ಆದರೆ, ಸ್ಥಾನಮಾನ ನೀಡಿದವರಿಗೇ ಅವಮಾನ ಮಾಡಿದ ಅವರು ಇಂದು ಪಕ್ಷವನ್ನೇ ವಿರೋಧಿಸುತ್ತಿದ್ದಾರೆ” ಎಂದು ಕಿಡಿಕಾರಿದರು.
“ಕಿಮ್ಮತ್ತು ಇಲ್ಲದ ಕಡೆ ಹೋಗುವುದಿಲ್ಲ”
ಪಕ್ಷ ಬದಲಾವಣೆ ಕುರಿತ ಪ್ರಶ್ನೆಗಳಿಗೆ ಖಡಕ್ ಉತ್ತರ ನೀಡಿದ ಜಾರಕಿಹೊಳಿ, “ಒಮ್ಮೆ ಹೊರಬಂದ ಮೇಲೆ ಮತ್ತೆ ಹಿಂದಕ್ಕೆ ಹೋಗುವುದು ಸರಿಯಲ್ಲ. ನಾನು ಕಾಂಗ್ರೆಸ್ಗೆ ಹೋದರೆ ಅಲ್ಲಿ ನನಗೆ ಯಾವುದೇ ಕಿಮ್ಮತ್ತು ಉಳಿಯುವುದಿಲ್ಲ. ಬೇಡ ಎಂದವರ ಬಳಿ ಹೋಗಿ ಏನು ಮಾಡುವುದು? ನನಗೆ ಮತ್ತು ನನ್ನನ್ನು ನಂಬಿರುವ ಕಾರ್ಯಕರ್ತರಿಗೆ ಎಲ್ಲಿ ಗೌರವ ಸಿಗುತ್ತದೆಯೋ ಅಲ್ಲೇ ಇರುತ್ತೇನೆ. ಸ್ವಾಭಿಮಾನ ಮತ್ತು ಕಾರ್ಯಕರ್ತರ ಹಿತವೇ ನನಗೆ ಮುಖ್ಯ” ಎಂದು ಸ್ಪಷ್ಟಪಡಿಸಿದರು.
ಅಥಣಿ-ಕಾಗವಾಡ ಗೆಲ್ಲಲು ‘ಸೈಲೆಂಟ್ ತಂತ್ರ’
“ಲಕ್ಷ್ಮಣ ಸವದಿ ಸಚಿವರಾದ ಬಳಿಕ ಗೋಕಾಕ ಸಾಹುಕಾರ ಅಥಣಿಗೆ ಬರುವುದನ್ನು ನಿಲ್ಲಿಸಿದ್ದಾರೆ ಎಂದು ಕೆಲವರು ಭಾವಿಸಿದ್ದರೆ ಅದು ತಪ್ಪು. ನಾನು ಯಾರಿಗೂ ಹೆದರುವ ಮಗನೇ ಅಲ್ಲ, ನಮ್ಮ ಕಾರ್ಯಕರ್ತರೂ ಯಾರಿಗೂ ಅಂಜಬೇಕಿಲ್ಲ. ಅಥಣಿಯಲ್ಲಿ ನಾವು ಪದೇ ಪದೇ ಸಭೆ ನಡೆಸಿದರೆ ಸವದಿ ಎಚ್ಚೆತ್ತುಕೊಳ್ಳುತ್ತಾರೆ ಎಂಬ ಕಾರಣಕ್ಕೆ ಗೋಕಾಕನಲ್ಲಿಯೇ ಕುಳಿತು ‘ಸೈಲೆಂಟ್ ತಂತ್ರ’ ಹೆಣೆದಿದ್ದೇವೆ” ಎಂದು ರಮೇಶ್ ಜಾರಕಿಹೊಳಿ ಗುಟ್ಟು ಬಿಟ್ಟುಕೊಟ್ಟರು.
ಮುಂಬರುವ ಜಿಲ್ಲಾ ಪಂಚಾಯಿತಿ ಮತ್ತು ತಾಲೂಕು ಪಂಚಾಯಿತಿ ಚುನಾವಣೆಗಳಲ್ಲಿ ಬಿಜೆಪಿ ಜಯಭೇರಿ ಬಾರಿಸಲಿದೆ. ಅಲ್ಲದೆ, 2028ರ ವಿಧಾನಸಭಾ ಚುನಾವಣೆಯಲ್ಲಿ ಅಥಣಿ ಮತ್ತು ಕಾಗವಾಡ ಎರಡೂ ಕ್ಷೇತ್ರಗಳನ್ನು ಗೆಲ್ಲುವುದು ಶತಃಸಿದ್ಧ. ಕಾಗವಾಡ ಕ್ಷೇತ್ರದ ಕುರಿತು ಶಾಸಕ ರಾಜು ಕಾಗೆ ಅವರೊಂದಿಗೆ ಈಗಾಗಲೇ ಮಾತುಕತೆ ನಡೆಸಿದ್ದು, ಅಲ್ಲಿ ಸುಲಭವಾಗಿ ಗೆಲ್ಲಲಿದ್ದೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
“ವೈಯಕ್ತಿಕವಾಗಿ ಸಿದ್ದರಾಮಯ್ಯ ಯಾವಾಗಲೂ ನಮ್ಮ ನಾಯಕರೇ”
ಇದೇ ವೇಳೆ ಸಿದ್ದರಾಮಯ್ಯ ಅವರೊಂದಿಗಿನ ಭೇಟಿಯ ಕುರಿತು ಸ್ಪಷ್ಟನೆ ನೀಡಿದ ಜಾರಕಿಹೊಳಿ, “ನಮ್ಮಿಬ್ಬರ ಪಕ್ಷಗಳು ಬೇರೆ ಬೇರೆಯಾಗಿದ್ದರೂ, ವೈಯಕ್ತಿಕ ಸಂಬಂಧ ಉತ್ತಮವಾಗಿದೆ. ವೈಯಕ್ತಿಕವಾಗಿ ಸಿದ್ದರಾಮಯ್ಯ ಯಾವಾಗಲೂ ನಮ್ಮ ನಾಯಕರೇ. ಇತ್ತೀಚಿನ ನಮ್ಮ ಖಾಸಗಿ ಭೇಟಿಯಲ್ಲಿ ಯಾವುದೇ ರಾಜಕೀಯ ಚರ್ಚೆ ನಡೆದಿಲ್ಲ. ಹಿಂದುಳಿದ ವರ್ಗಗಳ ನಾಯಕರಿಗೆ ಅಪಮಾನ ಮಾಡಿದರೆ, ಅವರನ್ನು ನಂಬಿರುವ ಜನರು ಮತ್ತು ವೋಟ್ ಬ್ಯಾಂಕ್ ಮುಂದಿನ ದಿನಗಳಲ್ಲಿ ತಕ್ಕ ಉತ್ತರ ನೀಡಲಿದೆ” ಎಂದು ಮಾರ್ಮಿಕವಾಗಿ ನುಡಿದರು.
