Updated By: Priyalachhi

ಬೆಂಗಳೂರು: ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಿಸುವುದಾಗಿ ನಂಬಿಸಿ ಉದ್ಯಮಿಯೊಬ್ಬರಿಗೆ ಬರೋಬ್ಬರಿ 8.03 ಕೋಟಿ ವಂಚಿಸಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

ಉದ್ಯಮಿ ರಾಜೇಂದ್ರ ನಾಯ್ಡು ಅವರಿಗೆ ಷೇರು ಮಾರುಕಟ್ಟೆ ಹೆಸರಿನಲ್ಲಿ ವಂಚಿಸಲಾಗಿದ್ದು, ಬೆಂಗಳೂರು ದಕ್ಷಿಣ ವಿಭಾಗದ ಸಿಇಎನ್ ಠಾಣೆಗೆ ದೂರು ನೀಡಿದ್ದಾರೆ.

ರಾಜೇಂದ್ರ ನಾಯ್ಡು ಅವರಿಗೆ ಕರೆ ಮಾಡಿದ್ದ ವಂಚಕರು, ಅವರು ಈ ಹಿಂದೆ ಪಡೆದಿದ್ದ ಸಾಲದ ಕುರಿತು ಮಾತನಾಡುತ್ತಾ “ನಿಮ್ಮ ಸಿಬಿಲ್ ಸ್ಕೋರ್ ಉತ್ತಮವಾಗಿದೆ. ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಿದರೆ ಹೆಚ್ಚಿನ ಲಾಭಾಂಶ ಗಳಿಸಬಹುದು” ಎಂದು ನಂಬಿಸಿದ್ದರು. ಕೆಲವು ಚಾರಿಟಿ ಸೇವೆಗಳನ್ನು ನಡೆಸುತ್ತಿದ್ದ ರಾಜೇಂದ್ರ ನಾಯ್ಡು ಅವರು ಸ್ವಲ್ಪ ಹಣವನ್ನು ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಿದರೆ ಅದರಿಂದ ಬರುವ ಹಣವನ್ನು ಚಾರಿಟಿಗೆ ಉಪಯೋಗಿಸಬಹುದು ಎಂದು ಭಾವಿಸಿ ಹೂಡಿಕೆ ಮಾಡಲು ಇಚ್ಛಿಸಿದ್ದರು.

ಬಳಿಕ ರಾಜೇಂದ್ರ ನಾಯ್ಡು ಅವರ ಮೊಬೈಲ್‌ ಫೋನ್‌ನಲ್ಲಿ ವಂಚಕರು ಆ್ಯಪ್‌ವೊಂದನ್ನು ಇನ್‌ಸ್ಟಾಲ್ ಮಾಡಿಸಿದ್ದರು. ಆರಂಭದಲ್ಲಿ 25 ಲಕ್ಷ ರೂಪಾಯಿ ಹೂಡಿಕೆ ಮಾಡಿದ್ದ ರಾಜೇಂದ್ರ ನಾಯ್ಡು ನಂತರ ಹಂತಹಂತವಾಗಿ ಒಟ್ಟು 8.03 ಕೋಟಿ ರೂಪಾಯಿ ಹಣ ವರ್ಗಾಯಿಸಿದ್ದರು. ಪೂರಕವೆಂಬಂತೆ ಆ್ಯಪ್‌ನಲ್ಲಿ 59.4 ಕೋಟಿ ರೂಪಾಯಿ ಲಾಭಾಂಶವನ್ನು ಆರೋಪಿಗಳು ತೋರಿಸಿದ್ದರು ಎಂದು ರಾಜೇಂದ್ರ ನಾಯ್ಡು ತಿಳಿಸಿದ್ದಾರೆ.

ತಮ್ಮ ಹೂಡಿಕೆಯು ದೊಡ್ಡ ಮೊತ್ತದ ಲಾಭಗಳಿಸಿದೆ ಎಂದುಕೊಂಡಿದ್ದ ರಾಜೇಂದ್ರ ನಾಯ್ಡು, 15 ಕೋಟಿ ರೂಪಾಯಿಗಳನ್ನು ಹಿಂಪಡೆಯಲು ಪ್ರಯತ್ನಿಸಿದ್ದರು. ಆದರೆ ಹಣ ವಿತ್ ಡ್ರಾ ಆಗದಿದ್ದಾಗ ಅನುಮಾನಗೊಂಡ ಅವರು, ಮೊದಲು ತಮ್ಮನ್ನು ಸಂಪರ್ಕಿಸಿದ್ದ ಅಪರಿಚಿತ ವಂಚಕರಿಗೆ ಕರೆ ಮಾಡಿ ವಿಚಾರಿಸಿದಾಗ, “18% ಸೇವಾ ಶುಲ್ಕವಾಗಿ ಸುಮಾರು 2.70 ಕೋಟಿ ರೂಪಾಯಿ ಪಾವತಿಸಬೇಕು ಎಂದು ಆಗ್ರಹಿಸಿದ್ದರು. ಆ ಸಮಯದಲ್ಲಿ ತಾವು ವಂಚನೆಗೊಳಗಾಗಿರುವುದನ್ನು ಅರಿತ ರಾಜೇಂದ್ರ ನಾಯ್ಡು ಅವರು ರಾಷ್ಟ್ರೀಯ ಸೈಬರ್​ ಕ್ರೈಮ್​ ಸಹಾಯವಾಣಿ (1930)ಕ್ಕೆ ಕರೆ ಮಾಡಿ ದೂರು ದಾಖಲಿಸಿದ್ದಾರೆ. ಅಲ್ಲದೆ ಬೆಂಗಳೂರು ದಕ್ಷಿಣ ವಿಭಾಗದ ಸಿಇಎನ್ ಪೊಲೀಸ್ ಠಾಣೆಗೆ ತೆರಳಿ ದೂರು ಸಲ್ಲಿಸಿದ್ದಾರೆ‌.

Share.

'ಸಂಭ್ರಮಪ್ರಭ.ಕಾಮ್' (sambramaprabha.com) ಕನ್ನಡಿಗರ ವಿಶ್ವಾಸಾರ್ಹ ಡಿಜಿಟಲ್ ನ್ಯೂಸ್ ಪೋರ್ಟಲ್. ರಾಜ್ಯ, ರಾಷ್ಟ್ರ, ರಾಜಕೀಯ, ಮನರಂಜನೆ, ಕ್ರೀಡೆ ಹಾಗೂ ಸ್ಥಳೀಯ ವಿದ್ಯಮಾನಗಳ ನಿಖರ ಮತ್ತು ನೈಜ ಸುದ್ದಿಗಳನ್ನು ಅತ್ಯಂತ ವೇಗವಾಗಿ ನಿಮ್ಮ ಮುಂದಿಡುವುದೇ ನಮ್ಮ ಪ್ರಮುಖ ಗುರಿ. ಸತ್ಯ, ನಿಷ್ಪಕ್ಷಪಾತ ಹಾಗೂ ಜನಪರ ಪತ್ರಿಕೋದ್ಯಮದ ಆಶಯದೊಂದಿಗೆ ನಾವು ಹೆಜ್ಜೆ ಇಡುತ್ತಿದ್ದೇವೆ. ಸದಾ ಸತ್ಯದ ಪರ, ನಿಮ್ಮ ಧ್ವನಿಯಾಗಿ. ಸಂಪಾದಕರು: ಸುರೇಶ್ ಕೆ.ಟಿ (Suresh K.T)

Leave A Reply

Exit mobile version