ವರದಿ: ಪ್ರಿಯಾಂಕಾ ಚಂದ್ರಶೇಖರ್ ಗಂಧನಹಳ್ಳಿ
ಸೌದಿ ಅರೇಬಿಯಾದ ಪೂರ್ವ ಭಾಗದಲ್ಲಿರುವ ಅಲ್ ಜುಬೈಲ್ ಕೈಗಾರಿಕಾ ನಗರದ ಮೇಲೆ ಇರಾನ್ ಡ್ರೋನ್ ಹಾಗೂ ಮಿಸೈಲ್ ದಾಳಿ ನಡೆಸಿದ್ದು, ಪರಿಣಾಮ ಭಾರೀ ಅಗ್ನಿ ಅವಘಡ ಸಂಭಿಸಿದೆ ಎಂದು ತಿಳಿದುಬಂದಿದೆ.
ಈ ಅಗ್ನಿ ಅವಘಡವು ಗಲ್ಫ್ ಪ್ರದೇಶದ ಭದ್ರತೆ ಹಾಗೂ ಜಾಗತಿಕ ಇಂಧನ ಮಾರುಕಟ್ಟೆಯ ಮೇಲೆ ದೊಡ್ಡ ಪರಿಣಾಮ ಬೀರುವ ಸಾಧ್ಯತೆಯನ್ನು ಸೂಚಿಸುತ್ತಿದೆ ಎಂದು ಹೇಳಲಾಗುತ್ತಿದೆ.
ಇರಾನ್ ಮೂಲದ ಡ್ರೋನ್ ಮತ್ತು ಕ್ಷಿಪಣಿ ದಾಳಿಯ ಪರಿಣಾಮವಾಗಿ ಈ ಅವಘಡ ಸಂಭವಿಸಿದೆ ಎಂದು ಅಂತರಾಷ್ಟ್ರೀಯ ವರದಿಗಳು ತಿಳಿಸಿವೆ.
ಮಾಹಿತಿಗಳ ಪ್ರಕಾರ, ಈ ದಾಳಿ ಜಂಟಿಯಾಗಿ ರೀತಿಯಲ್ಲಿ ನಡೆದಿದ್ದು, ಹಲವು ಡ್ರೋನ್‌ಗಳು ಮತ್ತು ಬ್ಯಾಲಿಸ್ಟಿಕ್ ಕ್ಷಿಪಣಿಗಳನ್ನು ಬಳಸಿ ಕೈಗಾರಿಕಾ ಘಟಕಗಳನ್ನು ಗುರಿಯಾಗಿಸಲಾಗಿದೆ ಎಂದು ಹೇಳಲಾಗುತ್ತಿದೆ.
ಸೌದಿ ಅರೇಬಿಯಾದ ವಾಯು ರಕ್ಷಣಾ ವ್ಯವಸ್ಥೆಗಳು ಬಹುತೇಕ ದಾಳಿಗಳನ್ನು ಮಧ್ಯದಲ್ಲೇ ಹೊಡೆದುರುಳಿಸಿದರೂ, ಕೆಲವು ಕ್ಷಿಪಣಿಗಳ ಅವಶೇಷಗಳು ಅಥವಾ ದಾಳಿಗಳು ಪೆಟ್ರೋಕೆಮಿಕಲ್ ಘಟಕಗಳಲ್ಲಿ ಭಾರಿ ಸ್ಫೋಟಗಳನ್ನು ಸೃಷ್ಟಿವೆ ಎಂದು ತಿಳಿದುಬಂದಿದೆ. ಈ ಸ್ಫೋಟಗಳಿಂದ ಬೆಂಕಿ ವ್ಯಾಪಕವಾಗಿ ಹರಡಿ, ಹಲವು ಘಟಕಗಳು ಬೆಂಕಿಗಾಹುತಿಯಾದವು ಎಂದು ಹೇಳಲಾಗಿದೆ.
ಘಟನೆಯ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಬೆಂಕಿಯ ಕೆನ್ನಾಲಿಗೆ ಮುಗಿಲೆತ್ತರಕ್ಕೆ ಉರಿಯುತ್ತಿದ್ದು, ಆಗಸದವರೆಗೂ ದಟ್ಟ ಕಪ್ಪು ಹೊಗೆ ಕಾಣಿಸಿತ್ತಿರುವ ದೃಶ್ಯಗಳು ಕಂಡುಬಂದಿವೆ.
ಸ್ಥಳೀಯ ಅಗ್ನಿಶಾಮಕ ದಳಗಳು ತಕ್ಷಣವೇ ಕಾರ್ಯಾಚರಣೆಗೆ ಇಳಿದು ಬೆಂಕಿಯನ್ನು ನಿಯಂತ್ರಣಕ್ಕೆ ತರುವ ಪ್ರಯತ್ನ ನಡೆಸುತ್ತಿವೆ. ಕೆಲವು ವರದಿಗಳ ಪ್ರಕಾರ ಬೆಂಕಿಯನ್ನು ಭಾಗಶಃ ನಿಯಂತ್ರಣಕ್ಕೆ ತರಲಾಗಿದೆ ಎನ್ನಲಾಗುತ್ತಿದೆ. ಆದರೆ ಸಂಪೂರ್ಣ ನಂದಿಸಲು ಇನ್ನೂ ಸಮಯ ಬೇಕಾಗಬಹುದು ಎಂದು ವರದಿಗಳು ತಿಳಿಸಿವೆ.

