Updated By: Priyalachhi
ಬೆಂಗಳೂರು : ರಾಜ್ಯದಲ್ಲಿ ಯಾವಾಗ ಚುನಾವಣೆ ನಡೆದರೂ ಬಿಜೆಪಿ ಸ್ವಂತ ಬಲದ ಮೇಲೆ ಅಧಿಕಾರಕ್ಕೆ ಬರಲಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಪಕ್ಷದ ಕಚೇರಿಯಲ್ಲಿ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ 101ನೇ ಜನ್ಮದಿನ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ನಾಳೆ ಅಥವಾ 2028 ರಲ್ಲಿ ಚುನಾವಣೆ ನಡೆದರೆ, ಬಿಜೆಪಿ ಸುಮಾರು 130 ರಿಂದ 140 ಸ್ಥಾನಗಳನ್ನು ಗೆಲ್ಲುವ ಮೂಲಕ ಸ್ವಂತವಾಗಿ ಅಧಿಕಾರಕ್ಕೆ ಬರುವ ವಿಶ್ವಾಸವಿದೆ ಎಂದು ಅವರು ಹೇಳಿದರು.
ಕರ್ನಾಟಕವು ಮುಂದೊಂದು ದಿನ ದಕ್ಷಿಣ ಭಾರತದಲ್ಲಿ ಬಿಜೆಪಿಯ ಭದ್ರ ಕೋಟೆ ಆಗಲಿದೆ ಎಂಬ ದೂರದೃಷ್ಟಿತ್ವ ವಾಜಪೇಯಿ ಅವರಲ್ಲಿತ್ತು. ಕಾರ್ಯಕರ್ತರ ಕುರಿತು ಅದಮ್ಯ ವಿಶ್ವಾಸ ಅವರದಾಗಿತ್ತು. ಸೋಲಿನಿಂದ ಅಂಜುವ ಪ್ರಶ್ನೆಯೇ ಇಲ್ಲ ಎಂಬ ಮಾತನ್ನು ವಾಜಪೇಯಿ ಅವರು ಹೇಳುತ್ತಿದ್ದರು. ಪಕ್ಷವನ್ನು ದೃಢವಾಗಿ ಕಟ್ಟುವ ಆತ್ಮವಿಶ್ವಾಸವನ್ನು ಕಾರ್ಯಕರ್ತರಲ್ಲಿ ಅವರು ತುಂಬಿದ್ದರು ಎಂದು ಹೇಳಿದರು.
ವಾಜಪೇಯಿ ಅವರ ದೇಶಭಕ್ತಿ ನಮಗೆ ಪ್ರೇರಣೆ ಆಗಬೇಕು. ಅವರ ದೂರದೃಷ್ಟಿತ್ವ ಅರ್ಥ ಮಾಡಿಕೊಳ್ಳಿ. ಅಸ್ತಿತ್ವ ಕಳಕೊಳ್ಳುತ್ತಿರುವ ಕಾಂಗ್ರೆಸ್ಸಿನ ಸ್ಥಿತಿಯನ್ನು ರಾಜ್ಯದ ಪಟ್ಟಣ ಪಂಚಾಯಿತಿ ಚುನಾವಣೆ ತೋರಿಸಿಕೊಟ್ಟಿದೆ ಎಂದರು.

