ಬೆಂಗಳೂರು: ರಾಜ್ಯ ರಾಜಕೀಯದಲ್ಲಿ ಮುಖ್ಯಮಂತ್ರಿ ಹುದ್ದೆ ಮತ್ತು ಸಚಿವ ಸಂಪುಟ ಪುನಾರಚನೆ ಕುರಿತ ಚರ್ಚೆಗಳು ಮತ್ತೆ ಮುನ್ನೆಲೆಗೆ ಬಂದಿರುವ ಬೆನ್ನಲ್ಲೇ, ಗೃಹ ಸಚಿವ ಡಾ. ಜಿ. ಪರಮೇಶ್ವರ್ ಅವರು ಮಹತ್ವದ ಹೇಳಿಕೆ ನೀಡಿದ್ದಾರೆ. ಈ ಹಿಂದೆ ತಮ್ಮನ್ನು ಮುಖ್ಯಮಂತ್ರಿ ಮಾಡುವಂತೆ ಖುದ್ದು ಸಿದ್ದರಾಮಯ್ಯನವರೇ ಹೈಕಮಾಂಡ್‌ಗೆ ಪ್ರಸ್ತಾಪಿಸಿದ್ದರು ಎಂಬ ವಿಚಾರವನ್ನು ಅವರು ಬಹಿರಂಗಪಡಿಸಿದ್ದಾರೆ. ಜೊತೆಗೆ ಸಚಿವ ಬಿ. ನಾಗೇಂದ್ರ ಅವರ ಸಂಪುಟ ಸೇರ್ಪಡೆಯನ್ನು ಅವರು ಸಮರ್ಥಿಸಿಕೊಂಡಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಪರಮೇಶ್ವರ್, “ಒಳಗಡೆ ಏನು ನಡೆದಿದೆ ಎಂಬುದು ನನಗೆ ಪೂರ್ಣವಾಗಿ ಗೊತ್ತಿಲ್ಲ. ಆದರೆ ಒಂದಂತೂ ನಿಜ, ನಾನು ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡುವ ಸಂದರ್ಭದಲ್ಲಿ ಪರಮೇಶ್ವರ್ ಅವರನ್ನು ಮುಖ್ಯಮಂತ್ರಿ ಮಾಡಬೇಕು ಎಂದು ಹೈಕಮಾಂಡ್‌ಗೆ ಹೇಳಿದ್ದೆ ಎಂದು ಸಿದ್ದರಾಮಯ್ಯನವರೇ ನಮಗೆ ತಿಳಿಸಿದ್ದರು. ಆದರೆ ಹೈಕಮಾಂಡ್ ಅದನ್ನು ಪರಿಗಣಿಸಲಿಲ್ಲ” ಎಂದರು.
ಉಪಮುಖ್ಯಮಂತ್ರಿ ಹುದ್ದೆಯ ಚರ್ಚೆಗಳ ಬಗ್ಗೆಯೂ ಪ್ರತಿಕ್ರಿಯಿಸಿದ ಅವರು, “ಡಿಸಿಎಂ ಮಾಡುವ ಸಂದರ್ಭದಲ್ಲೂ ಹಲವರ ಬೇಡಿಕೆ ಇತ್ತು. ಆ ವೇಳೆಯೂ ಪರಮೇಶ್ವರ್ ಅವರಿಗೆ ಸ್ಥಾನ ನೀಡಬೇಕು ಎಂದು ಸಿದ್ದರಾಮಯ್ಯನವರು ನನ್ನ ಬಳಿಯೂ ಹೇಳಿದ್ದರು. ಹಾಗಾಗಿ ಅವರು ಹೇಳಿದ್ದರಲ್ಲಿ ಸತ್ಯವಿದೆ ಎಂದು ನಾನು ಭಾವಿಸುತ್ತೇನೆ” ಎಂದು ತಿಳಿಸಿದರು.
ಬಿ. ನಾಗೇಂದ್ರ ಪರ ಬ್ಯಾಟಿಂಗ್ ಮಾಡಿದ ಗೃಹ ಸಚಿವರು
ವಾಲ್ಮೀಕಿ ನಿಗಮದ ಹಣ ದುರ್ಬಳಕೆ ಆರೋಪದ ಹಿನ್ನೆಲೆಯಲ್ಲಿ ಬಿ. ನಾಗೇಂದ್ರ ಅವರನ್ನು ಸಂಪುಟಕ್ಕೆ ಸೇರಿಸಿಕೊಂಡಿರುವುದನ್ನು ವಿರೋಧಿಸಿ ಬಿಜೆಪಿ ನಡೆಸುತ್ತಿರುವ ಪ್ರತಿಭಟನೆಗೆ ಪರಮೇಶ್ವರ್ ತೀಕ್ಷ್ಣ ಪ್ರತಿಕ್ರಿಯೆ ನೀಡಿದರು.
“ಯಾವ ಚಾರ್ಜ್‌ಶೀಟ್‌ನಲ್ಲೂ ನಾಗೇಂದ್ರ ಅವರ ಹೆಸರಿಲ್ಲ. ಅವರು ಹಣ ದುರುಪಯೋಗ ಮಾಡಿದ್ದಾರೆ ಎನ್ನುವುದಕ್ಕೆ ಯಾವುದೇ ಮಾಹಿತಿ ಇಲ್ಲ. ಒಟ್ಟು 84 ಕೋಟಿ ರೂ. ಪೈಕಿ ಈಗಾಗಲೇ 79 ಕೋಟಿ ರೂ. ರಿಕವರಿ ಮಾಡಲಾಗಿದೆ. ಒಂದು ವೇಳೆ ನಾಗೇಂದ್ರ ಅವರೇನಾದರೂ ಅಕ್ರಮ ಎಸಗಿದ್ದರೆ ಅವರ ಖಾತೆಯಿಂದ 5, 10 ಅಥವಾ 50 ಕೋಟಿ ರೂ. ಜಪ್ತಿಯಾಗಬೇಕಿತ್ತಲ್ಲವೇ? ಸಿಬಿಐ ಅಥವಾ ಇಡಿ ಯಾವುದೂ ಅವರ ಖಾತೆಗೆ ಹಣ ಹೋಗಿರುವುದನ್ನು ಪತ್ತೆ ಮಾಡಿಲ್ಲ. ಹಾಗಾಗಿ ಅವರ ಕೈವಾಡವಿಲ್ಲ ಎಂಬುದು ಸ್ಪಷ್ಟವಾಗುತ್ತದೆ” ಎಂದು ಸಮರ್ಥಿಸಿಕೊಂಡರು.
ಡೆತ್ ನೋಟ್‌ನಲ್ಲಿ ಸಚಿವರ ಹೆಸರು ಉಲ್ಲೇಖವಾಗಿರುವ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಅವರು, ಸಿಐಡಿ ಅಧಿಕಾರಿಗಳು ಎಲ್ಲ ಅಂಶಗಳನ್ನು ಕೂಲಂಕಷವಾಗಿ ಪರಿಶೀಲಿಸಿದ್ದಾರೆ ಎಂದು ಸ್ಪಷ್ಟಪಡಿಸಿದರು.
ಬಿಜೆಪಿ ವಿರುದ್ಧ ವಾಗ್ದಾಳಿ
ಸೆಪ್ಟೆಂಬರ್ 1ರಿಂದ ಬಿಜೆಪಿ ನಡೆಸಲು ಉದ್ದೇಶಿಸಿರುವ ಪಾದಯಾತ್ರೆ ಹಾಗೂ ಪ್ರತಿಭಟನೆಗಳ ಬಗ್ಗೆ ಕಿಡಿಕಾರಿದ ಗೃಹ ಸಚಿವರು, “ವಿರೋಧ ಪಕ್ಷಗಳು ಕೇವಲ ರಾಜಕೀಯ ಉದ್ದೇಶದಿಂದ ಈ ರೀತಿ ಮಾಡುತ್ತಿವೆ. ಸದನದಲ್ಲಿ ಸೂಕ್ತ ದಾಖಲೆಗಳನ್ನಿಟ್ಟು ಚರ್ಚೆ ಮಾಡಿ ಎಂದು ನಾವು ಆಹ್ವಾನ ನೀಡಿದ್ದೆವು. ಆದರೆ ಅಲ್ಲಿ ಚರ್ಚೆಗೆ ಬರಲಿಲ್ಲ. ರಾಜ್ಯದಲ್ಲಿ ಭೀಕರ ಬರಗಾಲವಿದೆ, ಕುಡಿಯುವ ನೀರಿನ ಸಮಸ್ಯೆ ಇದೆ. ಬರ ವೀಕ್ಷಣೆಗೆ ತೆರಳಿದ್ದ ಬಿಜೆಪಿ ತಂಡಗಳು ಸರ್ಕಾರಕ್ಕಾಗಲಿ, ಕಂದಾಯ ಸಚಿವರಿಗಾಗಲಿ ಅಥವಾ ಮುಖ್ಯಮಂತ್ರಿಗಳಿಗಾಗಲಿ ಯಾವುದೇ ವರದಿ ನೀಡಿಲ್ಲ. ಜನರ ಸಮಸ್ಯೆಗೆ ಸಲಹೆ ಕೊಡುವುದನ್ನು ಬಿಟ್ಟು ಕೇವಲ ನಾಗೇಂದ್ರ ವಿಚಾರ ಇಟ್ಟುಕೊಂಡು ಪಾದಯಾತ್ರೆ ಮಾಡುತ್ತಿದ್ದಾರೆ” ಎಂದು ವಾಗ್ದಾಳಿ ನಡೆಸಿದರು.
ಸಂಪುಟ ಪುನಾರಚನೆ ಅಥವಾ ಬದಲಾವಣೆಗಳ ಕುರಿತು ಮಾತನಾಡಿದ ಅವರು, “ಮುಖ್ಯಮಂತ್ರಿಗಳು ದೆಹಲಿಗೆ ತೆರಳಿ ಹೈಕಮಾಂಡ್ ಜೊತೆ ಚರ್ಚೆ ನಡೆಸಿದ ಬಳಿಕವೇ ಎಲ್ಲ ಊಹಾಪೋಹಗಳಿಗೆ ತೆರೆ ಬೀಳಲಿದೆ” ಎಂದು ತಿಳಿಸಿದರು.


