ವರದಿ: ಪ್ರಿಯಲಚ್ಛಿ ಗಂಧನಹಳ್ಳಿ
ಬೆಂಗಳೂರು: ಕಾಂಗ್ರೆಸ್ ಪಕ್ಷ ಚುನಾವಣೆ ವೇಳೆ ಘೋಷಿಸಿದ ಎಲ್ಲಾ ಗ್ಯಾರಂಟಿಗಳನ್ನು ಆರ್ಥಿಕ ಹೊರೆಗಳ ನಡುವೆಯೇ ಜಾರಿಗೊಳಿಸಿ ತನ್ನ ಮಾತು ಉಳಿಸಿಕೊಳ್ಳಲಿದೆ. ಇದು ನಮ್ಮ ಬದ್ದತೆ.
ಇದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ಯೋಜನೆಗೆ ಚಾಲನೆ ನೀಡಿದ ಬಳಿಕ ಹೇಳಿದ ಮಾತು.
ಬೆಂಗಳೂರಿನ ವಿಧಾನಸೌಧದ ಎದುರು ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಶಕ್ತಿ ಯೋಜನೆಯ ಲೋಗೋ ಬಿಡುಗಡೆಗೊಳಿಸಿ ಗುರುತಿನ ಚೀಟಿಯನ್ನು ಕೆಲವರಿಗೆ ವಿತರಿಸಿ ಮಾತನಾಡಿದ ಅವರು, ಮೊದಲ ಗ್ಯಾರಂಟಿಯಾಗಿ ಶಕ್ತಿ ಯೋಜನೆಯನ್ನು ಜಾರಿಗೆ ತಂದಿದ್ದು ರಾಜ್ಯದೆಲ್ಲೆಡೆ ಸಾರಿಗೆ ಬಸ್ಗಳಲ್ಲಿ ಮಹಿಳೆಯರು ಪ್ರಯಾಣಿಸಲು ಅವಕಾಶವಿದೆ. ಇದನ್ನು ಮಹಿಳೆಯರು ಸದುಪಯೋಗಪಡಿಸಿಕೊಳ್ಳಬೇಕು ಎಂದು ಸಿದ್ದರಾಮಯ್ಯ ತಿಳಿಸಿದರು.
ಎಲ್ಲಾ ಗ್ಯಾರಂಟಿಗಳನ್ನು ಜಾರಿ ಮಾಡುತ್ತಿದ್ದೇವೆ. ಹಂತ ಹಂತವಾಗಿ ಜಾರಿಯಾಗಲಿವೆ. ಇದಕ್ಕಾಗಿ 59 ಸಾವಿರ ಕೋಟಿ ರೂ. ಬೇಕಾಗುತ್ತದೆ. ಆರ್ಥಿಕ ಹೊಂದಾಣಿಕೆಯನ್ನು ಸರ್ಕಾರ ಮಾಡಿಕೊಳ್ಳಲಿದೆ. ಆಗಸ್ಟ್ ಹೊತ್ತಿಗೆ ಉಳಿದ ಯೋಜನೆಗಳು ಜಾರಿಯಾಗಲಿವೆ. ಕಾಂಗ್ರೆಸ್ ಸರ್ಕಾರ ಸದಾ ಬಡವರು,. ಶೋಷಿತರ ಪರವಾಗಿ ಇರಲಿದೆ. ಅವರಿಗೆ ದನಿಯಾಗುವುದು ನಮ್ಮ ಧ್ಯೇಯ. ಅದನ್ನು ಸರ್ಕಾರ ತನ್ನ ಕಾರ್ಯಕ್ರಮಗಳ ಮೂಲಕ ಶಕ್ತಿ ತುಂಬಲಿದೆ ಎನ್ನುವುದು ಅವರ ನುಡಿ.
ಬಡವರಿಗೆ ಈಗ ನೀಡುತ್ತಿರುವ ಐದು ಕೆಜಿ ಅಕ್ಕಿಯನ್ನು ಹತ್ತು ಕೆಜಿಗೆ ಏರಿಸಬೇಕು ಎಂದಾಗ ಅಧಿಕಾರಿಗಳು ಕಷ್ಟ ಎಂದರು. ಇಲ್ಲಿಂದ ತೊಲಗಿ ಎಂದು ಅವರಿಗೆ ನಾನು ಹೇಳಿದೆ. ಹತ್ತು ಕೆಜಿ ಅಕ್ಕಿ ನೀಡಲು 10000 ಕೋಟಿ ರೂ. ವೆಚ್ಚವಾಗಲಿದೆ. ಬಡವರು ಹಸಿವಿನಿಂದ ಬಳಲುವುದನ್ನು ತಪ್ಪಿಸಲು ಸರ್ಕಾರ ವೆಚ್ಚಮಾಡಲು ಸಿದ್ದವಿದೆ ಎಂದು ನುಡಿದರು.
ಯೋಜನೆಗಳನ್ನು ಜಾರಿಗೊಳಿಸುವುದಾಗಿ ಘೋಷಿಸಿದ ನಂತರ ಬಿಜೆಪಿಯವರು ಟೀಕಿಸಿದರು. ನೀವು ಇದ್ದಾಗ ಮಾಡಲು ಆಗದ್ದನ್ನು ಜಾರಿಗೊಳಿಸಿದರೆ ನಿಮಗೆ ಏನು ತೊಂದರೆ ಎಂದು ಸಿದ್ದರಾಮಯ್ಯ ಪ್ರಶ್ನಿಸಿದರು.
ಉಪಮುಖ್ಯಮಂತ್ರಿ ಡಿಕೆಶಿವಕುಮಾರ್ ಮಾತನಾಡಿ, ಸರ್ಕಾರ ಗ್ಯಾರಂಟಿಗಳನ್ನು ಘೋಷಿಸಿ ಜಾರಿಗೊಳಿಸಲು ಮುಂದಾದರೆ ಬಿಜೆಪಿ ಹಾಗೂ ಜಾ.ದಳ ಗೆಳೆಯರು ಟೀಕಿಸುತ್ತಾರೆ. ಬಿಜೆಪಿಯವರೇ ನಮ್ಮ ಯೋಜನೆಗಳ ಬಗ್ಗೆ ಚುನಾವಣೆ ವೇಳೆ ಪ್ರಚಾರ ಮಾಡಿದ್ದಾರೆ. ಪ್ರತಿಪಕ್ಷಗಳು ಟೀಕಿಸುವ ಬದಲು ರಚನಾತ್ಮಕವಾಗಿ ಸಲಹೆ ನೀಡಲಿ. ಕಾಂಗ್ರೆಸ್ ಪಕ್ಷವು ಬಸವಣ್ಣನ ವಿಚಾರಗಳನ್ನು ನಂಬಿ ಅದರಂತೆಯೇ ಆಡಳಿತ ನಡೆಸಲಿದೆ ಎಂದು ಬಸವಣ್ಣನವರ ವಚನಗಳನ್ನು ಉಲ್ಲೇಖಿಸಿದರು.
ಸಾರಿಗೆ ಸಚಿವ ರಾಮಲಿಂಗಾರೆಡ್ಡಿ, ಇಂಧನ ಸಚಿವ ಕೆ.ಜೆ.ಜಾರ್ಜ್, ಶಾಸಕ ರಿಜ್ವಾನ್ ಅರ್ಷದ್ ಮತ್ತಿತರರು ಹಾಜರಿದ್ದರು. ವಿಧಾನಸೌಧದ ಬಳಿಕ ಮೆಜೆಸ್ಟಿಕ್ ಹಾಗೂ ಶಾಂತಿನಗರ ಬಸ್ ನಿಲ್ದಾಣಕ್ಕೆ ತೆರಳಿ ಅಲ್ಲಿಯೂ ಸಾಂಕೇತಿಕವಾಗಿ ಶಕ್ತಿ ಯೋಜನೆಗೆ ಚಾಲನೆ ನೀಡಲಾಯಿತು.