ವರದಿ: ಪ್ರಿಯಾಂಕಾ ಚಂದ್ರಶೇಖರ್ ಗಂಧನಹಳ್ಳಿ
ಬೆಂಗಳೂರು: ಸಿದ್ದರಾಮಯ್ಯ ಬಣದ ನಾಯಕರು ಮತ್ತು ಶಾಸಕರು ಏ.12ರಿಂದ 2 ದಿನಗಳ ಕಾಲ ದೆಹಲಿಗೆ ಭೇಟಿ ನೀಡಲು ಸಜ್ಜಾಗುತ್ತಿದ್ದು, ಇದರ ಬೆನ್ನಲ್ಲೇ ರಾಜ್ಯ ರಾಜಕೀಯದಲ್ಲಿ ನಾಯಕತ್ವ ಬದಲಾವಣೆ, ಸಂಪುಟ ಪುನಾರಚನೆ ವಿಚಾರ ಕುರಿತ ಚರ್ಚೆ ಗರಿಗೆದರಿದೆ.
ವಿಧಾನಸಭೆಯ ಮುಖ್ಯ ಸಚೇತಕ ಅಶೋಕ್ ಪಟ್ಟಣ್ ನೇತೃತ್ವದ ತಂಡದಲ್ಲಿ ಇತ್ತೀಚೆಗೆ ಮುಖ್ಯಮಂತ್ರಿಗಳನ್ನು ಭೇಟಿ ಮಾಡಿದ್ದ 30-35 ಶಾಸಕರು ದೆಹಲಿಗೆ ಭೇಟಿ ನೀಡುತ್ತಿದ್ದಾರೆಂದು ಮೂಲಗಳು ತಿಳಿಸಿವೆ.
ಈ ತಂಡವು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಪ್ರಧಾನ ಕಾರ್ಯದರ್ಶಿ (ಸಂಘಟನೆ) ಕೆ ಸಿ ವೇಣುಗೋಪಾಲ್ ಮತ್ತು ಕರ್ನಾಟಕದ ಉಸ್ತುವಾರಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೇವಾಲ ಅವರನ್ನು ದೆಹಲಿಯಲ್ಲಿ ಭೇಟಿ ಮಾಡಲು ಚಿಂತನೆ ನಡೆಸಿದ್ದಾರೆಂದು ತಿಳಿದುಬಂದಿದೆ.
ಸಚಿವ ಸಂಪುಟ ಪುನಾರಚನೆಗೆ ಕಾಂಗ್ರೆಸ್ ಹೈಕಮಾಂಡ್ ಸಿದ್ದರಾಮಯ್ಯ ಅವರಿಗೆ ಒಪ್ಪಿಗೆ ನೀಡುವ ಸಾಧ್ಯತೆಗಳಿವೆ ಎಂದು ಹೇಳಲಾಗುತ್ತಿದ್ದು, ಇದರ ಬೆನ್ನಲ್ಲೇ ಸಚಿವರಾಗಲು ಶಾಸಕರು ಲಾಬಿ ನಡೆಸಲು ಮುಂದಾಗಿದ್ದಾರೆಂದು ತಿಳಿದುಬಂದಿದೆ.
ಪಕ್ಷದ ಹಿತದೃಷ್ಟಿಯಿಂದ ಸಿದ್ದರಾಮಯ್ಯ ಅವರನ್ನೇ ಮುಖ್ಯಮಂತ್ರಿಯಾಗಿ ಮುಂದುವರಿಸಬೇಕೆಂದು ಅವರು ಒತ್ತಾಯಿಸಬಹುದು ಎಂದು ಮೂಲವೊಂದು ಟಿಎನ್ಐಇಗೆ ತಿಳಿಸಿದೆ.
ಟಿಬಿ ಜಯಚಂದ್ರ, ಬೇಲೂರು ಗೋಪಾಲಕೃಷ್ಣ, ಟಿ ರಘುಮೂರ್ತಿ, ಕೆಎಂ ಶಿವಲಿಂಗೇಗೌಡ, ಕೆ ಷಡಕ್ಷರಿ, ಬಿಆರ್ ಪಾಟೀಲ್, ರಾಜು ಕಾಗೆ, ಲಕ್ಷ್ಮಣ್ ಸವದಿ, ಎಆರ್ ಕೃಷ್ಣಮೂರ್ತಿ, ಕೆವೈ ನಂಜೇಗೌಡ, ಎಸ್ಎನ್ ನಾರಾಯಣಸ್ವಾಮಿ, ರಾಘವೇಂದ್ರ ಹಿಟ್ನಾಳ್, ಎಸ್ಆರ್ ಶ್ರೀನಿವಾಸ್, ರಮೇಶ್ ಬಂಡಿಸಿದ್ದೇಗೌಡ, ಸುಬ್ಬಾರೆಡ್ಡಿ, ಜಿಎಸ್ ಪಾಟೀಲ್ ಸೇರಿದಂತೆ ಇತರರು ದೆಹಲಿಗೆ ಭೇಟಿ ನೀಡುತ್ತಿದ್ದಾರೆಂದು ಎಂದು ಮೂಲಗಳು ತಿಳಿಸಿವೆ.
