Updated By: Priyalachhi
ಚಿಕ್ಕೋಡಿ(ಬೆಳಗಾವಿ): ಕಬ್ಬಿಗೆ ಕನಿಷ್ಠ ಬೆಂಬಲ ಬೆಲೆಗೆ ಆಗ್ರಹಿಸಿ ಬೆಳಗಾವಿ ಜಿಲ್ಲೆಯಲ್ಲಿ ರೈತರು ನಡೆಸುತ್ತಿರುವ ಪ್ರತಿಭಟನೆ ತೀವ್ರ ಸ್ವರೂಪ ಪಡೆದುಕೊಂಡಿದೆ. ಮೂಡಲಗಿ ತಾಲೂಕಿನ ಗುರ್ಲಾಪುರ ಗ್ರಾಮದಲ್ಲಿ ರೈತರು ಚಳಿ, ಗಾಳಿಯೆನ್ನದೆ ನಡೆಸುತ್ತಿರುವ ಅಹೋರಾತ್ರಿ ಪ್ರತಿಭಟನೆಯು 7ನೇ ದಿನಕ್ಕೆ ಕಾಲಿಟ್ಟಿದೆ.
ವಿಜಯೇಂದ್ರಗೆ ಹುಟ್ಟಹಬ್ಬದ ಶುಭಾಶಯ ಕೋರಿದ ರೈತರು: ರೈತರ ಅಹೋರಾತ್ರಿ ಪ್ರತಿಭಟನೆಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ. ವೈ. ವಿಜಯೇಂದ್ರ ಅವರೂ ಭಾಗವಹಿಸಿದರು. ಪ್ರತಿಭಟನೆಯ ಸ್ಥಳಕ್ಕೆ ಮಂಗಳವಾರ ಭೇಟಿ ನೀಡಿದ್ದ ಅವರು, ತಮ್ಮ ಹುಟ್ಟುಹಬ್ಬದ ನಡುವೆಯೂ ರೈತರ ಪ್ರತಿಭಟನೆಯಲ್ಲಿ ಪಾಲ್ಗೊಂಡು, ಅನ್ನದಾತರ ಪರ ಹೋರಾಟಕ್ಕೆ ಸಾಥ್ ನೀಡಿದ್ದಾರೆ. ಪ್ರತಿಭಟನಾ ಸ್ಥಳದಲ್ಲೇ ರೈತರು ವಿಜಯೇಂದ್ರಗೆ ಹುಟ್ಟುಹಬ್ಬದ ಶುಭಾಶಯ ಕೋರಿದರು. ರೈತರ ಪ್ರತಿಭಟನೆ ಸ್ಟೇಜ್ ಮೇಲೆಯೇ ವಿಜಯೇಂದ್ರ ಮಲಗಿದ್ದರು. ಮಧ್ಯರಾತ್ರಿ ವೇಳೆಗೆ ಅವರನ್ನು ಎಬ್ಬಿಸಿದ ರೈತರು ಜನ್ಮದಿನದ ಶುಭಾಶಯ ತಿಳಿಸಿದರು.
ಹೋರಾಟವನ್ನು ಹಗುರವಾಗಿ ತೆಗೆದುಕೊಳ್ಳಬೇಡಿ: ಪ್ರತಿಭಟನೆ ವೇಳೆ ಮಾಧ್ಯಮದವರೊಂದಿಗೆ ಮಾತನಾಡಿದ ವಿಜಯೇಂದ್ರ, ”ಕಳೆದ 6 ದಿನಗಳಿಂದ ಕಬ್ಬು ಬೆಳೆಗಾರರು ಶಾಂತಿಯುತವಾಗಿ ಪ್ರತಿಭಟನೆ ನಡೆಸುತ್ತಿದ್ದು, ರಾಜ್ಯ ಸರ್ಕಾರ ಇದಕ್ಕೆ ಕವಡೆಕಾಸಿನ ಕಿಮ್ಮತ್ತನ್ನೂ ನೀಡುತ್ತಿಲ್ಲ. ನಾನು ಇಲ್ಲಿ ಬಂದು, ಜಿಲ್ಲಾಧಿಕಾರಿಗೂ ಕೂಡ ಸರ್ಕಾರದ ಗಮನಕ್ಕೆ ತರುವಂತೆ ವಿನಂತಿ ಮಾಡಿದ್ದೇನೆ. ಈ ಹೋರಾಟವನ್ನು ಹಗುರವಾಗಿ ತೆಗೆದುಕೊಳ್ಳಬೇಡಿ. ಗುರ್ಲಾಪುರದಲ್ಲಿ ಹತ್ತಿರುವ ಪ್ರತಿಭಟನಾ ಕಿಡಿ ರಾಜ್ಯಾದ್ಯಂತ ಹಬ್ಬುತ್ತಿದೆ. ಎಲ್ಲಾ ತಾಲೂಕುಗಳಲ್ಲೂ ರೈತರು ಪ್ರತಿಭಟನೆ ಮಾಡುತ್ತಿದ್ದಾರೆ. ಪರಿಸ್ಥಿತಿ ಕೈಮೀರುವ ಮುನ್ನ ಸರ್ಕಾರದ ಗಮನಕ್ಕೆ ತರುವಂತೆ ಜಿಲ್ಲಾಧಿಕಾರಿಗೆ ತಿಳಿಸಿದ್ದೇನೆ. ಬುಧವಾರ ಸಚಿವರು ಬರುತ್ತಾರೆ ಎಂಬ ಮಾಹಿತಿ ಇದೆ, ಮುಂದೆ ಏನಾಗುತ್ತದೆ ಎಂದು ನೋಡೋಣ” ಎಂದು ಹೇಳಿದರು.
”ವಾಸ್ತವ್ಯ ಇರಬೇಕೆಂಬ ಆಲೋಚನೆ ಇರಲಿಲ್ಲ. ಆದರೆ ಇಲ್ಲಿಗೆ ಬಂದಾಗ, ಉರಿಬಿಸಿಲಿನಲ್ಲೂ ಕೂಡ ಸಾವಿರಾರು ರೈತರು ಪ್ರತಿಭಟನೆ ಮಾಡುತ್ತಿರುವುದನ್ನು ನೋಡಿದೆ. ಇಂತಹ ಸಂದರ್ಭದಲ್ಲಿ ಬಂದು, ಒಂದೆರಡು ತಾಸು ಮಾತ್ರ ಇದ್ದರೆ ಅಪರಾಧ ಆಗುತ್ತದೆ. ಹೀಗಾಗಿ ಅವರಿಗೆ ಮಾನಸಿಕ ಸ್ಥೈರ್ಯ ತುಂಬಬೇಕು, ಹೋರಾಟಕ್ಕೆ ಬಲ ನೀಡಬೇಕೆಂದು ನಾನು, ನಮ್ಮ ಇತರ ನಾಯಕರು ನಮ್ಮ ಜೊತೆಗಿದ್ದಾರೆ” ಎಂದರು.
ರೈತರ ಬಗ್ಗೆ ಸರ್ಕಾರದ ತಾತ್ಸಾರ: ”ಹೋರಾಟ ಕೈಮೀರಿ ಹೋಗಬಾರದು ಅಂತ ಇದ್ದರೆ, ರೈತರ ಆಕ್ರೋಶವನ್ನು ಅರ್ಥ ಮಾಡಿಕೊಂಡು, ಈಗಲೇ ಸ್ಪಂದನೆ ಮಾಡಲು ಸಚಿವರು ಸ್ಥಳಕ್ಕೆ ಬಂದರೆ ಸರ್ಕಾರಕ್ಕೂ, ರೈತರಿಗೂ ಒಳ್ಳೆಯದಾಗುತ್ತದೆ. ಹಿಂದೆ ಬಿಜೆಪಿ ಸರ್ಕಾರದಲ್ಲಿ ಯಡಿಯೂರಪ್ಪ ಸಿಎಂ ಆಗಿದ್ದಾಗ, ಸೀಸನ್ ಆರಂಭಕ್ಕೂ ಮುನ್ನವೇ ಸಕ್ಕರೆ ಕಾರ್ಖಾನೆ ಮಾಲೀಕರು ಹಾಗೂ ರೈತರ ಸಂಧಾನ ಸಭೆ ನಡೆಸಿ ಪರಿಹಾರ ಕಂಡುಕೊಂಡಿದ್ದರು. ಆದರೀಗ ಕಾಂಗ್ರೆಸ್ ಸರ್ಕಾರ ರೈತರ ಬಗ್ಗೆ ತಾತ್ಸಾರ ಮಾಡುತ್ತಿದೆ. ಇದರ ಪರಿಣಾಮ ರೈತರು ಬೀದಿಗಿಳಿದು ಪ್ರತಿಭಟಿಸುವ ಪರಿಸ್ಥಿತಿ ಎದುರಾಗಿದೆ. ರೈತರ ತಾಳ್ಮೆಯನ್ನು ಪರೀಕ್ಷೆ ಮಾಡಬೇಡಿ, ಅವರ ನ್ಯಾಯಸಮ್ಮತ ಬೇಡಿಕೆಯನ್ನು ಈಡೇರಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಸ್ಪಂದಿಸಬೇಕು” ಎಂದು ವಿಜಯೇಂದ್ರ ಆಗ್ರಹಿಸಿದರು.

