ಬೆಂಗಳೂರು/ಬೆಳಗಾವಿ (ಸಂಭ್ರಮಪ್ರಭ ವಾರ್ತೆ): ಸಾಂಸ್ಕೃತಿಕ ನಾಯಕ ಬಸವಣ್ಣ ಹಾಗೂ ವೀರಶೈವ ಲಿಂಗಾಯತ ಸಮುದಾಯದ ಬಗ್ಗೆ ಅವಹೇಳನಕಾರಿಯಾಗಿ ಪುಸ್ತಕ ಬರೆದ ಆರೋಪ ಎದುರಿಸುತ್ತಿರುವ ಲೇಖಕ ರವಿ ಹಂಜ್ ಅವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ದುಬೈಗೆ ತೆರಳುತ್ತಿದ್ದ ವೇಳೆ ಕೊಚ್ಚಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಅವರನ್ನು ವಶಕ್ಕೆ ಪಡೆಯಲಾಗಿದೆ ಎಂದು ಬೆಳಗಾವಿ ಪೊಲೀಸ್ ಆಯುಕ್ತ ಪ್ರಕಾಶ್ ನಿಕಮ್ ತಿಳಿಸಿದ್ದಾರೆ.
ರವಿ ಹಂಜ್ ವಿರುದ್ಧ ಪೊಲೀಸರು ಈಗಾಗಲೇ ಲುಕ್ಔಟ್ ನೋಟಿಸ್ (Lookout Notice) ಹೊರಡಿಸಿದ್ದರು. ಇದರ ಆಧಾರದ ಮೇಲೆ ವಿಮಾನ ನಿಲ್ದಾಣದಲ್ಲಿ ಅವರನ್ನು ವಶಕ್ಕೆ ಪಡೆಯಲಾಗಿದೆ. ಬಸವಣ್ಣನವರಿಗೆ ಅವಮಾನ ಮಾಡಿದ ಆರೋಪದಡಿ ಬೆಂಗಳೂರು ಮತ್ತು ಬೆಳಗಾವಿಯಲ್ಲಿ ರವಿ ಹಂಜ್ ವಿರುದ್ಧ ಪ್ರತ್ಯೇಕ ಎಫ್ಐಆರ್ಗಳು ದಾಖಲಾಗಿದ್ದವು.
ಸಂಪುಟದ ಅನುಮೋದನೆ ಬೆನ್ನಲ್ಲೇ ಕಾನೂನು ಕ್ರಮ; ವಿಶ್ವೇಶ್ವರ ಭಟ್ ವಿರುದ್ಧವೂ ಪ್ರಕರಣ
ರವಿ ಹಂಜ್ ಅವರ ‘ಬಸವ ಮಂಟಪ’ ಕೃತಿಯ ಕುರಿತು ರಾಜ್ಯದಾದ್ಯಂತ ತೀವ್ರ ಆಕ್ರೋಶ ವ್ಯಕ್ತವಾಗಿತ್ತು. ಈ ವಿವಾದಾತ್ಮಕ ಪುಸ್ತಕವನ್ನು ಮುಟ್ಟುಗೋಲು ಹಾಕಿಕೊಳ್ಳುವುದು ಸೇರಿದಂತೆ ಲೇಖಕ ರವಿ ಹಂಜ್ ಹಾಗೂ ‘ವಿಶ್ವವಾಣಿ’ ಪತ್ರಿಕೆ ಸಂಪಾದಕ ವಿಶ್ವೇಶ್ವರ ಭಟ್ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲು ರಾಜ್ಯ ಸಚಿವ ಸಂಪುಟವು ಗುರುವಾರ ಅನುಮೋದನೆ ನೀಡಿತ್ತು.
ಸಚಿವ ಸಂಪುಟದ ನಿರ್ಧಾರದ ಬೆನ್ನಲ್ಲೇ ರವಿ ಹಂಜ್ ಮತ್ತು ವಿಶ್ವೇಶ್ವರ ಭಟ್ ವಿರುದ್ಧ ಎಫ್ಐಆರ್ ದಾಖಲಿಸಿರುವ ಪೊಲೀಸರು, ಮುಂದಿನ ಕಾನೂನು ಕ್ರಮಗಳನ್ನು ಕೈಗೊಂಡಿದ್ದಾರೆ.
