ಬೆಂಗಳೂರು: ಕೊಲೆ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆ ಅನುಭವಿಸುತ್ತಿದ್ದ ಅಪರಾಧಿಯ ಪತ್ನಿಯ ಮೇಲಿನ ಕಾಮದಾಸೆಗಾಗಿ ಸುಪ್ರೀಂ ಕೋರ್ಟ್ನ ನಕಲಿ ಜಾಮೀನು ಆದೇಶ ಸೃಷ್ಟಿಸಿ ಕೈದಿಯನ್ನು ಬಿಡುಗಡೆ ಮಾಡಿಸಿದ್ದ ಕಾರಾಗೃಹ ಇಲಾಖೆಯ ಡಿಐಜಿ ಎಂ. ಸೋಮಶೇಖರ್ ಅವರ ಕರಾಳ ಮುಖ ಪೊಲೀಸ್ ತನಿಖೆಯಿಂದ ಬಟಾಬಯಲಾಗಿದೆ.
2018ರ ಕೊಲೆ ಪ್ರಕರಣವೊಂದರಲ್ಲಿ ಶಿಕ್ಷೆಗೆ ಗುರಿಯಾಗಿದ್ದ ಕೈದಿ ಶಂಕರ್ನನ್ನು ಜೈಲಿನಿಂದ ಬಿಡುಗಡೆ ಮಾಡಲು ಹಾಲಿ ಕಲಬುರಗಿ ಉತ್ತರ ವಲಯ ಕಾರಾಗೃಹ ಇಲಾಖೆ ಡಿಐಜಿಯಾಗಿರುವ (ಹಿಂದೆ ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದ) ಸೋಮಶೇಖರ್ ಹಾಗೂ ಆತನ ಸಹಚರ ಶ್ರೀಕಾಂತ್ ಜಂಟಿಯಾಗಿ ಈ ಅಕ್ರಮ ಎಸಗಿದ್ದಾರೆ. ಕೇವಲ ಹಣಕ್ಕಾಗಿ ಮಾತ್ರವಲ್ಲದೆ, ಶಂಕರ್ನ ಪತ್ನಿಯನ್ನು ಲೈಂಗಿಕವಾಗಿ ಬಳಸಿಕೊಳ್ಳುವ ದುರುದ್ದೇಶದಿಂದಲೇ ಸುಪ್ರೀಂ ಕೋರ್ಟ್ ಆದೇಶವನ್ನು ನಕಲು ಮಾಡಿ ಬಿಡುಗಡೆ ಮಾಡಿಸಿರುವುದು ಬೆಳಕಿಗೆ ಬಂದಿದೆ.
ವಿಡಿಯೋ ಕರೆಯಲ್ಲಿ ವಿವಸ್ತ್ರವಾಗಲು ಪೀಡನೆ: ಪ್ರಕರಣದ ತನಿಖೆ ವೇಳೆ ಡಿಐಜಿ ಕಾಮಕಾಂಡದ ಮತ್ತಷ್ಟು ಆಘಾತಕಾರಿ ಅಂಶಗಳು ಬಯಲಾಗಿವೆ. ಡಿಐಜಿ ಸೋಮಶೇಖರ್ ಕೈದಿಯ ಪತ್ನಿಗೆ ಆಗಾಗ ವಿಡಿಯೋ ಕರೆಗಳನ್ನು ಮಾಡಿ, ವಿವಸ್ತ್ರವಾಗುವಂತೆ ಪೀಡಿಸುತ್ತಿದ್ದ ವಿಚಾರ ದೃಢಪಟ್ಟಿದೆ. ಈ ಸಂಬಂಧ ನಿರ್ಣಾಯಕ ಸಾಕ್ಷ್ಯವಾಗಿರುವ ವಿಡಿಯೋವನ್ನು ವಶಕ್ಕೆ ಪಡೆದಿರುವ ಪರಪ್ಪನ ಅಗ್ರಹಾರ ಠಾಣೆ ಪೊಲೀಸರು, ಅದನ್ನು ಹೆಚ್ಚಿನ ಪರಿಶೀಲನೆಗಾಗಿ ವಿಧಿವಿಜ್ಞಾನ ಪ್ರಯೋಗಾಲಯಕ್ಕೆ (FSL) ರವಾನಿಸಿದ್ದಾರೆ. ಸದ್ಯ ಬಂಧನದಲ್ಲಿರುವ ಆರೋಪಿಗಳಿಬ್ಬರ ವಿಚಾರಣೆ ತೀವ್ರಗೊಂಡಿದೆ.
