ನವದೆಹಲಿ (ಸಂಭ್ರಮಪ್ರಭಾ ವಾರ್ತೆ): ಬಿಜೆಪಿಯಿಂದ ಉಚ್ಚಾಟನೆಗೊಂಡಿರುವ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರು ಮತ್ತೆ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ವಿರುದ್ಧ ದೆಹಲಿಯಲ್ಲಿ ವ್ಯಂಗ್ಯವಾಡುವ ಮೂಲಕ ಟಾಂಗ್ ನೀಡಿದ್ದಾರೆ.
ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಬಿಜೆಪಿಗೆ ಮರಳಿ ಸೇರ್ಪಡೆಯಾಗುವ ಕುರಿತು ಹಾಗೂ ತಮ್ಮ ಮುಂದಿನ ರಾಜಕೀಯ ನಡೆಗಳ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ.
ಬಿಜೆಪಿಗೆ ಬರಲು ಯಾರ ಮುಂದೆಯೂ ಅರ್ಜಿ ಹಾಕಿಲ್ಲ: “ಮತ್ತೆ ಬಿಜೆಪಿಗೆ ಸೇರಿಸಿಕೊಳ್ಳಿ ಎಂದು ನಾನು ಯಾರ ಮುಂದೆಯೂ ಅರ್ಜಿ ಹಾಕಿಲ್ಲ. ನಾನು ತಪ್ಪು ಮಾಡಿದ್ದೇನೆ, ದಯವಿಟ್ಟು ಕ್ಷಮಿಸಿ ಎಂದು ಯಾರ ಬಳಿಯೂ ಕೇಳಿಕೊಂಡಿಲ್ಲ. ನಾನು ಬಹಳ ಆರಾಮವಾಗಿ, ನೆಮ್ಮದಿಯಿಂದ ಹಾಗೂ ಸ್ವಾಭಿಮಾನದಿಂದ ಇದ್ದೇನೆ” ಎಂದು ಯತ್ನಾಳ್ ಕಡ್ಡಿ ಮುರಿದಂತೆ ಹೇಳಿದ್ದಾರೆ.
ಮುಂದಿನ ವಾರ ಆಪ್ತರೊಂದಿಗೆ ಸಭೆ: ಈ ಹಿಂದೆ ತಮ್ಮ ತಂಡದಲ್ಲಿ ಗುರುತಿಸಿಕೊಂಡಿದ್ದ ರಮೇಶ್ ಜಾರಕಿಹೊಳಿ, ಕುಮಾರ್ ಬಂಗಾರಪ್ಪ ಸೇರಿದಂತೆ 18-20 ನಾಯಕರೊಂದಿಗಿನ ಸಂಪರ್ಕದ ಕುರಿತು ಪ್ರತಿಕ್ರಿಯಿಸಿದ ಅವರು, “ಕಳೆದ ಮೂರು-ನಾಲ್ಕು ತಿಂಗಳಿಂದ ನಾವು ಯಾವುದೇ ರೀತಿಯ ಸಂಪರ್ಕದಲ್ಲಿರಲಿಲ್ಲ. ಆದರೆ ಮುಂದಿನ ವಾರ ನಾವೆಲ್ಲರೂ ಮತ್ತೆ ಒಟ್ಟಿಗೆ ಸೇರೋಣ ಎಂದು ಅವರು ಹೇಳಿದ್ದಾರೆ. ಅಲ್ಲಿ ಏನೇನು ಅಭಿಪ್ರಾಯಗಳು ವ್ಯಕ್ತವಾಗುತ್ತವೆ ಎಂಬುದನ್ನು ಕಾದು ನೋಡಬೇಕಿದೆ. ಆದರೆ ಈ ಭೇಟಿ ಮತ್ತೆ ಬಿಜೆಪಿಗೆ ವಾಪಸ್ ಬರುವ ಉದ್ದೇಶದಿಂದಲ್ಲ, ಕೇವಲ ಗೆಳೆತನದ ದೃಷ್ಟಿಯಿಂದ ಮಾತ್ರ ಒಟ್ಟಿಗೆ ಸೇರುತ್ತಿದ್ದೇವೆ” ಎಂದು ಸ್ಪಷ್ಟಪಡಿಸಿದರು.
ನಾನೇ ನಿಜವಾದ ವಿರೋಧ ಪಕ್ಷದ ನಾಯಕ: ವಿಧಾನಸಭೆಯಲ್ಲಿ ತಮ್ಮ ಪಾತ್ರದ ಬಗ್ಗೆ ಮಾತನಾಡಿದ ಯತ್ನಾಳ್, “ಇಡೀ ಕರ್ನಾಟಕದಲ್ಲಿ ಯಾವುದೇ ಪಕ್ಷದ ಜೊತೆ ಹೊಂದಾಣಿಕೆ (ಅಡ್ಜಸ್ಟ್‌ಮೆಂಟ್) ಮಾಡಿಕೊಳ್ಳದೆ ನೇರವಾಗಿ ಮಾತನಾಡುವ ಸ್ವತಂತ್ರ ವಿರೋಧ ಪಕ್ಷದ ನಾಯಕ ಅಂದರೆ ಅದು ನಾನೇ. ನನ್ನ ನೇರ ನುಡಿಯಿಂದಾಗಿ ರಾಜ್ಯದ ಜನರಿಗೆ ನನ್ನ ಮೇಲೆ ಅಪಾರ ಗೌರವವಿದೆ” ಎಂದರು.
ಅಪ್ಪ-ಮಕ್ಕಳಿಗೆ ಹೃದಯಪೂರ್ವಕ ಅಭಿನಂದನೆ! ತಮ್ಮನ್ನು ಪಕ್ಷದಿಂದ ಹೊರಹಾಕಿರುವ ವಿಚಾರವಾಗಿ ಯಡಿಯೂರಪ್ಪ ಮತ್ತು ವಿಜಯೇಂದ್ರ ಅವರನ್ನು ಲೇವಡಿ ಮಾಡಿದ ಯತ್ನಾಳ್, “ಪೂಜ್ಯ ತಂದೆಯವರಾದ ಬಿ.ಎಸ್. ಯಡಿಯೂರಪ್ಪನವರು ಹಾಗೂ ಅವರ ಕಿರಿಯ ಸುಪುತ್ರ ವಿಜಯೇಂದ್ರ ಜಿ ಅವರು ನನ್ನನ್ನು ಪಕ್ಷದಿಂದ ಹೊರಗೆ ಹಾಕಿಸಿ ಬಹಳ ಒಳ್ಳೆಯ ಕೆಲಸ ಮಾಡಿದ್ದಾರೆ. ಇದರಿಂದಾಗಿ ನಾನು ಇಡೀ ರಾಜ್ಯಾದ್ಯಂತ ಪ್ರವಾಸ ಮಾಡಲು, ಹಿಂದುತ್ವದ ವಿಚಾರಗಳನ್ನು ಜನರಿಗೆ ತಿಳಿಸಲು ಮತ್ತು ಕಾಂಗ್ರೆಸ್ ಸರ್ಕಾರದ ಭ್ರಷ್ಟಾಚಾರದ ವಿರುದ್ಧ ಧ್ವನಿ ಎತ್ತಲು ಬಹಳ ಅನುಕೂಲವಾಗಿದೆ. ಹೀಗಾಗಿ ಅವರಿಬ್ಬರಿಗೂ ನಾನು ಹೃದಯಪೂರ್ವಕ ಅಭಿನಂದನೆಗಳನ್ನು ಸಲ್ಲಿಸುತ್ತೇನೆ” ಎಂದು ವ್ಯಂಗ್ಯವಾಡಿದ್ದಾರೆ.
