—Advertisement—

ಆಂದ್ಲೆಯಲ್ಲಿ ‘ದೇವಪ್ರಶ್ನೆ’ ಇಟ್ಟ ಡಿಸಿಎಂ

Author Picture
Published On: December 19, 2025

—Advertisement—

Updated By: Priyalachhi

ಕಾರವಾರ: ರಾಜ್ಯದ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಶುಕ್ರವಾರ ಉತ್ತರಕನ್ನಡ ಜಿಲ್ಲೆಯ ಸುಪ್ರಸಿದ್ಧ ಧಾರ್ಮಿಕ ಕೇಂದ್ರಗಳಿಗೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು.

ಗೋಕರ್ಣದಲ್ಲಿ ಆತ್ಮಲಿಂಗ ದರ್ಶನ: ​ಬೆಳಿಗ್ಗೆ ಗೋಕರ್ಣಕ್ಕೆ ಆಗಮಿಸಿದ ಡಿ.ಕೆ. ಶಿವಕುಮಾರ್ ಅವರು, ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ವೈದ್ಯ ಅವರೊಂದಿಗೆ ಶ್ರೀ ಮಹಾಬಲೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿದರು. ದೇವರಿಗೆ ಬಿಲ್ವಪತ್ರೆ ಹಾಗೂ ಪಂಚಾಮೃತ ಅಭಿಷೇಕ ನೆರವೇರಿಸಿ, ಆತ್ಮಲಿಂಗದ ದರ್ಶನ ಪಡೆದರು. ಬಳಿಕ ಮಹಾಗಣಪತಿ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿ ಅಂಕೋಲಾದತ್ತ ಪ್ರಯಾಣ ಬೆಳೆಸಿದರು.

ಆಂದ್ಲೆಯಲ್ಲಿ ದೀರ್ಘಕಾಲದ ಪೂಜೆ ಮತ್ತು ‘ದೇವಪ್ರಶ್ನೆ’: ​ಅಂಕೋಲಾದ ಆಂದ್ಲೆ ಗ್ರಾಮದ ಶ್ರೀ ಜಗದೀಶ್ವರಿ ಅಮ್ಮನವರ ಸನ್ನಿಧಿಗೆ ಭೇಟಿ ನೀಡಿದ ಡಿಸಿಎಂ, ಅಲ್ಲಿನ ಪ್ರಶಾಂತ ವಾತಾವರಣದಲ್ಲಿ ದೇವಿಯ ಮುಂದೆ ಸುದೀರ್ಘ ಸಮಯ ಕಳೆದರು. ​ಸುಮಾರು ಒಂದೂವರೆ ತಾಸಿಗೂ ಅಧಿಕ ಕಾಲ ದೇವಸ್ಥಾನದಲ್ಲಿ ಕುಳಿತು ಅರ್ಚಕರ ಮೂಲಕ ‘ಪ್ರಶ್ನಾ ಕಾರ್ಯ’ ನಡೆಸಿದರು. ನಾಗದೇವತೆ ಹಾಗೂ ತುಳಸಿಗೆ ವಿಶೇಷ ಪೂಜೆ ಸಲ್ಲಿಸಿದ ಶಿವಕುಮಾರ್, ದೇವಿಯ ಆಶೀರ್ವಾದ ಪಡೆದರು.

​”ಹೈಕಮಾಂಡ್ ನಿರ್ಧಾರಕ್ಕೆ ಬದ್ಧ”: ಡಿಕೆಶಿ ಸ್ಪಷ್ಟನೆ
​ಪೂಜೆಯ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಡಿ.ಕೆ. ಶಿವಕುಮಾರ್, “ಐದು ವರ್ಷಗಳ ಹಿಂದೆ ಕುಟುಂಬದ ಕೆಲಸಕ್ಕಾಗಿ ಇಲ್ಲಿಗೆ ಬಂದು ಪ್ರಾರ್ಥಿಸಿದ್ದೆ, ಅದು ಈಡೇರಿದೆ. ಹಾಗಾಗಿ ಮತ್ತೆ ಬರುತ್ತೇನೆ ಎಂದು ಹರಕೆ ಹೊತ್ತಿದ್ದೆ, ಇಂದು ಬಂದಿದ್ದೇನೆ. ತಾಯಿ ಮತ್ತೆ ಆಶೀರ್ವಾದ ಮಾಡಲಿ ಎಂದು ಕೇಳಿಕೊಂಡಿದ್ದೇನೆ,” ಎಂದರು.

​ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸದನದಲ್ಲಿ ‘ನಾನೇ ಐದು ವರ್ಷ ಸಿಎಂ’ ಎಂದು ಹೇಳಿದ ಕುರಿತು ಪ್ರತಿಕ್ರಿಯಿಸಿದ ಅವರು, ​”ನಾನು ಯಾವತ್ತೂ ಅವರು ಐದು ವರ್ಷ ಇರಲ್ಲ ಎಂದು ಹೇಳಿಲ್ಲ. ಎಲ್ಲವೂ ಹೈಕಮಾಂಡ್ ನಿರ್ಧಾರದಂತೆ ನಡೆಯುತ್ತಿದೆ. ಹೈಕಮಾಂಡ್ ಸಿಎಂ ಪರವಾಗಿ ಇರುವುದರಿಂದಲೇ ಅವರು ಆ ಸ್ಥಾನದಲ್ಲಿದ್ದಾರೆ. ನಮ್ಮಲ್ಲಿ ಒಪ್ಪಂದವಾಗಿದೆ, ಅದರಂತೆ ನಡೆದುಕೊಳ್ಳುತ್ತೇವೆ. ನಾವಿಬ್ಬರೂ ಈ ಬಗ್ಗೆ ಮಾತನಾಡಿಕೊಂಡಿದ್ದೇವೆ ಹಾಗೂ ಹೈಕಮಾಂಡ್ ಅನ್ನೂ ಒಪ್ಪಂದಕ್ಕೆ ತಂದಿದ್ದೇವೆ.” ಎಂದು ಡಿಸಿಎಂ ತಿಳಿಸಿದರು.

​​ಮುಖ್ಯಮಂತ್ರಿ ಸ್ಥಾನ ಹಾಗೂ ಸಮಸ್ಯೆ ಪರಿಹಾರಕ್ಕೆ ದಿನಾಂಕ ನಿಗದಿಯಾಗಿದೆಯೇ ಎಂಬ ಮಾಧ್ಯಮಗಳ ನೇರ ಪ್ರಶ್ನೆಗೆ ಡಿಕೆಶಿ ಯಾವುದೇ ಮೌಖಿಕ ಉತ್ತರ ನೀಡದೆ, ಕೇವಲ ಮುಗುಳು ನಗೆ ಬೀರುತ್ತಾ ನಿರ್ಗಮಿಸಿದರು.

'ಸಂಭ್ರಮಪ್ರಭ.ಕಾಮ್' (sambramaprabha.com) ಕನ್ನಡಿಗರ ವಿಶ್ವಾಸಾರ್ಹ ಡಿಜಿಟಲ್ ನ್ಯೂಸ್ ಪೋರ್ಟಲ್. ರಾಜ್ಯ, ರಾಷ್ಟ್ರ, ರಾಜಕೀಯ, ಮನರಂಜನೆ, ಕ್ರೀಡೆ ಹಾಗೂ ಸ್ಥಳೀಯ ವಿದ್ಯಮಾನಗಳ ನಿಖರ ಮತ್ತು ನೈಜ ಸುದ್ದಿಗಳನ್ನು ಅತ್ಯಂತ ವೇಗವಾಗಿ ನಿಮ್ಮ ಮುಂದಿಡುವುದೇ ನಮ್ಮ ಪ್ರಮುಖ ಗುರಿ. ಸತ್ಯ, ನಿಷ್ಪಕ್ಷಪಾತ ಹಾಗೂ ಜನಪರ ಪತ್ರಿಕೋದ್ಯಮದ ಆಶಯದೊಂದಿಗೆ ನಾವು ಹೆಜ್ಜೆ ಇಡುತ್ತಿದ್ದೇವೆ. ಸದಾ ಸತ್ಯದ ಪರ, ನಿಮ್ಮ ಧ್ವನಿಯಾಗಿ. ಸಂಪಾದಕರು: ಸುರೇಶ್ ಕೆ.ಟಿ (Suresh K.T)… Read More

Related News

Leave a Comment

Home
Web Stories
Instagram
WhatsApp