Updated By: Priyalachhi 

ದಾವಣಗೆರೆ: ಇತ್ತೀಚೆಗೆ ನಗರದಲ್ಲಿ ನಡೆದ 290 ಗ್ರಾಂ ಡ್ರಗ್ಸ್ ವಶಕ್ಕೆ ಪಡೆದ ಪ್ರಕರಣ ಸಂಬಂಧ ವಿದ್ಯಾನಗರ ಠಾಣೆ ಪೊಲೀಸರು ಮತ್ತೆ ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ. ಈ ಮೂಲಕ ಬಂಧಿತರ ಸಂಖ್ಯೆ ಎಂಟಕ್ಕೆ ಏರಿಕೆಯಾಗಿದೆ.

ಡಿಸೆಂಬರ್​ 22ರಂದು (ಸೋಮವಾರ) ಡ್ರಗ್ಸ್ ಮಾರಾಟ ಮಾಡುತ್ತಿದ್ದ ಗ್ಯಾಂಗ್ ಮೇಲೆ ದಾವಣಗೆರೆ ಎಸ್​​ಪಿ ಉಮಾ ಪ್ರಶಾಂತ್ ನೇತೃತ್ವದಲ್ಲಿ ವಿದ್ಯಾನಗರ ಠಾಣೆ ಪೊಲೀಸರು ದಾಳಿ ನಡೆಸಿದ್ದರು. ಈ ವೇಳೆ, ಕಾಂಗ್ರೆಸ್ ಮುಖಂಡ ವೇದಮೂರ್ತಿ ಎಸ್.ಜಿ. (53) ಸೇರಿದಂತೆ, ರಾಜಸ್ಥಾನ ಮೂಲದ ರಾಮ್ ಸ್ವರೂಪ್ (33) ಧೋಲಾರಾಮ್ (36) ಹಾಗೂ ದೇವ್ ಕಿಶನ್ (35) ಎಂಬವರನ್ನು ಬಂಧನ ಮಾಡಲಾಗಿತ್ತು.

ಬಂಧಿತರಿಂದ ಎಂಡಿಎಂಎ ಡ್ರಗ್ಸ್, ಸಿಂಥೆಟಿಕ್ ಡ್ರಗ್ಸ್​ ಸೇರಿ ಲಕ್ಷಾಂತರ ಮೌಲ್ಯದ 290 ಗ್ರಾಂ ಮಾದಕ ವಸ್ತುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದರು. ಈಗ ಅನ್ವರ್ ಭಾಷಾ, ಪಾರಸ್, ಕೃಷ್ಣಮೂರ್ತಿ ಹಾಗೂ ಧೋನಿ ಅಲಿಯಾಸ್ ಮಂಜುನಾಥ್ ಎಂಬ ನಾಲ್ವರು ಆರೋಪಿಗಳನ್ನು ಬಂಧಿಸಿ, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

ಎಸ್​ಪಿ ಮಾಹಿತಿ: ಪ್ರಕರಣದ ಬಗ್ಗೆ ಮಾಧ್ಯಮದವರಿಗೆ ಮಾಹಿತಿ ನೀಡಿದ ಎಸ್​ಪಿ ಉಮಾಪ್ರಶಾಂತ್, ”ಮತ್ತೆ ನಾಲ್ವರು ಆರೋಪಿಗಳ ಬಂಧನವಾಗಿದೆ. ಇದರೊಂದಿಗೆ ಬಂಧಿತರ ಸಂಖ್ಯೆ 8ಕ್ಕೆ ಏರಿಕೆ ಆಗಿದೆ. ಈಗ ಬಂಧಿತರಾದವರು ಈ ಹಿಂದೆ ಬಂಧಿಸಲ್ಪಟ್ಟವರಿಂದ ಡ್ರಗ್ಸ್​ ಖರೀದಿಸುತ್ತಿದ್ದರು. ಅಲ್ಲದೆ, ಇವರು ಡ್ರಗ್ಸ್​ ಸೇವನೆ ಮಾಡುತ್ತಿದ್ದರು ಎಂದು ತಿಳಿದುಬಂದಿದೆ. ಇವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ತನಿಖೆ ಮುಂದುವರೆದಿದೆ” ಎಂದರು.

”ಡ್ರಗ್ಸ್​ ವಿರುದ್ಧ ದಾವಣಗೆರೆಯಲ್ಲಿ ಪೊಲೀಸರ ಕಾರ್ಯಾಚರಣೆ ಮುಂದುವರೆಯಲಿದೆ. ಅದರಲ್ಲೂ ಹೊಸ ವರ್ಷಾಚರಣೆ ಸಂದರ್ಭ ಇರುವುದರಿಂದ ಸಾರ್ವಜನಿಕರಿಗೆ ಎಲ್ಲಿಯಾದರೂ ಡ್ರಗ್ಸ್​ ಮಾರಾಟ, ಸೇವನೆ ಬಗ್ಗೆ ಗೊತ್ತಾದರೆ ಸಿಕ್ಕರೆ, ತಕ್ಷಣ ಪೊಲೀಸರಿಗೆ ಮಾಹಿತಿ ನೀಡಬೇಕು” ಎಂದು ಎಸ್​ಪಿ ತಿಳಿಸಿದರು.

ಸಚಿವ ಬೈರತಿ ಪ್ರತಿಕ್ರಿಯೆ: ಪ್ರಕರಣದ ಕುರಿತಂತೆ ದಾವಣಗೆರೆಯಲ್ಲಿ ಮಾಧ್ಯಮದವರಿಗೆ ಪ್ರತಿಕ್ರಿಯೆ ನೀಡಿದ ಸಚಿವ ಬೈರತಿ ಸುರೇಶ್ “ಆರೋಪಿಗಳದ್ದು ಸಚಿವರುಗಳ ಜೊತೆ ಫೋಟೋ ಇದ್ದರೆ ಅವರು ಆಪ್ತರಾಗುತ್ತಾರಾ? ನಾನು ಕೂಡ ಸಾಕಷ್ಟು ಕಾರ್ಯಕ್ರಮಗಳಿಗೆ ಹೋಗುತ್ತೇನೆ. ಆಗ ನಮ್ಮ ಜೊತೆ ಸಾಕಷ್ಟು ಜನರು ಫೋಟೋ ತೆಗೆಸಿಕೊಳ್ಳುತ್ತಾರೆ. ಹಾಗಾದರೆ ಅವರು ನನ್ನ ಆಪ್ತರಾಗುತ್ತಾರಾ?” ಎಂದು ಪ್ರಶ್ನಿಸಿದರು.

Share.

'ಸಂಭ್ರಮಪ್ರಭ.ಕಾಮ್' (sambramaprabha.com) ಕನ್ನಡಿಗರ ವಿಶ್ವಾಸಾರ್ಹ ಡಿಜಿಟಲ್ ನ್ಯೂಸ್ ಪೋರ್ಟಲ್. ರಾಜ್ಯ, ರಾಷ್ಟ್ರ, ರಾಜಕೀಯ, ಮನರಂಜನೆ, ಕ್ರೀಡೆ ಹಾಗೂ ಸ್ಥಳೀಯ ವಿದ್ಯಮಾನಗಳ ನಿಖರ ಮತ್ತು ನೈಜ ಸುದ್ದಿಗಳನ್ನು ಅತ್ಯಂತ ವೇಗವಾಗಿ ನಿಮ್ಮ ಮುಂದಿಡುವುದೇ ನಮ್ಮ ಪ್ರಮುಖ ಗುರಿ. ಸತ್ಯ, ನಿಷ್ಪಕ್ಷಪಾತ ಹಾಗೂ ಜನಪರ ಪತ್ರಿಕೋದ್ಯಮದ ಆಶಯದೊಂದಿಗೆ ನಾವು ಹೆಜ್ಜೆ ಇಡುತ್ತಿದ್ದೇವೆ. ಸದಾ ಸತ್ಯದ ಪರ, ನಿಮ್ಮ ಧ್ವನಿಯಾಗಿ. ಸಂಪಾದಕರು: ಸುರೇಶ್ ಕೆ.ಟಿ (Suresh K.T)

Leave A Reply

Exit mobile version