Updated By: Priyalachhi
ಬೆಂಗಳೂರು: ನಮ್ಮ ಮೆಟ್ರೋ (Namma Metro) ಪ್ರಯಾಣಿಕರಿಗೆ ಮತ್ತೊಮ್ಮೆ ದರ ಏರಿಕೆಯ ಬಿಸಿ ತಟ್ಟಲಿದೆ. ಹೌದು…ಇನ್ನೂ ಮೂರೇ ತಿಂಗಳಲ್ಲೇ ಮತ್ತೆ ಮೆಟ್ರೋ ದರ ಮತ್ತಷ್ಟು ಏರಿಕೆ ಆಗಲಿದೆ. ಪ್ರತಿ ವರ್ಷ ಫೆಬ್ರವರಿಯಲ್ಲಿ 5% ರಷ್ಟು ಟಿಕೆಟ್ ದರ ಏರಿಕೆ ಮಾಡಲು ಬಿಎಂಆರ್ಸಿಎಲ್ (BMRCL) ಮುಂದಾಗಿದೆ. ಈಗಾಗಲೇ ಬಿಎಂಆರ್ಸಿಎಲ್ ಅಧಿಕಾರಿಗಳ ತಪ್ಪು ಲೆಕ್ಕದಿಂದ ದೇಶದಲ್ಲೇ ನಮ್ಮ ಮೆಟ್ರೋ ದುಬಾರಿ ಮೆಟ್ರೋ ಅನ್ನಿಸಿಕೊಂಡಿದೆ. ಇಂತಹ ಸಂದರ್ಭದಲ್ಲಿ ಪ್ರತಿವರ್ಷ 5% ರಷ್ಟು ಏರಿಕೆ ಮಾಡಿದ್ರೆ, ಮೆಟ್ರೋ ರೈಲಿನಲ್ಲಿ ಪ್ರಯಾಣಿಕರು ಪ್ರಯಾಣ ಮಾಡಲು ಸಾಧ್ಯವಾ ಎನ್ನುವ ಪ್ರಶ್ನೆ ಹುಟ್ಟು ಹಾಕಿದೆ.
ಇಡೀ ದೇಶದಲ್ಲೇ ದುಬಾರಿ ಟಿಕೆಟ್ ದರ ಇರೋ ಮೆಟ್ರೋ ಎಂಬ ಕುಖ್ಯಾತಿ ಸಹ ನಮ್ಮ ಮೆಟ್ರೋದ ಮೇಲಿದೆ. ಇನ್ಮುಂದೆ ಪ್ರತಿ ವರ್ಷ ಫೆಬ್ರವರಿಯಲ್ಲಿ ಶೇಕಡಾ 5ರಷ್ಟು ಬೆಲೆ ಏರಿಕೆಗೆ ಬಿಎಂಆರ್‌ಸಿಎಲ್ ನ ದರ ನಿಗದಿ ಸಮಿತಿ ಶಿಫಾರಸ್ಸು ಮಾಡಿದೆ.ಇದರ ಪ್ರಕಾರ 2026ರ ಫೆಬ್ರವರಿಯಲ್ಲಿ ಮತ್ತೊಮ್ಮೆ ನಮ್ಮ ಮೆಟ್ರೋ ಪ್ರಯಾಣ ದರ ಏರಿಕೆ ಆಗೋದು ಗ್ಯಾರಂಟಿ ಎನ್ನಲಾಗಿದೆ.
ಇನ್ನೂ ಮೂರೇ ತಿಂಗಳಲ್ಲೇ ಮತ್ತೆ ಮೆಟ್ರೋ ದರ ಮತ್ತಷ್ಟು ಏರಿಕೆ ಆಗಲಿದ್ದು,ಈ ವರ್ಷ ಮಾಡಿರುವ ದರ ಏರಿಕೆ ತಪ್ಪಿನಿಂದ ಮುಂದಿನ ವರ್ಷಗಳಲ್ಲೂ ಪ್ರಯಾಣಿಕರಿಗೆ ಹೆಚ್ಚುವರಿ ಹೊರೆ ಆಗಲಿದೆ ಅನ್ಸುತ್ತೆ. ಈ ಬಗ್ಗೆ ಮಾತನಾಡಿದ ಮೆಟ್ರೋ ಪ್ರಯಾಣಿಕರು ಮೊದಲು ತಪ್ಪು ಲೆಕ್ಕ ಕೊಟ್ಟು ಏರಿಕೆ ಮಾಡಿರುವ ದರವನ್ನು ಇಳಿಸಲಿ,ನಂತರ ಪ್ರತಿವರ್ಷ ಬೇಕಾದರೆ 5% ರಷ್ಟು ಏರಿಕೆ ಮಾಡಲಿ ಅಂತಿದ್ದಾರೆ.

