ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಈಗ ಸಿನಿಮಾ ನಿರ್ಮಾಪಕಿ

0
44

ವರದಿ: ಪ್ರಿಯಾಂಕಾ ಚಂದ್ರಶೇಖರ್ ಗಂಧನಹಳ್ಳಿ

ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಆಗಿರುವ ಲಕ್ಷ್ಮಿ ಹೆಬ್ಬಾಳ್ಕರ್ ಈಗ ಸಿನಿಮಾ ನಿರ್ಮಾಪಕಿ ಆಗಿದ್ದಾರೆ. ಮೊಮ್ಮಗಳ ಹೆಸರಲ್ಲಿ ಸಿನಿಮಾ ನಿರ್ಮಾಣ ಪ್ರಾರಂಭಿಸಿರುವ ಲಕ್ಷ್ಮಿ ಹೆಬ್ಬಾಳ್ಕರ್ ನಿರ್ಮಾಣ ಸಂಸ್ಥೆಗೆ ಐರಾ ಫಿಲಮ್ಸ್ ಎಂದು ಹೆಸರಿಟ್ಟಿದ್ದಾರೆ. ನಿರ್ಮಾಪಕಿಯಾಗಿ ‘ಅಣ್ಣಾ ಫ್ರಂ ಮೆಕ್ಸಿಕೊ’ ಎಂಬ ಸಿನಿಮಾವನ್ನು ನಿರ್ಮಾಣ ಮಾಡುತ್ತಿದ್ದು, ಸಿನಿಮಾದ ಟೀಸರ್ ಅನಾವರಣ ಆಗಿದೆ.

‘ಅಣ್ಣಾ ಫ್ರಂ ಮೆಕ್ಸಿಕೊ’ ಸಿನಿಮಾನಲ್ಲಿ ಡಾಲಿ ಧನಂಜಯ್ ನಾಯಕ ಆಗಿದ್ದು, ಈ ಹಿಂದೆ ಡಾಲಿಯ ‘ಬಡವ ರಾಸ್ಕಲ್’ ಸಿನಿಮಾ ನಿರ್ದೇಶಿಸಿದ್ದ ಶಂಕರ್ ಗುರು ಅವರು ಈ ಸಿನಿಮಾವನ್ನೂ ನಿರ್ದೇಶಿಸಲಿದ್ದಾರೆ. ಸಿನಿಮಾ ಟೀಸರ್ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದ ಲಕ್ಷ್ಮಿ ಹೆಬ್ಬಾಳ್ಕರ್, ಟೀಸರ್ ಬಹಳ ಚೆನ್ನಾಗಿತ್ತು, ಬಹಳ ರಿಚ್ ಆಗಿತ್ತು. ಅದರಲ್ಲೂ ಧನಂಜಯ್ ಅವರ ಕೊರಳಿನಲ್ಲಿದ್ದ ಕರ್ನಾಟಕದ ಲಾಕೆಟ್ ನೋಡಿ ಬಹಳ ಖುಷಿ ಆಯ್ತು. ಟೀಸರ್ ನೋಡಿದರೆ ಸಿನಿಮಾ ಎಷ್ಟು ರಿಚ್ ಆಗಿರಬಹುದು ಎಂಬ ಅಂದಾಜು ಸಿಗುತ್ತಿದೆ. ಡಾಲಿ ಪ್ರತಿಬಾರಿಯಂತೂ ಅದ್ಭುತವಾಗಿ ನಟಿಸಿದ್ದಾರೆ’ ಎಂದರು.

‘ಚಿತ್ರರಂಗ ಹೊಸದು ನನಗೆ, ಚಿಕ್ಕಂದಿನಿಂದಲೂ ಚಿತ್ರರಂಗದ ಬಗ್ಗೆ ಆಸೆ, ಕುತೂಹಲ ಇದ್ದೇ ಇದೆ. ಬಹಳ ದೊಡ್ಡ ದೊಡ್ಡ ನಟರನ್ನು ನೋಡಿಕೊಂಡು ಬೆಳೆದು ಬಂದವಳು. ರಾಜ್​ಕುಮಾರ್, ವಿಷ್ಣುವರ್ಧನ್, ಅನಂತ್​​ನಾಗ್, ಶಂಕರ್​ನಾಗ್, ಜಯಮಾಲ, ಜಯಪ್ರಧಾ ಇನ್ನೂ ಹಲವರನ್ನು ನೋಡಿ ಬೆಳೆದವಳು. ನಾನೂ ಸಹ ಎಲ್ಲರಂತೆ ಮಧ್ಯಮ ವರ್ಗದಿಂದ ಬಂದವಳು, ಕನ್ನಡ ಚಿತ್ರರಂಗಕ್ಕೆ ಏನಾದರೂ ಮಾಡಬೇಕು, ಅಲ್ಲಿಯೂ ಕೆಲಸ ಮಾಡಬೇಕು ಎಂಬ ಆಸೆ ಮೊದಲಿನಿಂದಲೂ ನನಗೆ ಇತ್ತು. ಈಗ ಡಾಲಿ ಧನಂಜಯ್ ಅವರು ಒಳ್ಳೆಯ ಕತೆ ಹಿಡಿದುಕೊಂಡು ಬಂದರು. ನೀವು ನಿರ್ಮಾಣ ಮಾಡಲೇ ಬೇಕು ಎಂದಾಗ ಇಲ್ಲ ಎನ್ನಲಾಗಲಿಲ್ಲ’ ಎಂದರು.

‘ಕನ್ನಡ ಚಿತ್ರರಂಗದ ಬಹಳ ಎತ್ತರಕ್ಕೆ ಬೆಳೆಯುತ್ತಿದೆ. ವಿಶ್ವಮಟ್ಟದಲ್ಲಿ ಕನ್ನಡ ಪ್ರೇಕ್ಷಕರು ಇದ್ದಾರೆ. ಹಾಗಾಗಿ ಇದು ಒಳ್ಳೆಯ ಸಂದರ್ಭ ಎಂಬ ಕಾರಣಕ್ಕೆ ನಾವು ಇನ್ನು ಕೆಲವರೊಟ್ಟಿಗೆ ಸೇರಿಕೊಂಡು ಸಿನಿಮಾ ಮಾಡುತ್ತಿದ್ದೇವೆ. ನನ್ನ ಸಹೋದರ ಚನ್ನರಾಜ್ ಹಟ್ಟಿಹೊಳಿ ಎಲ್ಲವನ್ನೂ ನಿಭಾಯಿಸಲಿದ್ದಾರೆ. ನಮ್ಮ ನಿರ್ಮಾಣ ಸಂಸ್ಥೆಯಿಂದ ಗೋಲ್ಡನ್ ಸ್ಟಾರ್ ಗಣೇಶ್ ಅವರೊಟ್ಟಿಗೆ ಇನ್ನೊಂದು ಸಿನಿಮಾ ಮಾಡಲಿದ್ದೇವೆ’ ಎಂದರು.

sambrama prabha editor suresh kt

LEAVE A REPLY

Please enter your comment!
Please enter your name here