Updated By: Priyalachhi
ಚಿಕ್ಕೋಡಿ(ಬೆಳಗಾವಿ): ಮುಂದಿನ ಬಜೆಟ್ ಅನ್ನೂ ಸಿದ್ದರಾಮಯ್ಯನವರೇ ಮಂಡಿಸುತ್ತಾರೆ ಎಂದು ಸಚಿವ ಸತೀಶ್ ಜಾರಕಿಹೊಳಿ ತಿಳಿಸಿದರು.
ಹುಕ್ಕೇರಿ ಪಟ್ಟಣದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯ ಅವರು ಐದು ವರ್ಷ ಮುಖ್ಯಮಂತ್ರಿಯಾಗಿ ಇರ್ತಾರೆ ಅಂತ ಭಾವಿಸಿದ್ದೇವೆ. ಈಗಾಗಲೇ ಎರಡೂವರೆ ವರ್ಷ ಮುಗಿಸಿದ್ದಾರೆ. ಸಿಎಂ ಆಗಿ ಪೂರ್ಣಾವಧಿ ಮುಗಿಸುವ ವಿಶ್ವಾಸವಿದೆ ಎಂದು ಸ್ವತಃ ಅವರೇ ಹೇಳಿದ್ದಾರೆ ಎಂದರು.
ದೇವರಾಜ ಅರಸು ಅವರ ಸುದೀರ್ಘ ಸೇವೆಯ ನಂತರ ಸಿಎಂ ಸಿದ್ದರಾಮಯ್ಯ ಸೇವೆ ಮುಂದುವರಿಸಿದ್ದಾರೆ. ಕಾಂಗ್ರೆಸ್ ಪಕ್ಷಕ್ಕೆ, ನಮಗೆ ಇದೊಂದು ಹೆಮ್ಮೆಯ ವಿಷಯವಾಗಿದೆ. ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರಲು ಸಿದ್ದರಾಮಯ್ಯ ಸಾಕಷ್ಟು ಶ್ರಮಪಟ್ಟಿದ್ದಾರೆ, ಹೋರಾಟ ಮಾಡಿದ್ದಾರೆ. ಸಿದ್ದರಾಮಯ್ಯನವರಿಗೆ ಅಭಿನಂದನೆಗಳನ್ನು ಸಲ್ಲಿಸುತ್ತೇನೆ ಎಂದು ಹೇಳಿದರು.
ಸಿದ್ದರಾಮಯ್ಯ ಬದಲಾವಣೆ ಕುರಿತ ಮಾಜಿ ಸಚಿವ ಕೆ.ಎನ್. ರಾಜಣ್ಣ ಹೇಳಿಕೆ ವಿಚಾರವಾಗಿ ಮಾತನಾಡಿ, ಸಮಯ ಬಂದಾಗ ಚರ್ಚೆ ಮಾಡೋಣ ಸದ್ಯ ಮುಖ್ಯಮಂತ್ರಿ ಬದಲಾವಣೆ ಸಂದರ್ಭ ಬಂದಿಲ್ಲ. ಅವರೇ ಮುಂದುವರಿಯುತ್ತಾರೆ ಎಂದರು. ಬಳ್ಳಾರಿ ಗಲಾಟೆ ವಿಚಾರವಾಗಿ ಮಾತನಾಡಿ, ಈಗಾಗಲೇ ತನಿಖೆ ನಡೆಯುತ್ತಿದೆ. ಎರಡೂ ಕಡೆಯವರ ಬಂಧನ ಆಗಿದೆ, ಸರಿಯಾಗಿ ತನಿಖೆ ನಡೆಯುತ್ತಿದೆ ಎಂದರು.

