Updated By: Priyalachhi

ಬೆಳಗಾವಿ: ರೈತರು ಪೂರೈಸುವ ಕಬ್ಬು ತೂಕದಲ್ಲಿ ಮೋಸ ಮಾಡಿದ್ದು, ಸಾಬೀತಾದಲ್ಲಿ ಅಂತಹ ಕಾರ್ಖಾನೆಗಳ ವಿರುದ್ಧ ಕ್ರಿಮಿನಲ್ ಕೇಸ್ ದಾಖಲಿಸಿ, ಕಾನೂನು ರೀತಿ ಕ್ರಮ ಕೈಗೊಳ್ಳಲು ಸರ್ಕಾರ ಸಿದ್ಧವಾಗಿದೆ ಎಂದು ಜವಳಿ, ಕಬ್ಬು ಅಭಿವೃದ್ಧಿ ಮತ್ತು ಸಕ್ಕರೆ ಹಾಗೂ ಕೃಷಿ ಮಾರುಕಟ್ಟೆ ಸಚಿವ ಶಿವಾನಂದ ಪಾಟೀಲ್ ಹೇಳಿದರು.

ವಿಧಾನಸಭೆಯಲ್ಲಿ ಅಥಣಿ ಶಾಸಕ ಲಕ್ಷ್ಮಣ ಸವದಿ ಅವರು ಉತ್ತರ ಕರ್ನಾಟಕ ಅಭಿವೃದ್ಧಿ ಕುರಿತಂತೆ ಚರ್ಚೆ ನಡೆಸಿದ ಸಂದರ್ಭದಲ್ಲಿ ಈ ಕುರಿತು ಸಚಿವರು ಮಾತನಾಡಿದರು. ಕಬ್ಬು ಬೆಳೆಗಾರರ ಹಿತ ಕಾಯಲು ಸರ್ಕಾರ ಬದ್ಧವಾಗಿದೆ. ರಾಜ್ಯದಲ್ಲಿ ಒಟ್ಟು 81 ಸಕ್ಕರೆ ಕಾರ್ಖಾನೆಗಳಿದ್ದು, ಅಲ್ಲಿ ಡಿಜಿಟಲ್ ವೇ ಬ್ರಿಡ್ಜ್​​ಗಳಿವೆ. ಸರ್ಕಾರದಿಂದಲೇ ಈ ವರ್ಷ 12 ಕಾರ್ಖಾನೆಗಳಲ್ಲಿ ಡಿಜಿಟಲ್ ತೂಕದ ಯಂತ್ರ ಅಳವಡಿಕೆಗಾಗಿ ಈಗಾಗಲೇ ಟೆಂಡರ್ ಕರೆಯಲಾಗಿದೆ. ಸಕ್ಕರೆ ಕಾರ್ಖಾನೆಗಳಲ್ಲಿ ಕಬ್ಬು ತೂಕ ಮಾಡುವ ಯಂತ್ರದಲ್ಲಿ ಮೋಸ ಆಗುತ್ತಿರುವ ಬಗ್ಗೆ ಯಾವುದೇ ರೈತರು ಇದುವರೆಗೂ ದೂರು ಸಲ್ಲಿಸಿಲ್ಲ ಎಂದರು.

ಬಹುಮಾನ 5 ಲಕ್ಷ ರೂಗೆ ಏರಿಕೆ: ರೈತರು ದೂರು ಸಲ್ಲಿಸಿ, ಬಳಿಕ ಇದು ಸಾಬೀತಾದಲ್ಲಿ ಅಂತಹ ರೈತರಿಗೆ 2 ಲಕ್ಷ ರೂ. ಬಹುಮಾನ ಕೊಡುತ್ತೇವೆ ಎಂದು ಸರ್ಕಾರ ಘೋಷಿಸಿತ್ತು. ಇದೀಗ ಈ ಬಹುಮಾನದ ಮೊತ್ತವನ್ನು 5 ಲಕ್ಷ ರೂ. ಗಳಿಗೆ ಹೆಚ್ಚಿಸಲಾಗಿದೆ. ಒಂದು ವೇಳೆ ತೂಕದಲ್ಲಿ ಮೋಸ ಮಾಡುವ ಯಾವುದೇ ದೂರು ಸಾಬೀತಾದಲ್ಲಿ, ಅಂತಹ ಕಾರ್ಖಾನೆಯವರು ಯಾರೇ ಆಗಿರಲಿ, ಎಷ್ಟೇ ದೊಡ್ಡವರಾಗಿರಲಿ, ನಿಶ್ಚಿತವಾಗಿ ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುತ್ತೇವೆ. ಕ್ರಿಮಿನಲ್ ಮೊಕದ್ದಮೆ ದಾಖಲಿಸಿ, ಅಂತಹ ಕಾರ್ಖಾನೆ ನಿಲ್ಲಿಸುವ ಕ್ರಮಕ್ಕೂ ಮುಂದಾಗುತ್ತೇವೆ. ಕಾರ್ಖಾನೆಗಳ ಒಳಗೆ ನಾವು ಆಧುನಿಕ ತೂಕದ ಯಂತ್ರ ಅಳವಡಿಕೆಗೆ ಮುಂದಾಗಿದ್ದು, ಕಾರ್ಖಾನೆಯವರು ಅನುಮತಿ ನೀಡುತ್ತಿಲ್ಲ. ಇದರಿಂದ ಸಮಸ್ಯೆ ಉಂಟಾಗಿದೆ ಎಂದು ಸಚಿವ ಶಿವಾನಂದ ಪಾಟೀಲ್ ಹೇಳಿದರು.

Share.

'ಸಂಭ್ರಮಪ್ರಭ.ಕಾಮ್' (sambramaprabha.com) ಕನ್ನಡಿಗರ ವಿಶ್ವಾಸಾರ್ಹ ಡಿಜಿಟಲ್ ನ್ಯೂಸ್ ಪೋರ್ಟಲ್. ರಾಜ್ಯ, ರಾಷ್ಟ್ರ, ರಾಜಕೀಯ, ಮನರಂಜನೆ, ಕ್ರೀಡೆ ಹಾಗೂ ಸ್ಥಳೀಯ ವಿದ್ಯಮಾನಗಳ ನಿಖರ ಮತ್ತು ನೈಜ ಸುದ್ದಿಗಳನ್ನು ಅತ್ಯಂತ ವೇಗವಾಗಿ ನಿಮ್ಮ ಮುಂದಿಡುವುದೇ ನಮ್ಮ ಪ್ರಮುಖ ಗುರಿ. ಸತ್ಯ, ನಿಷ್ಪಕ್ಷಪಾತ ಹಾಗೂ ಜನಪರ ಪತ್ರಿಕೋದ್ಯಮದ ಆಶಯದೊಂದಿಗೆ ನಾವು ಹೆಜ್ಜೆ ಇಡುತ್ತಿದ್ದೇವೆ. ಸದಾ ಸತ್ಯದ ಪರ, ನಿಮ್ಮ ಧ್ವನಿಯಾಗಿ. ಸಂಪಾದಕರು: ಸುರೇಶ್ ಕೆ.ಟಿ (Suresh K.T)

Leave A Reply

Exit mobile version