ಸಾರಿಗೆ ಸಂಘಟನೆಗಳಿಗೆ ಹೈಕೋರ್ಟ್ ಬ್ರೇಕ್

0
5

ವರದಿ: ಪ್ರಿಯಾಂಕಾ ಚಂದ್ರಶೇಖರ್ ಗಂಧನಹಳ್ಳಿ

ಮೇ 20ರಿಂದ ಅನಿರ್ದಿಷ್ಟಾವಧಿ ಮುಷ್ಕರಕ್ಕೆ ಮುಂದಾಗಿದ್ದ ಸಾರಿಗೆ ನೌಕರರ ಸಂಘಗಳಿಗೆ ಹೈಕೋರ್ಟ್ ಮಂಗಳವಾರ ತಾತ್ಕಾಲಿಕ ತಡೆ ನೀಡಿದೆ.

ರಜೆ ಪೀಠದ ನ್ಯಾಯಮೂರ್ತಿಗಳಾದ ಸೂರಜ್ ಗೋವಿಂದರಾಜ್ ಮತ್ತು ಕೆ ಮನ್ಮದಾ ರಾವ್ ಸಾರ್ವಜನಿಕ ಹಿತಾಸಕ್ತಿ ಅರ್ಜಿ (PIL) ವಿಚಾರಣೆ ನಡೆಸುವ ವೇಳೆ ಈ ಆದೇಶ ಹೊರಡಿಸಿದರು.

ಈ ಮುಷ್ಕರವನ್ನು ಜಂಟಿ ಕ್ರಿಯಾ ಸಮಿತಿ (JAC) ಕರೆ ನೀಡಿತ್ತು. ಇದರಲ್ಲಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ (KSRTC), ಬೆಂಗಳೂರು ಮೆಟ್ರಾಪಾಲಿಟನ್ ಸಾರಿಗೆ ನಿಗಮ (BMTC), ಈಶಾನ್ಯ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ (NWKRTC) ಹಾಗೂ ಕಲ್ಯಾಣ ಕರ್ನಾಟಕ ಸಾರಿಗೆ ನಿಗಮ (KKRTC) ನೌಕರರ ಸಂಘಗಳು ಸೇರಿದ್ದವು.

“ಪ್ರತಿವಾದಿ ಸಂಖ್ಯೆ 7 (JAC) ಮತ್ತು ಅದರ ಅಂಗ ಸಂಘಗಳು 29.04.2026ರ ಮುಷ್ಕರ ನೊಟೀಸ್ ಅನ್ವಯ ಮುಷ್ಕರ ನಡೆಸಬಾರದು” ಎಂದು ನ್ಯಾಯಾಲಯ ಆದೇಶಿಸಿದೆ. ಜೊತೆಗೆ, ಮುಷ್ಕರಕ್ಕೆ ಕರೆ ನೀಡಿದ ಸಂಘಗಳೊಂದಿಗೆ ಚರ್ಚೆ ನಡೆಸಲು ಸರ್ಕಾರ ದಿನಾಂಕ ನಿಗದಿ ಮಾಡಬೇಕು ಎಂದು ಸೂಚಿಸಿದೆ.

ಮುಂದಿನ ವಿಚಾರಣೆ 21ಕ್ಕೆ

ಸಂಘದ ಪ್ರತಿನಿಧಿಗಳು, ಸಾರಿಗೆ ಸಚಿವರು ಹಾಗೂ ಮುಖ್ಯಮಂತ್ರಿಗಳ ನಡುವಿನ ಸಭೆ ಯಾವಾಗ ನಡೆಯಬಹುದು ಎಂಬ ಬಗ್ಗೆ ಸೂಚನೆ ಪಡೆಯಲು ಹೆಚ್ಚುವರಿ ಎರಡು ದಿನಗಳ ಕಾಲಾವಕಾಶ ಬೇಕು ಎಂದು ಹೆಚ್ಚುವರಿ ಅಡ್ವೊಕೇಟ್ ಜನರಲ್ ನ್ಯಾಯಾಲಯಕ್ಕೆ ತಿಳಿಸಿದ್ದಾರೆ ಎಂದು ಆದೇಶದಲ್ಲಿ ದಾಖಲಿಸಲಾಗಿದೆ.

ಈ ಪ್ರಕರಣದ ಮುಂದಿನ ವಿಚಾರಣೆ ಮೇ 21ರಂದು ನಡೆಯಲಿದೆ. ಮುಷ್ಕರ ತಡೆಯುವಂತೆ ಕೋರಿ ಗೃಹಕಾರ್ಮಿಕ ಮಹಿಳೆಯೊಬ್ಬರು ಮತ್ತು ಕಟ್ಟಡ ಕಾರ್ಮಿಕನೊಬ್ಬರು ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು. ಬಸ್ ಮುಷ್ಕರ ನಡೆದರೆ ತಮ್ಮ ಜೀವನೋಪಾಯಕ್ಕೆ ತೊಂದರೆ ಆಗುತ್ತದೆ ಎಂದು ಅವರು ವಾದಿಸಿದ್ದರು.

ಬಾಕಿ ವೇತನ ಪಾವತಿ ಹಾಗೂ ವೇತನ ಹೆಚ್ಚಳದ ಬೇಡಿಕೆ ಈಡೇರದಿದ್ದರೆ ಮೇ 20ರಿಂದ ನಾಲ್ಕು ರಾಜ್ಯ ಸಾರಿಗೆ ನಿಗಮಗಳ ಸೇವೆಗಳನ್ನು ಸ್ಥಗಿತಗೊಳಿಸುವುದಾಗಿ ಕಾರ್ಮಿಕ ಸಂಘಗಳು ಎಚ್ಚರಿಕೆ ನೀಡಿದ್ದವು.

sambrama prabha editor suresh kt

LEAVE A REPLY

Please enter your comment!
Please enter your name here