- ‘ಸಂಭ್ರಮ ಪ್ರಭ’ ದಿನಪತ್ರಿಕೆಯಲ್ಲಿ ಜುಲೈ 9 ರಂದು ಪ್ರಕಟವಾದ ವರದಿಯನ್ನು ಗಂಭೀರವಾಗಿ ಪರಿಗಣಿಸಿದ ಮುಖ್ಯಮಂತ್ರಿಗಳ ಸಚಿವಾಲಯ.
- ವಾಸ್ತವಾಂಶ ಪರಿಶೀಲಿಸಿ, ಕೂಡಲೇ ಅಗತ್ಯ ಕ್ರಮ ಕೈಗೊಳ್ಳುವಂತೆ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಸರ್ಕಾರಿ ಕಾರ್ಯದರ್ಶಿಗೆ ಸೂಚನೆ.
- ಅತಿ ಜರೂರಾಗಿ ಅನುಪಾಲನಾ ವರದಿ (Compliance Report) ಸಲ್ಲಿಸುವಂತೆ ಸಿಎಂ ವಿಶೇಷ ಕರ್ತವ್ಯಾಧಿಕಾರಿ ಡಾ. ಕೆ. ವೈಷ್ಣವಿ ಆದೇಶ.
- ಸೂಕ್ತ ಕ್ರಮಕ್ಕಾಗಿ ಬೆಂಗಳೂರು ನಗರ ಜಿಲ್ಲಾಧಿಕಾರಿಗಳಿಗೂ ಪತ್ರದ ಪ್ರತಿ ರವಾನೆ; ಬಡ ವಿದ್ಯಾರ್ಥಿಗಳಿಗೆ ಶೀಘ್ರವೇ ನ್ಯಾಯ ಸಿಗುವ ಭರವಸೆ.
ಬೆಂಗಳೂರು (ಕೆ.ಆರ್. ಪುರಂ):ಕೆ.ಆರ್. ಪುರಂ ತಾಲೂಕಿನ ಅವಲಹಳ್ಳಿಯಲ್ಲಿ ಬಾರ್ ಅಂಡ್ ರೆಸ್ಟೋರೆಂಟ್ ಇರುವ ಕಟ್ಟಡದಲ್ಲೇ ನಡೆಯುತ್ತಿದ್ದ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ (ಬಿಸಿಎಂ) ಬಾಲಕರ ವಿದ್ಯಾರ್ಥಿ ನಿಲಯದ ದಾರುಣ ಸ್ಥಿತಿ ಹಾಗೂ ನೂರಕ್ಕೂ ಹೆಚ್ಚು ವಿದ್ಯಾರ್ಥಿಗಳ ಪರದಾಟದ ಕುರಿತು ‘ಸಂಭ್ರಮ ಪ್ರಭ’ ದಿನಪತ್ರಿಕೆ ಎಳೆಎಳೆಯಾಗಿ ಬಿಚ್ಚಿಟ್ಟಿತ್ತು. ಈ ವರದಿಗೆ ಇದೀಗ ರಾಜ್ಯ ಸರ್ಕಾರ ಹಾಗೂ ಮುಖ್ಯಮಂತ್ರಿಗಳ ಸಚಿವಾಲಯ ತಕ್ಷಣವೇ ಸ್ಪಂದಿಸಿದೆ.
ಜುಲೈ 09, 2026 ರಂದು ‘ಸಂಭ್ರಮ ಪ್ರಭ’ ಪತ್ರಿಕೆಯಲ್ಲಿ ಪ್ರಕಟವಾದ “ಬಾರ್ ಕಟ್ಟಡದಲ್ಲೇ ಬಿಸಿಎಂ ಹಾಸ್ಟೆಲ್” ಎಂಬ ವಿಶೇಷ ವರದಿಯನ್ನು ಗಂಭೀರವಾಗಿ ಪರಿಗಣಿಸಿರುವ ಮುಖ್ಯಮಂತ್ರಿಗಳ ವಿಶೇಷ ಕರ್ತವ್ಯಾಧಿಕಾರಿ (Officer on Special Duty to CM) ಡಾ. ಕೆ. ವೈಷ್ಣವಿ ಅವರು, ಈ ಬಗ್ಗೆ ತಕ್ಷಣವೇ ಕಾರ್ಯಪ್ರವೃತ್ತರಾಗುವಂತೆ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಸರ್ಕಾರಿ ಕಾರ್ಯದರ್ಶಿಗೆ ಖಡಕ್ ಸೂಚನೆ ನೀಡಿದ್ದಾರೆ.
ಸಿಎಂ ಕಾರ್ಯಾಲಯದ ಪತ್ರದಲ್ಲಿ ಏನಿದೆ?
ಮುಖ್ಯಮಂತ್ರಿಗಳ ಸಚಿವಾಲಯದಿಂದ ಬಿಡುಗಡೆಯಾದ ಅಧಿಕೃತ ಪತ್ರದಲ್ಲಿ ‘ಸಂಭ್ರಮ ಪ್ರಭ’ ಪತ್ರಿಕೆಯ ವರದಿಯ ಸಾಲುಗಳನ್ನು ಯಥಾವತ್ತಾಗಿ ಉಲ್ಲೇಖಿಸಲಾಗಿದೆ. “ಬೆಂಗಳೂರು (ಕೆ.ಆರ್. ಪುರಂ): ಒಂದೆಡೆ ಜ್ಞಾನಾರ್ಜನೆಗಾಗಿ ಹಗಲಿರುಳು ಶ್ರಮಿಸುತ್ತಿರುವ ನೂರಕ್ಕೂ ಹೆಚ್ಚು ಬಡ ವಿದ್ಯಾರ್ಥಿಗಳು, ಮತ್ತೊಂದೆಡೆ ಅದೇ ಕಟ್ಟಡದಲ್ಲಿ ಹಗಲು-ರಾತ್ರಿ ಎನ್ನದೆ ತೂರಾಡುವ ಮದ್ಯವ್ಯಸನಿಗಳ ಆರ್ಭಟ… ಕಳೆದ ಎರಡು ವರ್ಷಗಳಿಂದ ಈ ವಿದ್ಯಾರ್ಥಿ ನಿಲಯ ಇದೇ ಸ್ಥಳದಲ್ಲಿ ಕಾರ್ಯನಿರ್ವಹಿಸುತ್ತಿದೆ” ಎಂಬುದಾಗಿ ದಿನಾಂಕ 09.07.2026 ರಂದು ಪ್ರಕಟವಾದ ಸುದ್ದಿಯನ್ನು ಪತ್ರದಲ್ಲಿ ಪ್ರಸ್ತಾಪಿಸಲಾಗಿದೆ.
“ಸದರಿ ವಿಷಯದ ವಾಸ್ತವಾಂಶದ ಬಗ್ಗೆ ಆದ್ಯತೆಯ ಮೇರೆಗೆ ನಿಯಾಮಾನುಸಾರ ಪರಿಶೀಲಿಸಿ, ತಕ್ಷಣವೇ ಅಗತ್ಯ ಕ್ರಮ ಕೈಗೊಂಡು, ಅನುಪಾಲನಾ ವರದಿಯನ್ನು ಅತಿ ಜರೂರಾಗಿ ಈ ಕಚೇರಿ (ವಿಧಾನಸೌಧದ ಕೊಠಡಿ ಸಂಖ್ಯೆ: 241) ಗೆ ಸಲ್ಲಿಸಲು ಸಂಬಂಧಪಟ್ಟವರಿಗೆ ನಿರ್ದೇಶನ ನೀಡುವಂತೆ ಮಾನ್ಯ ಮುಖ್ಯಮಂತ್ರಿಯವರಿಂದ ನಿರ್ದೇಶಿತಳಾಗಿದ್ದೇನೆ” ಎಂದು ಡಾ. ಕೆ. ವೈಷ್ಣವಿ ಅವರು ಸ್ಪಷ್ಟವಾಗಿ ಆದೇಶಿಸಿದ್ದಾರೆ.
ಜಿಲ್ಲಾಧಿಕಾರಿಗಳಿಗೂ ಸೂಚನೆ:
ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಕಾರ್ಯದರ್ಶಿಗಳಿಗೆ ಮಾತ್ರವಲ್ಲದೆ, ಈ ಪತ್ರದ ಪ್ರತಿಯನ್ನು ಬೆಂಗಳೂರು ನಗರ ಜಿಲ್ಲೆಯ ಜಿಲ್ಲಾಧಿಕಾರಿಗಳಿಗೂ (DC) ಕಳುಹಿಸಲಾಗಿದ್ದು, ಈ ಕೂಡಲೇ ಸೂಕ್ತ ಕ್ರಮ ಕೈಗೊಳ್ಳುವಂತೆ ಸೂಚಿಸಲಾಗಿದೆ.
ವಿದ್ಯಾರ್ಥಿಗಳಲ್ಲಿ ಮೂಡಿದ ಭರವಸೆ:
ಹಾಸ್ಟೆಲ್ನಲ್ಲಿದ್ದರೂ ನೆಮ್ಮದಿಯಾಗಿ ಓದಲು ಹಾಗೂ ನಿದ್ದೆ ಮಾಡಲು ಸಾಧ್ಯವಾಗದೆ ಹಗಲಿರುಳು ಕುಡುಕರ ಕಿರುಚಾಟಕ್ಕೆ ಬೇಸತ್ತಿದ್ದ ವಿದ್ಯಾರ್ಥಿಗಳು ಹಾಗೂ ಅವರ ಪೋಷಕರು ಅಧಿಕಾರಿಗಳ ನಿರ್ಲಕ್ಷ್ಯದ ವಿರುದ್ಧ ಆಕ್ರೋಶ ಹೊರಹಾಕಿದ್ದರು. ಇದೀಗ ‘ಸಂಭ್ರಮ ಪ್ರಭ’ದ ವರದಿಯಿಂದಾಗಿ ಮುಖ್ಯಮಂತ್ರಿಗಳ ಕಚೇರಿಯೇ ನೇರವಾಗಿ ಎಚ್ಚೆತ್ತುಕೊಂಡಿರುವುದು ವಿದ್ಯಾರ್ಥಿಗಳಲ್ಲಿ ಹೊಸ ಭರವಸೆ ಮೂಡಿಸಿದೆ. ಬಡ ವಿದ್ಯಾರ್ಥಿಗಳನ್ನು ಈ ಕೂಡಲೇ ಸುರಕ್ಷಿತ ಕಟ್ಟಡಕ್ಕೆ ಸ್ಥಳಾಂತರ ಮಾಡುವವರೆಗೂ ‘ಸಂಭ್ರಮ ಪ್ರಭ’ ಈ ಪ್ರಕರಣದ ಬೆನ್ನುಬಿಡದೆ ಕಣ್ಗಾವಲಿಡಲಿದೆ.
