BREAKING NEWS
ಕೆಎಸ್ಆರ್ ರೈಲು ನಿಲ್ದಾಣದ ಯಾರ್ಡ್ ಮೇಲ್ದರ್ಜೆಗೇರಿಕೆ: ಇನ್ನು ಮುಂದೆ ರೈಲು ಸಂಚಾರ ಸರಾಗ   •   ಬಿಡದಿ ಟೌನ್‌ಶಿಪ್‌ ವಿವಾದ: ಮೋದಿ ಹೆಸರಲ್ಲಿ ರಿಯಲ್ ಎಸ್ಟೇಟ್ ದಂಧೆ – ಎಚ್‌ಡಿಕೆ ಕಿಡಿ | Bidadi Township Row   •   ಕಾಂಗ್ರೆಸ್ ಅಭ್ಯರ್ಥಿ ನಾಮಪತ್ರ ರದ್ದು: ಚುನಾವಣಾ ಆಯೋಗದ ನಡೆಗೆ ಜಾಲತಾಣಗಳಲ್ಲಿ ಆಕ್ರೋಶ   •   ಗೃಹಲಕ್ಷ್ಮಿ & ಗೃಹಜ್ಯೋತಿ ಪುನಃ ಅರ್ಜಿ – CM DK ಆದೇಶ   •   ಬೆಂಗಳೂರು: ಭ್ರಷ್ಟಾಚಾರ ವಿರುದ್ಧ ಮುಖ್ಯಮಂತ್ರಿ ಶಿವಕುಮಾರ್ ಕಠಿಣ ನಿರ್ದೇಶನ   •   ‘ಮೇಕಿನ್ ಇಂಡಿಯಾ ಕೇಳಿದ್ರೆ, ಲೀಕ್ ಇನ್ ಇಂಡಿಯಾ ಕೊಟ್ರಿ’: ದೆಹಲಿಯಲ್ಲಿ ‘ಕಾಕ್ರೋಚ್ ಪಾರ್ಟಿ’ಯಿಂದ ಬೃಹತ್ ಪ್ರತಿಭಟನೆ!   •   ಸಿಎಂ ಸ್ಥಾನದಿಂದ ಇಳಿದರೂ ಕಡಿಮೆಯಾಗದ ಸಿದ್ದರಾಮಯ್ಯ ಖದರ್: ಬಿ.ಕೆ. ಹರಿಪ್ರಸಾದ್ ಹೊಸ ಕೆಪಿಸಿಸಿ ಅಧ್ಯಕ್ಷ, ಆಪ್ತರಿಗೆ ಮಂತ್ರಿಗಿರಿ!   •   ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡ ಬೆನ್ನಲ್ಲೇ ಡಿ.ಕೆ.ಶಿವಕುಮಾರ್ ಮಹತ್ವದ ಘೋಷಣೆ: ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್   •  

—Advertisement—

,

ಡಿಕೆ ಶಿವಕುಮಾರ್ ಅವರ ‘ನೀರಿನ ಹೆಜ್ಜೆ’ ಬಿಡುಗಡೆ: ನೀರಾವರಿ ಯೋಜನೆಗಳಿಗೆ ಕೇಂದ್ರ ಸಹಕರಿಸುತ್ತಿಲ್ಲ ಎಂದ ಡಿಸಿಎಂ

Author Picture
Published On: November 15, 2025

—Advertisement—

Updated By: Priyalachhi

ಬೆಂಗಳೂರು: ಕೃಷ್ಣಾ, ಮಹದಾಯಿ ಸೇರಿದಂತೆ ರಾಜ್ಯದ ಪ್ರಮುಖ ನೀರಾವರಿ ಯೋಜನೆಗಳ ಪರ ನ್ಯಾಯಾಲಯದ ತೀರ್ಪು ಬಂದಿದ್ದರೂ ಅಧಿಸೂಚನೆ ಹೊರಡಿಸದ, ಅನುಮತಿ ನೀಡದ ಕೇಂದ್ರ ಸರ್ಕಾರದ ಅಸಹಕಾರದಿಂದ ಈ ಯೋಜನೆಗಳು ಸ್ಥಗಿತಗೊಂಡಿವೆ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಬೇಸರ ವ್ಯಕ್ತಪಡಿಸಿದರು.

ತಾವು ರಚಿಸಿರುವ ‘ನೀರಿನ ಹೆಜ್ಜೆ’ ಕೃತಿಯನ್ನು ಸಿಎಂ ಸಿದ್ದರಾಮಯ್ಯ ಅವರು ವಿಧಾನಸೌಧದ ಬ್ಯಾಂಕ್ವೆಟ್ ಹಾಲ್​ನಲ್ಲಿ ಶುಕ್ರವಾರ ಬಿಡುಗಡೆ ಮಾಡಿದ ಸಂದರ್ಭದಲ್ಲಿ ಡಿ ಕೆ ಶಿವಕುಮಾರ್ ಅವರು ಮಾತನಾಡಿದರು. ಕೃಷ್ಣಾ ನದಿ ವಿವಾದದಲ್ಲಿ ಕರ್ನಾಟಕಕ್ಕೆ ಹಂಚಿಕೆಯಾಗಿರುವ ನೀರು ಬಳಸಿಕೊಳ್ಳಲು ಕೇಂದ್ರ ಸರ್ಕಾರ ಅಧಿಸೂಚನೆ ಪ್ರಕಟಿಸುತ್ತಿಲ್ಲ. ಅಂದು ಯೋಜನೆಗೆ ಒಪ್ಪಿದ್ದ ಮಹಾರಾಷ್ಟ್ರ ಇಂದು ವಿರೋಧ ವ್ಯಕ್ತಪಡಿಸುತ್ತಿದೆ. ಮಹದಾಯಿ ಬಗ್ಗೆ ಸುಪ್ರೀಂ ಕೋರ್ಟ್ ತೀರ್ಪು ಬಂದಿದ್ದರೂ ಅನುಷ್ಠಾನ ಆಗಿಲ್ಲ. ಗೋವಾದಲ್ಲಿ ಒಬ್ಬ ಸಂಸದ ಇದ್ದಾನೆ. ನಮ್ಮಲ್ಲಿ 28 ಸಂಸದರಿದ್ದರೂ ನಮ್ಮ ರಾಜ್ಯಕ್ಕೆ ನ್ಯಾಯ ಸಿಗುತ್ತಿಲ್ಲ. ಈ ಯೋಜನೆ ಜಾರಿಗೆ ಟೆಂಡರ್ ಕರೆಯಲಾಗಿದೆ. ಆದರೆ ಕೇಂದ್ರದ ಅರಣ್ಯ ಇಲಾಖೆ ಒಪ್ಪಿಗೆ ನೀಡುತ್ತಿಲ್ಲ ಎಂದರು.

ರಾಜ್ಯದ ಪ್ರಮುಖ ಕೃಷ್ಣಾ, ಮಹದಾಯಿ, ತುಂಗಭದ್ರಾ, ಮೇಕೆದಾಟು ಯೋಜನೆ ಜಾರಿ ವಿಚಾರವಾಗಿ ಕೇಂದ್ರದ ಮಂತ್ರಿಗಳನ್ನು ಐದು ಬಾರಿ ಭೇಟಿ ಮಾಡಿದ್ದೇನೆ. ಯಾವುದೇ ಫಲಿತಾಂಶ ಬಂದಿಲ್ಲ. ಇಂತಹ ಪರಿಸ್ಥಿತಿಯಲ್ಲಿ ನಮ್ಮ ರಾಜ್ಯದ ಹಿತ ಕಾಪಾಡುವುದು ಹೇಗೆ? ಎಂದು ಪ್ರಶ್ನಿಸಿದರು.

ರಾಜ್ಯಕ್ಕೆ ಆಗುತ್ತಿರುವ ಅನ್ಯಾಯದ ವಿರುದ್ಧ ಸಂಸದರು ಧ್ವನಿ ಎತ್ತುತ್ತಿಲ್ಲ: ಕೇಂದ್ರ ಬಜೆಟ್​ನಲ್ಲಿ ಭದ್ರಾ ಮೇಲ್ದಂಡೆ ಯೋಜನೆಗೆ 5300 ಕೋಟಿ ಅನುದಾನ ನೀಡುವುದಾಗಿ ಘೋಷಣೆ ಮಾಡಿತ್ತು. ಅದರ ಅಧಾರದ ಮೇಲೆ ಬೊಮ್ಮಾಯಿ ಅವರು ಕೂಡ ರಾಜ್ಯ ಬಜೆಟ್​ನಲ್ಲಿ ಅನುದಾನ ತೋರಿಸಿದ್ದರು. ಆದರೆ ಈವರೆಗೂ ಕೇಂದ್ರ ಸರ್ಕಾರ ಬಿಡಿಗಾಸು ಕೊಟ್ಟಿಲ್ಲ. ಈ ಬಗ್ಗೆ ಪ್ರಶ್ನೆ ಮಾಡುವ ಆತ್ಮಸ್ಥೈರ್ಯ ಬಿಜೆಪಿಯ ಯಾವ ಸಂಸದರಿಗೂ ಇಲ್ಲ. ಅವರು ರಾಜ್ಯದ ಪರ ಒಂದೇ ಒಂದು ಮಾತು ಆಡಿಲ್ಲ. ಅಷ್ಟಾದರೂ ಇವರು ಸಂಸದರಾಗಿ ಹೇಗೆ ಮುಂದುವರಿಯುತ್ತಿದ್ದಾರೆ ಎಂಬುದೇ ನನಗೆ ಅರಿವಾಗುತ್ತಿಲ್ಲ. ಕೇವಲ ರಾಜ್ಯ ಸರ್ಕಾರವನ್ನು ಟೀಕೆ ಮಾಡುವುದರಲ್ಲೇ ಕಾಲ ಕಳೆಯುತ್ತಿದ್ದಾರೆ. ನೆರೆಯ ತಮಿಳುನಾಡು, ಆಂಧ್ರ ಪ್ರದೇಶದವರು ತಮ್ಮ ರಾಜ್ಯದ ವಿಚಾರ ಬಂದಾಗ ಪಕ್ಷಬೇಧ ಮರೆತು ಒಂದಾಗಿ ಧ್ವನಿ ಎತ್ತುತ್ತಾರೆ. ನಮ್ಮ ಕೈಯಲ್ಲಿ ಎಷ್ಟು ದಿನ ಅಧಿಕಾರ ಇರುತ್ತದೆ ಎಂಬುದಕ್ಕಿಂತ, ಅಧಿಕಾರ ಇದ್ದಷ್ಟು ದಿನ ನಾವು ಏನು ಮಾಡುತ್ತೇವೆ ಎಂಬುದು ಮುಖ್ಯ ಎಂದು ಕಿಡಿಕಾರಿದರು.

ನೀರು ಎಲ್ಲರಿಗೂ ಬೇಕು. ಬೆಂಗಳೂರು ಅಷ್ಟು ದೊಡ್ಡದಾಗಿ ಬೆಳೆಯಲು ಕಾರಣ ನೀರು. ಬೆಂಗಳೂರು ಜಾಗತಿಕ ನಗರ ಎಂದು ವಾಜಪೇಯಿ ಅವರು ತಿಳಿಸಿದ್ದರು. ಈ ರಾಜ್ಯದಲ್ಲಿ ಮಹರಾಜರು ಕಟ್ಟಿದ ಅಣೆಕಟ್ಟುಗಳನ್ನು ಹೊರತುಪಡಿಸಿ, ಉಳಿದ ಎಲ್ಲಾ ಅಣೆಕಟ್ಟುಗಳು ನಿರ್ಮಾಣವಾಗಿರುವುದು ಕಾಂಗ್ರೆಸ್ ಸರ್ಕಾರದ ಅವಧಿಯಲ್ಲೇ. ನನಗೆ ರಾಜಕಾರಣ ಮಾತನಾಡಲು ಇಷ್ಟವಿಲ್ಲ. ಆದರೂ ಕಾಂಗ್ರೆಸ್ ಬಿಟ್ಟು ಬೇರೆ ಸರ್ಕಾರಗಳು ರಾಜ್ಯದಲ್ಲಿ ಒಂದೇ ಒಂದು ಅಣೆಕಟ್ಟು ನಿರ್ಮಿಸಿದೆಯೇ? ಎಂದು ಪ್ರಶ್ನಿಸಿದರು.

10 ನದಿ ವಿವಾದಗಳ ಪೈಕಿ ಕರ್ನಾಟಕದ್ದೇ 5 ನದಿ ವಿವಾದಗಳಿವೆ: ನೆಹರೂ ಅವರು ಅಣೆಕಟ್ಟುಗಳೇ ಆಧುನಿಕ ಭಾರತದ ದೇವಾಲಯ ಎಂದು ಕರೆದರು. ಅವರು ತುಂಗಭದ್ರಾ ಅಣೆಕಟ್ಟೆ ನಿರ್ಮಾಣ ಸಂದರ್ಭ ಕರ್ನಾಟಕಕ್ಕೆ ನೆರವು ಕೊಟ್ಟಿದ್ದರು. ದೇಶದಲ್ಲಿರುವ 10 ನದಿ ವಿವಾದಗಳ ಪೈಕಿ ಐದು ಕರ್ನಾಟಕದ್ದೇ ಆಗಿವೆ. ಈ ಬಗ್ಗೆ ಪುಸ್ತಕದಲ್ಲಿ ತಿಳಿಸಿದ್ದೇನೆ ಎಂದರು.

ರಾಜ್ಯದಲ್ಲಿ ಪ್ರತ್ಯೇಕ ಜಲ ಆಯೋಗ ಸ್ಥಾಪಿಸಲಾಗುವುದು. ನೀರಾವರಿಯಿಂದ ಕುಡಿಯುವ ಉದ್ದೇಶ ಹಾಗೂ ಕೈಗಾರಿಕೆಗಳಿಗೆ ನೀರು ಒದಗಿಸುವ ಬಗ್ಗೆ ಅಧ್ಯಯನ ಮಾಡಿ ಸರ್ಕಾರಕ್ಕೆ ಸಲಹೆ ನೀಡಲು ಈ ಆಯೋಗದ ಅಗತ್ಯವಿದೆ ಎಂದು ಅಭಿಪ್ರಾಯಪಟ್ಟರು.

ತಮಿಳುನಾಡು ಪಾಲಿನ 177 ಟಿಎಂಸಿ ನೀರನ್ನು ಬಿಡುವುದರಲ್ಲಿ ನಮ್ಮ ತಕರಾರಿಲ್ಲ. ಈ ಹಿಂದೆ ಇದ್ದ ನ್ಯಾಯಾಧೀಶರು ಒಮ್ಮೆ ತಮಿಳುನಾಡಿನವರಿಗೆ ಒಂದು ಮಾತು ಕೇಳುತ್ತಾರೆ. ನಿಮ್ಮ ಪಾಲಿನ 177 ಟಿಎಂಸಿ ನೀರು ನಿಮಗೆ ಬರುತ್ತಿರುವಾಗ, ಅವರು ಅಣೆಕಟ್ಟು ಕಟ್ಟಲು ಯಾಕೆ ಅಡ್ಡಿ ಮಾಡುತ್ತಿದ್ದೀರಿ ಎಂದು ಪ್ರಶ್ನೆ ಮಾಡುತ್ತಾರೆ. ಅದು ನನ್ನ ತಲೆಯಲ್ಲಿತ್ತು. ನಾವು ಇದನ್ನೇ ಇಟ್ಟುಕೊಂಡು ನಮ್ಮ ವಾದವನ್ನು ಬಲಿಷ್ಠವಾಗಿ ಮಂಡನೆ ಮಾಡಿದೆವು. ನಮ್ಮ ವಕೀಲರು ಬೇರೆ ರೀತಿ ವಾದ ಮಾಡಲು ಮುಂದಾಗಿದ್ದರು. ಆದರೆ ನಾನು ನಮ್ಮ ಸರ್ಕಾರದ ನಿಲುವು ಹೀಗಿದೆ, ನಮ್ಮ ವಾದ ನೇರವಾಗಿ ಸ್ಪಷ್ಟವಾಗಿ ನ್ಯಾಯಾಲಯದ ಮುಂದೆ ಮಂಡಿಸಬೇಕು ಎಂದು ಮಾರ್ಗದರ್ಶನ ನೀಡಿದೆ. ಅದರಂತೆ ವಾದ ಮಾಡಿದ ಪರಿಣಾಮ ವಿಶೇಷ ಪೀಠ ರಚನೆಯಾಗಿ ಈ ವಿಚಾರದಲ್ಲಿ ನ್ಯಾಯಾಲಯ ತೀರ್ಮಾನ ಮಾಡಲು ಸಾಧ್ಯವಿಲ್ಲ ಎಂದು ತಮಿಳುನಾಡಿನ ಅರ್ಜಿಯನ್ನು ವಜಾಗೊಳಿಸಿದೆ. ಸುಪ್ರೀಂ ಕೋರ್ಟಿನ ತೀರ್ಪು ತಮಿಳುನಾಡಿಗೂ ಅನುಕೂಲವಾಗಲಿದೆ. 66 ಟಿಎಂಸಿ ನೀರನ್ನು ಶೇಖರಣೆ ಮಾಡಿ ಕುಡಿಯುವ ಉದ್ದೇಶಕ್ಕೆ ಬಳಕೆ ಹಾಗೂ 400 ಮೆ.ವ್ಯಾಟ್ ವಿದ್ಯುತ್ ಉತ್ಪಾದನೆ ಈ ಯೋಜನೆಯಿಂದ ನಮ್ಮ ರಾಜ್ಯಕ್ಕೆ ಆಗುವ ಉಪಯೋಗ. ಉಳಿದಂತೆ ಹೆಚ್ಚು ಅನುಕೂಲ ತಮಿಳುನಾಡಿಗೆ ಆಗಲಿದೆ ಎಂದು ತಿಳಿಸಿದರು.

ಈಗ ನಮ್ಮ ಹೋರಾಟ ಏನಿದ್ದರೂ ಸಂಸದರು ಕೇಂದ್ರ ಸರ್ಕಾರದ ಮೇಲೆ ಒತ್ತಡ ತಂದು ಕೇಂದ್ರ ಜಲ ಆಯೋಗ ಹಾಗೂ ಕಾವೇರಿ ನೀರು ನಿಯಂತ್ರಣ ಪ್ರಾಧಿಕಾರದ ಅನುಮತಿ ಕೊಡಿಸಬೇಕು. ನಾನು ಈಗಾಗಲೇ ಮೇಕೆದಾಟು ವಿಭಾಗದ ಕಚೇರಿ ಆರಂಭಿಸಿ, ಮುಳುಗಡೆಯಾಗುವ ಅರಣ್ಯ ಪ್ರದೇಶಕ್ಕೆ ಪರ್ಯಾಯ ಜಮೀನು ನಿಗದಿ ಮಾಡಿದ್ದೇವೆ. ರಾಜಕೀಯದಲ್ಲಿ ಇಚ್ಛಾಶಕ್ತಿ ಇದ್ದರೆ ಇದೆಲ್ಲವೂ ಸಾಧ್ಯ ಎಂದು ಹೇಳಿದರು.

ತುಂಗಭದ್ರಾ ಸೇರಿ ಎಲ್ಲಾ ಅಣೆಕಟ್ಟು ಗೇಟ್ ಬದಲಿಸಲು ತೀರ್ಮಾನ: ಇನ್ನು ತುಂಗಭದ್ರಾ ನೀರಿನ ವಿಚಾರವಾಗಿ, ರೈತರು ನಮಗೆ ಒಂದು ಬೇಳೆ ನಷ್ಟವಾಗುತ್ತದೆ ಎಂದು ಒತ್ತಾಯ ಮಾಡುತ್ತಿದ್ದರು. ಆಗ ನಾನು ಅವರಿಗೆ ಕೇಳಿದೆ. ನಿಮಗೆ ಒಂದು ಬೇಳೆ ಮುಖ್ಯವೋ ಅಥವಾ ಅಣೆಕಟ್ಟು ಮುಖ್ಯವೋ ಎಂದು ಹೇಳಿದೆ. ಕೆಲವರು ರಾಜಕೀರಣ ಮಾಡಲು ಪ್ರಯತ್ನಿಸಿದರು. ರಾಜಕಾರಣ ಮಾಡುವುದಾದರೆ ಇಲ್ಲಿಗೆ ಬರಬೇಡಿ ಎಂದು ಹೇಳಿದೆ. ನನ್ನ ಸ್ಥಾನದಲ್ಲಿ ಕೂತು ಆಲೋಚಿಸಿ ಎಂದಾಗ ಅವರು ಒಪ್ಪಿದರು. ಅಣೆಕಟ್ಟಿನಲ್ಲಿ ಹೂಳು ತಂಬಿ 28 ಟಿಎಂಸಿ ನೀರು ನಷ್ಟವಾಗುತ್ತಿದೆ. ಇದಕ್ಕೆ ಪರ್ಯಾಯ ಯೋಜನೆ ರೂಪಿಸುವ ಬಗ್ಗೆ ಆಂಧ್ರ ಪ್ರದೇಶ ಸಿಎಂ ಚಂದ್ರಬಾಬು ನಾಯ್ಡು ಅವರಿಗೆ ಐದು ಬಾರಿ ಕರೆ ಮಾಡಿ ಸಭೆಗೆ ಸಮಯ ನಿಗದಿ ಮಾಡುವಂತೆ ಕೋರಿದ್ದೇನೆ. ಆದರೆ ಅವರಿಗೆ ಹೆಚ್ಚಿನ ನೀರು ಸಿಗುತ್ತಿದೆ ಎಂದು ಇದರ ಬಗ್ಗೆ ಆಸಕ್ತಿ ತೋರುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

'ಸಂಭ್ರಮಪ್ರಭ.ಕಾಮ್' (sambramaprabha.com) ಕನ್ನಡಿಗರ ವಿಶ್ವಾಸಾರ್ಹ ಡಿಜಿಟಲ್ ನ್ಯೂಸ್ ಪೋರ್ಟಲ್. ರಾಜ್ಯ, ರಾಷ್ಟ್ರ, ರಾಜಕೀಯ, ಮನರಂಜನೆ, ಕ್ರೀಡೆ ಹಾಗೂ ಸ್ಥಳೀಯ ವಿದ್ಯಮಾನಗಳ ನಿಖರ ಮತ್ತು ನೈಜ ಸುದ್ದಿಗಳನ್ನು ಅತ್ಯಂತ ವೇಗವಾಗಿ ನಿಮ್ಮ ಮುಂದಿಡುವುದೇ ನಮ್ಮ ಪ್ರಮುಖ ಗುರಿ. ಸತ್ಯ, ನಿಷ್ಪಕ್ಷಪಾತ ಹಾಗೂ ಜನಪರ ಪತ್ರಿಕೋದ್ಯಮದ ಆಶಯದೊಂದಿಗೆ ನಾವು ಹೆಜ್ಜೆ ಇಡುತ್ತಿದ್ದೇವೆ. ಸದಾ ಸತ್ಯದ ಪರ, ನಿಮ್ಮ ಧ್ವನಿಯಾಗಿ. ಸಂಪಾದಕರು: ಸುರೇಶ್ ಕೆ.ಟಿ (Suresh K.T)… Read More

Related News

Leave a Comment

Home
Web Stories
Instagram
WhatsApp