ಬೆಂಗಳೂರು: “ರಾಜ್ಯದ ಹಣಕಾಸು ಇಲಾಖೆಯ ಆಂತರಿಕ ಪತ್ರಗಳು ಬೀದಿಯಲ್ಲಿ ಹರಿದಾಡುತ್ತಿವೆ. ನಿಮ್ಮದೇ ಇಲಾಖೆಯನ್ನು ನಿಯಂತ್ರಿಸಲು ನಿಮ್ಮಿಂದ ಆಗುತ್ತಿಲ್ಲ ಎಂದ ಮೇಲೆ ನೀವು ಮುಖ್ಯಮಂತ್ರಿಯಾಗಿ ಮುಂದುವರಿಯಲು ನಾಲಾಯಕ್. ಕೂಡಲೇ ರಾಜೀನಾಮೆ ಕೊಟ್ಟು ತೊಲಗಿ,” ಎಂದು ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಅವರು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ಇದು ಯಾರ ಷಡ್ಯಂತ್ರ?
ಹಣಕಾಸು ಇಲಾಖೆಯ ಪತ್ರ ಲೀಕ್ ಆಗಿರುವ ಹಿಂದೆ ಯಾರ ಷಡ್ಯಂತ್ರ ಅಡಗಿದೆ? ಇದು ಸ್ವತಃ ಮಾಜಿ ಸಿಎಂ ಸಿದ್ದರಾಮಯ್ಯನವರ ಷಡ್ಯಂತ್ರವೋ ಅಥವಾ ಜಾರಕಿಹೊಳಿ ಅವರ ಷಡ್ಯಂತ್ರವೋ? ಎಂದು ಅಶೋಕ್ ಪ್ರಶ್ನಿಸಿದ್ದಾರೆ. ಹಣಕಾಸು ಇಲಾಖೆಯ ದಾಖಲೆಗಳು ಲೀಕ್ ಆಗಬೇಕಾದರೆ ಅದರ ಹಿಂದೆ ಖಂಡಿತಾ ಷಡ್ಯಂತ್ರವಿದ್ದೇ ಇರುತ್ತದೆ. ಇದು ಆಡಳಿತರೂಢ ಕಾಂಗ್ರೆಸ್ ಪಕ್ಷದೊಳಗಿನ ಒಳಜಗಳವನ್ನು ಸ್ಪಷ್ಟವಾಗಿ ಎತ್ತಿತೋರಿಸುತ್ತಿದೆ ಎಂದು ಟೀಕಿಸಿದ್ದಾರೆ. ಮುಖ್ಯಮಂತ್ರಿಯಾಗಿ ಡಿ.ಕೆ. ಶಿವಕುಮಾರ್ ಅಧಿಕಾರ ವಹಿಸಿಕೊಂಡ ಕೆಲವೇ ತಿಂಗಳುಗಳಲ್ಲಿ ಇಂತಹ ಆಂತರಿಕ ಭಿನ್ನಮತ ಸ್ಫೋಟಗೊಂಡಿರುವುದು ಸರ್ಕಾರದ ಸ್ಥಿರತೆಯ ಬಗ್ಗೆ ಪ್ರಶ್ನೆಗಳನ್ನು ಹುಟ್ಟುಹಾಕಿದೆ ಎಂದು ಅವರು ವಿಶ್ಲೇಷಿಸಿದ್ದಾರೆ.
ಬರಗಾಲ ನಿರ್ವಹಣೆಗೆ ಹಣವಿಲ್ಲ!
“ಒಂದೆಡೆ ಅಧಿವೇಶನದಲ್ಲಿ ಶಾಸಕರು ರೈತರ ಬರಗಾಲದ ಬಗ್ಗೆ ಚರ್ಚೆ ಮಾಡುತ್ತಿದ್ದಾರೆ. ರೈತರು ಪರಿಹಾರದ ಹಣ ಬರುತ್ತದೆ ಎಂದು ಕಾಯುತ್ತಿದ್ದಾರೆ. ಆದರೆ, ಫೈನಾನ್ಸ್ ಡಿಪಾರ್ಟ್‌ಮೆಂಟ್ ಪತ್ರದಲ್ಲಿ ‘ನಮಗೆ ಬರದ ಸಮಸ್ಯೆ ಇದೆ, ಆದರೆ ಪರಿಹಾರ ನೀಡಲು ನಮ್ಮ ಬಳಿ ಹಣವಿಲ್ಲ, ಯೋಚನೆ ಮಾಡಿ’ ಎಂದು ಮುಖ್ಯಮಂತ್ರಿಗಳಿಗೆ ಬರೆಯಲಾಗಿದೆ. ಪರಿಹಾರ ನೀಡುವ ಮುಂಚೆಯೇ ದುಡ್ಡಿಲ್ಲ ಎಂದು ಸರ್ಕಾರ ಕೈಚೆಲ್ಲಿದೆ. ಇದು ರಾಜ್ಯ ಸರ್ಕಾರಕ್ಕೆ ಬಿದ್ದ ಕಪಾಳಮೋಕ್ಷ” ಎಂದು ಅಶೋಕ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ರಾಜ್ಯ ಸರ್ಕಾರ ಸಂಪೂರ್ಣ ಪಾಪರ್ ಆಗಿದೆ. ಪರಿಸ್ಥಿತಿಯನ್ನು ನಿಭಾಯಿಸಲು ಆಗುತ್ತಿಲ್ಲ ಎಂದ ಮೇಲೆ ಡಿ.ಕೆ. ಶಿವಕುಮಾರ್ ಅಧಿಕಾರ ಬಿಟ್ಟು ತೊಲಗಬೇಕು. ಇಲ್ಲವಾದರೆ ರಾಜ್ಯದ ಜನರೇ ನಿಮ್ಮನ್ನು ಓಡಿಸುವ ಪರಿಸ್ಥಿತಿ ಬರುತ್ತದೆ. ರಾಜ್ಯವನ್ನು ದಿವಾಳಿ ಮಾಡಿ ಕೇರಳ ಮತ್ತು ಹಿಮಾಚಲ ಪ್ರದೇಶದ ರೀತಿಯಲ್ಲಿ ಭಿಕ್ಷೆ ಬೇಡುವ ಸ್ಥಿತಿಗೆ ತಂದಿರುವ ಈ ಸರ್ಕಾರ ನಾಚಿಕೆಗೇಡು ಎಂದು ಅವರು ಕಿಡಿಕಾರಿದ್ದಾರೆ.


