Updated By: Priyalachhi

ಬೆಂಗಳೂರು: ರಾಜ್ಯದಲ್ಲಿ ಸಿಎಂ ಬದಲಾವಣೆ ಕುರಿತಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ನಡುವೆ ನಡೆಯುತ್ತಿರುವ ಸಂಘರ್ಷ ಶೀಘ್ರವೇ ಇತ್ಯರ್ಥವಾಗಲಿದೆ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರು ಬುಧವಾರ ಹೇಳಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯಾವುದೇ ಸಮಸ್ಯೆಗೆ ಪರಿಹಾರ ಇದ್ದೇ ಇರುತ್ತದೆ. ರಾಜ್ಯದ ನಾಯಕತ್ವ ವಿಚಾರ ಕುರಿತು ಕಾಂಗ್ರೆಸ್ ನಾಯಕರಾದ ಸೋನಿಯಾ ಗಾಂಧಿ ಹಾಗೂ ರಾಹುಲ್ ಗಾಂಧಿ ಜೊತೆಗೆ ಚರ್ಚಿಸಿ ಈ ಬಗ್ಗೆ ತೀರ್ಮಾನ ಕೈಗೊಳ್ಳಲಾಗುವುದು ಎಂದು ಹೇಳಿದರು. ಈ ಮೂಲಕ ಸಿಎಂ ಕುರ್ಚಿ ಕುರಿತು ಸಿದ್ದರಾಮಯ್ಯ ಹಾಗೂ ಡಿಕೆ.ಶಿವಕುಮಾರ್ ನಡುವಿನ ತಿಕ್ಕಾಟವನ್ನು ಒಪ್ಪಿಕೊಂಡಿದ್ದಾರೆ.

ಸರ್ಕಾರ ಏನು ಮಾಡುತ್ತಿದೆ ಎಂಬುದನ್ನು ಕರ್ನಾಟಕದ ಜನರು ಮಾತ್ರ ನೋಡಲು ಸಾಧ್ಯ. ನಾನು ಹೇಳಲು ಬಯಸುವುದೇನೆಂದರೆ ಯಾವುದೇ ಸಮಸ್ಯೆಗಳೇ ಆದರೂ ಅದಕ್ಕೆ ಪರಿಹಾರ ಇದ್ದೇ ಇರುತ್ತದೆ. ನಮ್ಮ ನಾಯಕರಾದ ರಾಹುಲ್ ಗಾಂಧಿ, ಸೋನಿಯಾ ಗಾಂಧಿ ಜೊತೆಗೆ ಒಟ್ಟಿಗೆ ಕುಳಿತು ಚರ್ಚಿಸಲಾಗುವುದು. ನಂತರ ಸಮಸ್ಯೆಗೆ ಪರಿಹಾರ ನೀಡಲಾಗುವುದು ಎಂದು ಹೇಳಿದರು.

ಏತನ್ಮಧ್ಯೆ ಮಂಗಳವಾರ ರಾಹುಲ್ ಅವರನ್ನು ಭೇಟಿಯಾದ ಆರ್‌ಡಿಪಿಆರ್ ಮತ್ತು ಐಟಿ/ಬಿಟಿ ಸಚಿವ ಪ್ರಿಯಾಂಕ್ ಖರ್ಗೆ ಅವರು ಬುಧವಾರ ಬೆಂಗಳೂರಿಗೆ ವಾಪಸ್ಸಾದರು.

ಈ ವೇಳೆ ಮಾತನಾಡಿರುವ ಅವರು, ಕಾಂಗ್ರೆಸ್ ಹೈಕಮಾಂಡ್ ಗುರುವಾರ ಮತ್ತು ಶುಕ್ರವಾರ ದೆಹಲಿಯಲ್ಲಿ ಸಭೆ ಸೇರಿ ನಾಯಕತ್ವದ ಬಿಕ್ಕಟ್ಟಿನ ಬಗ್ಗೆ ಚರ್ಚಿಸಲಿದ್ದಾರೆಂದು ಹೇಳಿದರು.

ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಪಕ್ಷದ ಸೋಲು ಮತ್ತು ಹಿಂದುಳಿದ ವರ್ಗಗಳ ವಿಷಯದ ಬಗ್ಗೆ ಹೈಕಮಾಂಡ್ ಚರ್ಚೆ ನಡೆಸಲಿದೆ. ಈ ಸಂದರ್ಭದಲ್ಲಿ, ಕರ್ನಾಟಕದ ಬೆಳವಣಿಗೆಗಳ ಬಗ್ಗೆಯೂ ಚರ್ಚಿಸಲಿದ್ದಾರೆ. ಈ ಮೂಲಕ ಗೊಂದಲವನ್ನು ಪರಿಹರಿಸಲಿದ್ದಾರೆಂದು ತಿಳಿಸಿದರು.

ಈ ನಡುವೆ ರಾಹುಲ್ ಗಾಂಧಿಯವರು ಪ್ರಿಯಾಂಕ್ ಅವರನ್ನು ಚರ್ಚೆಗೆ ಕರೆದಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.

Share.

'ಸಂಭ್ರಮಪ್ರಭ.ಕಾಮ್' (sambramaprabha.com) ಕನ್ನಡಿಗರ ವಿಶ್ವಾಸಾರ್ಹ ಡಿಜಿಟಲ್ ನ್ಯೂಸ್ ಪೋರ್ಟಲ್. ರಾಜ್ಯ, ರಾಷ್ಟ್ರ, ರಾಜಕೀಯ, ಮನರಂಜನೆ, ಕ್ರೀಡೆ ಹಾಗೂ ಸ್ಥಳೀಯ ವಿದ್ಯಮಾನಗಳ ನಿಖರ ಮತ್ತು ನೈಜ ಸುದ್ದಿಗಳನ್ನು ಅತ್ಯಂತ ವೇಗವಾಗಿ ನಿಮ್ಮ ಮುಂದಿಡುವುದೇ ನಮ್ಮ ಪ್ರಮುಖ ಗುರಿ. ಸತ್ಯ, ನಿಷ್ಪಕ್ಷಪಾತ ಹಾಗೂ ಜನಪರ ಪತ್ರಿಕೋದ್ಯಮದ ಆಶಯದೊಂದಿಗೆ ನಾವು ಹೆಜ್ಜೆ ಇಡುತ್ತಿದ್ದೇವೆ. ಸದಾ ಸತ್ಯದ ಪರ, ನಿಮ್ಮ ಧ್ವನಿಯಾಗಿ. ಸಂಪಾದಕರು: ಸುರೇಶ್ ಕೆ.ಟಿ (Suresh K.T)

Leave A Reply

Exit mobile version