ವರದಿ: ಪ್ರಿಯಾಂಕಾ ಚಂದ್ರಶೇಖರ್ ಗಂಧನಹಳ್ಳಿ

ನವದೆಹಲಿ: ಹೊಸ ಸಿಬಿಐ ನಿರ್ದೇಶಕರ ಆಯ್ಕೆ ಪ್ರಕ್ರಿಯೆಗೆ ಸಂಬಂಧಿಸಿದಂತೆ ಲೋಕಸಭೆಯ ವಿರೋಧ ಪಕ್ಷದ ನಾಯಕ (LOP) ರಾಹುಲ್ ಗಾಂಧಿ ಸರ್ಕಾರದ ವಿರುದ್ಧ ತಿರುಗಿಬಿದ್ದಿದ್ದಾರೆ.

ಈ ಸಂಬಂಧ ಅವರು ಪ್ರಧಾನಿ ನರೇಂದ್ರ ಮೋದಿಗೆ ಪತ್ರ ಬರೆದಿದ್ದು, ಲೋಕಸಭೆ ವಿಪಕ್ಷ ನಾಯಕ ಅಂದ್ರೆ ರಬ್ಬರ್ ಸ್ಟ್ಯಾಂಪ್ ಅಲ್ಲ ಮತ್ತು ಈ ಪಕ್ಷಪಾತದ ಪ್ರಕ್ರಿಯೆಯಲ್ಲಿ ಭಾಗವಹಿಸುವ ಮೂಲಕ ತಮ್ಮ ಸಾಂವಿಧಾನಿಕ ಕರ್ತವ್ಯವನ್ನು ತ್ಯಜಿಸಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ. ಪದೇ ಪದೇ ಲಿಖಿತ ಮನವಿಗಳ ಹೊರತಾಗಿಯೂ ಅರ್ಹ ಅಭ್ಯರ್ಥಿಗಳ ಸಮಗ್ರ ವರದಿಗಳನ್ನು ನನಗೆ ಒದಗಿಸಿಲ್ಲ ಎಂದು ಗಾಂಧಿ ತಮ್ಮ ಪತ್ರದಲ್ಲಿ ತಿಳಿಸಿದ್ದಾರೆ.

ಸಮಿತಿ ಸಭೆಯಲ್ಲಿ ಮೊದಲ ಬಾರಿಗೆ ಅರವತ್ತೊಂಬತ್ತು ಅಭ್ಯರ್ಥಿಗಳ ಮೌಲ್ಯಮಾಪನ ದಾಖಲೆಗಳನ್ನು ಪರಿಶೀಲಿಸಲಾಗುತ್ತದೆ ಎಂದು ನಾನು ನಿರೀಕ್ಷಿಸಿದ್ದೆ. ಸಮಗ್ರ ವರದಿಯನ್ನು ನನಗೆ ನೀಡಿಲ್ಲ. ಪ್ರತಿಯೊಬ್ಬ ಅಭ್ಯರ್ಥಿಯ ಇತಿಹಾಸ ಮತ್ತು ಕಾರ್ಯಕ್ಷಮತೆಯನ್ನು ನಿರ್ಣಯಿಸಲು ಈ ದಾಖಲೆಗಳ ವಿವರವಾದ ಪರಿಶೀಲನೆಯು ನಿರ್ಣಾಯಕವಾಗಿದೆ ಎಂದು ಅವರು ಹೇಳಿದ್ದಾರೆ.

“ಯಾವುದೇ ಕಾನೂನು ಆಧಾರವಿಲ್ಲದೆ ಈ ಉದ್ದೇಶಪೂರ್ವಕ ಮಾಹಿತಿ ನಿರಾಕರಣೆಯು ಆಯ್ಕೆ ಪ್ರಕ್ರಿಯೆಯನ್ನು ಅಣಕಿಸುತ್ತದೆ ಮತ್ತು ನಿಮ್ಮ ಪೂರ್ವ ನಿರ್ಧಾರಿತ ಅಭ್ಯರ್ಥಿಯನ್ನು ಮಾತ್ರ ಆಯ್ಕೆ ಮಾಡಲಾಗಿದೆ ಎಂದು ಖಚಿತಪಡಿಸುತ್ತದೆ ಎಂದು ಅವರು ಕಿಡಿಕಾರಿದ್ದಾರೆ. ಮೂವರು ಸದಸ್ಯರ ಆಯ್ಕೆ ಸಮಿತಿಯು ಪ್ರಧಾನಿ, ಭಾರತದ ಮುಖ್ಯ ನ್ಯಾಯಮೂರ್ತಿ ಮತ್ತು ವಿರೋಧ ಪಕ್ಷದ ನಾಯಕರನ್ನು ಒಳಗೊಂಡಿದೆ.

“ಭಾರತದ ಪ್ರಮುಖ ತನಿಖಾ ಸಂಸ್ಥೆಯಾಗಿರುವ ಸಿಬಿಐ ಅನ್ನು ನಿಮ್ಮ ಸರ್ಕಾರ ಪದೇ ಪದೇ ದುರುಪಯೋಗಪಡಿಸಿಕೊಂಡು ರಾಜಕೀಯ ವಿರೋಧಿಗಳು, ಪತ್ರಕರ್ತರು ಮತ್ತು ಟೀಕಾಕಾರರನ್ನು ಗುರಿಯಾಗಿಸಿಕೊಂಡಿದೆ. ಅಂತಹದನ್ನು ತಡೆಗಟ್ಟುವ ಸಲುವಾಗಿಯೇ ವಿರೋಧ ಪಕ್ಷದ ನಾಯಕನನ್ನು ಆಯ್ಕೆ ಸಮಿತಿಯಲ್ಲಿ ಸೇರಿಸಲಾಗಿದೆ. ವಿಷಾದಕರವೆಂದರೆ, ಈ ಪ್ರಕ್ರಿಯೆಯಲ್ಲಿ ನೀವು ನನಗೆ ಯಾವುದೇ ಅರ್ಥಪೂರ್ಣ ಜವಾಬ್ದಾರಿಯನ್ನು ನಿರಾಕರಿಸುತ್ತಲೇ ಬಂದಿದ್ದೀರಿ ಎಂದು ಮೇ 5, 2025 ರಂದು ನಡೆದ ಹಿಂದಿನ ಸಭೆಯಲ್ಲಿ ತಮ್ಮ ಭಿನ್ನಾಭಿಪ್ರಾಯವನ್ನು ದಾಖಲಿಸಿದ್ದಾಗಿ ಗಾಂಧಿ ಹೇಳಿಕೊಂಡಿದ್ದಾರೆ.

Share.

'ಸಂಭ್ರಮಪ್ರಭ.ಕಾಮ್' (sambramaprabha.com) ಕನ್ನಡಿಗರ ವಿಶ್ವಾಸಾರ್ಹ ಡಿಜಿಟಲ್ ನ್ಯೂಸ್ ಪೋರ್ಟಲ್. ರಾಜ್ಯ, ರಾಷ್ಟ್ರ, ರಾಜಕೀಯ, ಮನರಂಜನೆ, ಕ್ರೀಡೆ ಹಾಗೂ ಸ್ಥಳೀಯ ವಿದ್ಯಮಾನಗಳ ನಿಖರ ಮತ್ತು ನೈಜ ಸುದ್ದಿಗಳನ್ನು ಅತ್ಯಂತ ವೇಗವಾಗಿ ನಿಮ್ಮ ಮುಂದಿಡುವುದೇ ನಮ್ಮ ಪ್ರಮುಖ ಗುರಿ. ಸತ್ಯ, ನಿಷ್ಪಕ್ಷಪಾತ ಹಾಗೂ ಜನಪರ ಪತ್ರಿಕೋದ್ಯಮದ ಆಶಯದೊಂದಿಗೆ ನಾವು ಹೆಜ್ಜೆ ಇಡುತ್ತಿದ್ದೇವೆ. ಸದಾ ಸತ್ಯದ ಪರ, ನಿಮ್ಮ ಧ್ವನಿಯಾಗಿ. ಸಂಪಾದಕರು: ಸುರೇಶ್ ಕೆ.ಟಿ (Suresh K.T)

Leave A Reply

Exit mobile version