ಬೆಂಗಳೂರು (ಸಂಭ್ರಮಪ್ರಭ ನ್ಯೂಸ್): ರಾಜ್ಯದಲ್ಲಿ ಭಾರಿ ಸದ್ದು ಮಾಡಿದ್ದ ನಿಗಮದ ಹಣ ದುರ್ಬಳಕೆ ಹಗರಣದ ಆರೋಪ ಹೊತ್ತಿರುವ ಬಿ. ನಾಗೇಂದ್ರ ಅವರನ್ನು ರಾಜ್ಯ ಸಚಿವ ಸಂಪುಟಕ್ಕೆ ತೆಗೆದುಕೊಂಡಿರುವುದರ ವಿರುದ್ಧ ವಿರೋಧ ಪಕ್ಷಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿವೆ. ಜೆಡಿಎಸ್ ಯುವ ನಾಯಕ ನಿಖಿಲ್ ಕುಮಾರಸ್ವಾಮಿ ಹಾಗೂ ಪರಿಷತ್ ವಿಪಕ್ಷ ಮುಖ್ಯ ಸಚೇತಕ ಎನ್. ರವಿಕುಮಾರ್ ಅವರು ಸರ್ಕಾರದ ನಡೆಯನ್ನು ಕಟುವಾಗಿ ಟೀಕಿಸಿದ್ದು, ಕೂಡಲೇ ಸಚಿವ ಸ್ಥಾನಕ್ಕೆ ನಾಗೇಂದ್ರ ಅವರಿಂದ ರಾಜೀನಾಮೆ ಪಡೆಯಬೇಕು ಎಂದು ಆಗ್ರಹಿಸಿದ್ದಾರೆ.
ಬೇರೆ ಸಮರ್ಥರು ಇರಲಿಲ್ಲವೇ ಎಂದ ನಿಖಿಲ್ ಪ್ರಶ್ನೆ ಸುದ್ದಿಗಾರರೊಂದಿಗೆ ಮಾತನಾಡಿದ ನಿಖಿಲ್ ಕುಮಾರಸ್ವಾಮಿ, “ನಾಗೇಂದ್ರ ಅವರ ಮೇಲಿನ ಆರೋಪ ನಿನ್ನೆ ಮೊನ್ನೆಯದಲ್ಲ. ಕಳೆದ ವರ್ಷವೇ ಈ ಬಗ್ಗೆ ಆರೋಪಗಳು ಕೇಳಿಬಂದಿದ್ದವು. ಖುದ್ದು ಮುಖ್ಯಮಂತ್ರಿಗಳೇ ಸದನದಲ್ಲಿ 189 ಕೋಟಿ ಅಲ್ಲ, 87 ಕೋಟಿ ರೂ.ಗಳ ಹಣ ದುರ್ಬಳಕೆಯಾಗಿದೆ ಎಂದು ಒಪ್ಪಿಕೊಂಡಿದ್ದಾರೆ. ಹೀಗಿರುವಾಗ ಅವರನ್ನೇ ಯಾಕೆ ಸಂಪುಟಕ್ಕೆ ಸೇರಿಸಿಕೊಳ್ಳಬೇಕಿತ್ತು? ಕಾಂಗ್ರೆಸ್ ಪಕ್ಷದಲ್ಲಿ ಆ ಸ್ಥಾನ ತುಂಬಲು ಬೇರೆ ಸಮರ್ಥರು ಇರಲಿಲ್ಲವೇ? ಇದಕ್ಕೆ ಸರ್ಕಾರವೇ ಉತ್ತರ ಕೊಡಬೇಕು,” ಎಂದು ಗುಡುಗಿದ್ದಾರೆ.
ರಾಜ್ಯದ ಜ್ವಲಂತ ಸಮಸ್ಯೆಗಳನ್ನು ಪ್ರಸ್ತಾಪಿಸಿದ ಅವರು, “ಒಂದೆಡೆ ಕಲ್ಯಾಣ ಕರ್ನಾಟಕ, ಕಿತ್ತೂರು ಕರ್ನಾಟಕ ಸೇರಿದಂತೆ ರಾಜ್ಯದಾದ್ಯಂತ ತೀವ್ರ ಬರಗಾಲವಿದೆ. ಮೂರು ಸಾವಿರಕ್ಕೂ ಹೆಚ್ಚು ರೈತರು ಆತ್ಮಹತ್ಯೆಗೆ ಶರಣಾಗಿದ್ದಾರೆ. ಅತಿವೃಷ್ಟಿಯಿಂದ ಬೆಳೆ ಹಾನಿಯಾಗಿದೆ. ಸದನದಲ್ಲಿ ರೈತರ ಸಮಸ್ಯೆ, ಬಿಡದಿ ಹಾಗೂ ನೈಸ್ ರಸ್ತೆ ವಿಚಾರಗಳಂತಹ ಗಂಭೀರ ವಿಷಯಗಳ ಬಗ್ಗೆ ಚರ್ಚೆಯಾಗಬೇಕಿತ್ತು. ಆದರೆ ಸರ್ಕಾರದ ನಡೆ ಮುಜುಗರ ತರುವಂತಿದೆ,” ಎಂದು ಅಸಮಾಧಾನ ವ್ಯಕ್ತಪಡಿಸಿದರು.
600 ಅಕೌಂಟ್‌ಗಳಿಗೆ ಹಣ, ಚುನಾವಣೆಗಳಿಗೆ ಬಳಕೆ: ರವಿಕುಮಾರ್ ಗಂಭೀರ ಆರೋಪ ಇದೇ ವಿಚಾರವಾಗಿ ಮಾತನಾಡಿದ ಬಿಜೆಪಿ ಎಂಎಲ್ಸಿ ರವಿಕುಮಾರ್, ಯಾವುದೇ ಕಾರಣಕ್ಕೂ ನಾಗೇಂದ್ರ ಅವರು ರಾಜೀನಾಮೆ ನೀಡಲೇಬೇಕು ಎಂದು ಪಟ್ಟು ಹಿಡಿದಿದ್ದಾರೆ. “ಮುಖ್ಯಮಂತ್ರಿಗಳು ಸದನದಲ್ಲೇ 87 ಕೋಟಿ ಕರಪ್ಷನ್ ಆಗಿದೆ ಎಂದು ಒಪ್ಪಿಕೊಂಡಿದ್ದಾರೆ. ಈ ಬಗ್ಗೆ ಚಾರ್ಜ್ ಶೀಟ್ ಕೂಡ ಸಲ್ಲಿಕೆಯಾಗಿದೆ. ಭ್ರಷ್ಟಾಚಾರದ ಹಣ ಬಂಧುಗಳು, ಸ್ನೇಹಿತರು ಸೇರಿದಂತೆ ಸುಮಾರು 600 ಅಕೌಂಟ್‌ಗಳಿಗೆ ವರ್ಗಾವಣೆಯಾಗಿದೆ. ಬಳ್ಳಾರಿ ಲೋಕಸಭಾ ಚುನಾವಣೆ ಹಾಗೂ ತೆಲಂಗಾಣ ಚುನಾವಣೆಗೂ ಈ ಹಣ ಬಳಕೆಯಾಗಿದೆ ಎಂಬುದು ತನಿಖೆಯಿಂದ ಬಯಲಾಗಿದೆ,” ಎಂದು ಗಂಭೀರ ಆರೋಪ ಮಾಡಿದ್ದಾರೆ.
“ಕೇವಲ ಅಧಿಕಾರಿಗಳ ಮೇಲೆ ತಪ್ಪು ಹೊರಿಸಿ, ಮಂತ್ರಿಯನ್ನು ಬಚಾವು ಮಾಡುವ ಕೆಲಸವನ್ನು ಸರ್ಕಾರ ಮಾಡುತ್ತಿದೆ. ಇದಕ್ಕೆ ಯಾವುದೇ ಅರ್ಥವಿಲ್ಲ. ಬಿ. ನಾಗೇಂದ್ರ ಅವರು ರಾಜೀನಾಮೆ ನೀಡುವವರೆಗೂ ಅಥವಾ ಸರ್ಕಾರ ಅವರ ರಾಜೀನಾಮೆ ಪಡೆಯುವವರೆಗೂ ಭಾರತೀಯ ಜನತಾ ಪಾರ್ಟಿ ರಾಜ್ಯಾದ್ಯಂತ ಉಗ್ರ ಹೋರಾಟ ನಡೆಸಲಿದೆ,” ಎಂದು ರವಿಕುಮಾರ್ ಎಚ್ಚರಿಕೆ ನೀಡಿದ್ದಾರೆ.
ವಿಧಾನಸೌಧದ ಪಡಸಾಲೆಯಲ್ಲಿ ಈ ವಿಚಾರ ಇದೀಗ ಭಾರಿ ಚರ್ಚೆಗೆ ಗ್ರಾಸವಾಗಿದ್ದು, ಸರ್ಕಾರದ ಮುಂದಿನ ನಡೆ ಕುತೂಹಲ ಕೆರಳಿಸಿದೆ.

