ವರದಿ: ಪ್ರಿಯಾಂಕಾ ಚಂದ್ರಶೇಖರ್ ಗಂಧನಹಳ್ಳಿ

ಬೆಂಗಳೂರು: ದಾವಣಗೆರೆ ದಕ್ಷಿಣ ಕ್ಷೇತ್ರದ ಉಪಚುನಾವಣೆ ಕಾಂಗ್ರೆಸ್ ಟಿಕೆಟ್ ಮುಸ್ಲಿಮರಿಗೆ ಕೊಡದಕ್ಕೆ ಶುರುವಾದ ಬಂಡಾಯ ಗೊಂದಲ ನಡುವೆ ಮತದಾನ ಮುಗಿದಿದೆ. ಆದರೆ ಪಕ್ಷದಲ್ಲಿ ಈಗ ಮುಸ್ಲಿಂ ನಾಯಕರ ನಡುವಿನ ಮುಸುಕಿನ ಗುದ್ದಾಟ ಜೋರಾಗಿದೆ. ಪಕ್ಷದ ಅಭ್ಯರ್ಥಿ ಸಮರ್ಥ್ ಶಾಮನೂರು ಪರ ಪ್ರಚಾರ ಮಾಡದ ಸಚಿವ ಜಮೀರ್ ಅಹ್ಮದ್ ವಿರುದ್ಧ ಮತ್ತೊಂದು ಮುಸ್ಲಿಂ ಬಣ ತಿರುಗಿ ಬಿದ್ದಿತ್ತು.

ದಾವಣಗೆರೆ ಚುನಾವಣೆ ಪ್ರಚಾರದ ವೇಳೆ ನಡೆದ ಹಗ್ಗಜಗ್ಗಾಟ ಆಂತರಿಕ ವರದಿ ಕಾಂಗ್ರೆಸ್ ಹೈಕಮಾಂಡ್ ಕೈಸೇರಿದೆ. ಎಐಸಿಸಿ ಉಸ್ತುವಾರಿ ಕಾರ್ಯದರ್ಶಿ ಅಭಿಷೇಕ್ ದತ್ ನೀಡಿದ ವರದಿಯಲ್ಲಿ ಉಪಚುನಾವಣಾ ಸಂದರ್ಭದಲ್ಲಿ ಪಕ್ಷದ ಆಂತರಿಕ ಬೆಳವಣಿಗೆಗಳು ಮತ್ತು ನಾಯಕರ ನಡುವಿನ ಮುನಿಸು ಕಾಂಗ್ರೆಸ್ ಅಭ್ಯರ್ಥಿಯ ಗೆಲುವಿಗೆ ಅಡ್ಡಿಯಾಗಬಹುದು ಎಂಬ ಆತಂಕ ವ್ಯಕ್ತಪಡಿಸಿದೆ. ಜಮೀರ್ ಅಹ್ಮದ್ ಪಕ್ಷದ ಅಭ್ಯರ್ಥಿ ಪರ ಪ್ರಚಾರ ಮಾಡಿಲ್ಲ, ಪ್ರಚಾರಕ್ಕೆ ಅಂತ ಬಂದಿದ್ದರೂ ಅವರ ನಡೆ ಯಾರಿಗೂ ಸಮಾಧಾನ ತಂದಿಲ್ಲ. ಮುಸ್ಲಿಂ ನಾಯಕರ ಮನವೊಲಿಕೆ ಮಾಡದೇ ಜಮೀರ್ ನಿರ್ಲಕ್ಷ್ಯ ಮಾಡಿದ್ದಾರೆ ಎಂದು ಆರೋಪಿಸಲಾಗಿದ್ದು ಇದೀಗ ಸಚಿವ ಜಮೀರ್ ಅಹ್ಮದ್ ಖಾನ್ ವಿರುದ್ಧ ಶಿಸ್ತು ಕ್ರಮದ ತೂಗುಕತ್ತಿ ನೇತಾಡುತ್ತಿದೆ.

ಅಲ್ಪಸಂಖ್ಯಾತ ಸಮುದಾಯದ ಕೆಲವು ಶಾಸಕರೇ ಸಚಿವ ಜಮೀರ್ ಅಹ್ಮದ್ ವಿರುದ್ಧ ಹೈಕಮಾಂಡ್‌ಗೆ ದೂರು ನೀಡಿದ್ದು, ಸಚಿವ ಸಂಪುಟ ಪುನಾರಚನೆ ವೇಳೆ ಅವರನ್ನು ಸಂಪುಟದಿಂದ ಕೈಬಿಡಬೇಕು ಎಂದು ಒತ್ತಾಯಿಸಿದ್ದಾರೆ. ಇನ್ನು ಜಮೀರ್ ‘ತಲೆದಂಡ’ವಾಗುವುದು ಬಹುತೇಕ ನಿಶ್ಚಿತ ಎಂಬ ಮಾತುಗಳು ಕೈ ಪಾಳಯದಲ್ಲಿ ಕೇಳಿಬರುತ್ತಿವೆ. ಮತ್ತೊಂದೆಡೆ, ಮುಖ್ಯಮಂತ್ರಿಯವರ ರಾಜಕೀಯ ಕಾರ್ಯದರ್ಶಿ ಹಾಗೂ ಎಂಎಲ್‌ಸಿ ನಸೀರ್ ಅಹ್ಮದ್ ಅವರಿಗೂ ರಾಜೀನಾಮೆ ನೀಡಲು ಹೈಕಮಾಂಡ್ ಕಟ್ಟುನಿಟ್ಟಿನ ಸೂಚನೆ ನೀಡಿದೆ.

Share.

'ಸಂಭ್ರಮಪ್ರಭ.ಕಾಮ್' (sambramaprabha.com) ಕನ್ನಡಿಗರ ವಿಶ್ವಾಸಾರ್ಹ ಡಿಜಿಟಲ್ ನ್ಯೂಸ್ ಪೋರ್ಟಲ್. ರಾಜ್ಯ, ರಾಷ್ಟ್ರ, ರಾಜಕೀಯ, ಮನರಂಜನೆ, ಕ್ರೀಡೆ ಹಾಗೂ ಸ್ಥಳೀಯ ವಿದ್ಯಮಾನಗಳ ನಿಖರ ಮತ್ತು ನೈಜ ಸುದ್ದಿಗಳನ್ನು ಅತ್ಯಂತ ವೇಗವಾಗಿ ನಿಮ್ಮ ಮುಂದಿಡುವುದೇ ನಮ್ಮ ಪ್ರಮುಖ ಗುರಿ. ಸತ್ಯ, ನಿಷ್ಪಕ್ಷಪಾತ ಹಾಗೂ ಜನಪರ ಪತ್ರಿಕೋದ್ಯಮದ ಆಶಯದೊಂದಿಗೆ ನಾವು ಹೆಜ್ಜೆ ಇಡುತ್ತಿದ್ದೇವೆ. ಸದಾ ಸತ್ಯದ ಪರ, ನಿಮ್ಮ ಧ್ವನಿಯಾಗಿ. ಸಂಪಾದಕರು: ಸುರೇಶ್ ಕೆ.ಟಿ (Suresh K.T)

Leave A Reply

Exit mobile version