ತುಮಕೂರನ್ನು ಬೆಂಗಳೂರು ಉತ್ತರ ಜಿಲ್ಲೆ ಎಂದು ಘೋಷಣೆ ಮಾಡಿ: ಸಚಿವ ಪರಮೇಶ್ವರ್ ಆಗ್ರಹ

0
9

ವರದಿ: ಪ್ರಿಯಾಂಕಾ ಚಂದ್ರಶೇಖರ್ ಗಂಧನಹಳ್ಳಿ

ಬೆಂಗಳೂರು: ರಾಮನಗರ ಜಿಲ್ಲೆಯನ್ನು ‘ಬೆಂಗಳೂರು ದಕ್ಷಿಣ’ ಎಂದು ಮರುನಾಮಕರಣ ಮಾಡಿದ ಬೆನ್ನಲ್ಲೇ ಇದೀಗ ಕಲ್ಪತರು ನಾಡು ತುಮಕೂರು ಜಿಲ್ಲೆಯ ಹೆಸರನ್ನು ‘ಬೆಂಗಳೂರು ಉತ್ತರ’ ಎಂದು ಬದಲಾಯಿಸುವ ಪ್ರಸ್ತಾಪ ಮುನ್ನೆಲೆಗೆ ಬಂದಿದೆ.

ಇತ್ತೀಚೆಗೆ ನಡೆದ ಕಾರ್ಯಕ್ರಮವೊಂದರಲ್ಲಿ ಗೃಹ ಸಚಿವ ಹಾಗೂ ತುಮಕೂರು ಜಿಲ್ಲಾ ಉಸ್ತುವಾರಿ ಸಚಿವ ಡಾ. ಜಿ. ಪರಮೇಶ್ವರ್ ಅವರು ತುಮಕೂರನ್ನು ‘ಬೆಂಗಳೂರು ಉತ್ತರ’ ಜಿಲ್ಲೆ ಎಂದು ಘೋಷಣೆ ಮಾಡುವಂತೆ ಸರ್ಕಾರದ ಬಳಿ ಬೇಡಿಕೆ ಇಟ್ಟಿದ್ದಾರೆ. ಆದರೆ ಸಚಿವರ ಈ ಹೇಳಿಕೆಗೆ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವಿರೋಧ ವ್ಯಕ್ತವಾಗಿದೆ.

ರಾಮನಗರ ಜಿಲ್ಲೆಯನ್ನು ಬೆಂಗಳೂರು ದಕ್ಷಿಣ ಎಂದು ಘೋಷಣೆ ಮಾಡಲಾಗಿದೆ. ಅದೇ ರೀತಿ ತುಮಕೂರನ್ನು ಬೆಂಗಳೂರು ಉತ್ತರ ಎಂದು ಮಾಡಬೇಕು. ವಿದೇಶದಲ್ಲಿರುವವರಿಗೆ, ಉದಾಹರಣೆಗೆ ನ್ಯೂಯಾರ್ಕ್‌ನಲ್ಲಿರುವವರಿಗೆ ತುಮಕೂರು ಎಲ್ಲಿದೆ ಎಂದು ಗೊತ್ತಾಗುವುದಿಲ್ಲ, ಆದರೆ ಬೆಂಗಳೂರು ಉತ್ತರ ಎಂದರೆ ಸುಲಭವಾಗಿ ಅರ್ಥವಾಗುತ್ತದೆ. ಬ್ರ್ಯಾಂಡ್ ಬೆಂಗಳೂರು ವಿಸ್ತರಣೆಯಡಿ ಈ ಹೆಜ್ಜೆ ಇಡುವುದು ಅಗತ್ಯವಿದೆ ಎಂದು ಹೇಳಿದರು.

ತುಮಕೂರು ಬೆಂಗಳೂರಿಗೆ ತುಂಬ ಹತ್ತಿರದಲ್ಲಿದೆ. ಕೇವಲ 60 ಕಿಲೋಮೀಟರ್ ದೂರದಲ್ಲಿದೆ. ನನ್ನ ಬೇಡಿಕೆ ಏನೆಂದರೆ ತುಮಕೂರು ಬೆಂಗಳೂರಿನ ಭಾಗವಾಗಬೇಕು.

ರಾಮನಗರವನ್ನು ಬೆಂಗಳೂರು ದಕ್ಷಿಣ ಎಂದು ಮಾಡಿರುವಂತೆ, ತುಮಕೂರನ್ನು ಬೆಂಗಳೂರು ಉತ್ತರ ಎಂದು ಘೋಷಿಸಬೇಕು. “ಮುಂದಿನ ದಿನಗಳಲ್ಲಿ ತುಮಕೂರು ಬೆಂಗಳೂರಿನ ಭಾಗವಾಗಲಿದೆ. ಅದಕ್ಕಾಗಿ ನಾನು ಎಲ್ಲ ಪ್ರಯತ್ನಗಳನ್ನು ಮಾಡುತ್ತಿದ್ದೇನೆ ಎಂದು ತಿಳಿಸಿದರು.

ತುಮಕೂರಿಗೆ ಮೆಟ್ರೋ ಸಂಪರ್ಕ ಕಲ್ಪಿಸುವ ಯೋಜನೆಯೂ ಸಿದ್ಧವಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿಕೆ.ಶಿವಕುಮಾರ್ ಅವರು, ಈ ಯೋಜನೆಗೆ ಒಪ್ಪಿಗೆ ನೀಡಬೇಕು ಎಂದು ಮನವಿ ಮಾಡಿದರು.

ಪರಮೇಶ್ವರ್‌ ಅವರ ಈ ಪ್ರಸ್ತಾವನೆಗೆ ಡಿ.ಕೆ. ಶಿವಕುಮಾರ್‌ ಕೂಡ ಬೆಂಬಲ ಸೂಚಿಸಿದರು. ಬೆಂಗಳೂರು ನಗರದ ಟ್ರಾಫಿಕ್ ಮತ್ತು ಜನಸಂದಣಿ ಸಮಸ್ಯೆಗೆ ಉತ್ತರ ದಿಕ್ಕಿನತ್ತ ವಿಸ್ತರಣೆ ಮಾಡುವುದು ಪರಿಹಾರವಾಗಿದೆ. ತುಮಕೂರನ್ನು ಎರಡನೇ ಬೆಂಗಳೂರಾಗಿ ರೂಪಿಸುವ ಆಲೋಚನೆಗೆ ನಾನು ಸಹ ಕೈಜೋಡಿಸುತ್ತೇನೆ ಎಂದು ಹೇಳಿದರು.

sambrama prabha editor suresh kt

LEAVE A REPLY

Please enter your comment!
Please enter your name here