ಬೆಳಗಾವಿ: ಸಚಿವ ಸತೀಶ್ ಜಾರಕಿಹೊಳಿ ನಿವಾಸಗಳ ಮೇಲೆ ಇತ್ತೀಚೆಗೆ ನಡೆದ ಜಾರಿ ನಿರ್ದೇಶನಾಲಯ (ED) ದಾಳಿ ರಾಜ್ಯ ರಾಜಕಾರಣದಲ್ಲಿ ತೀವ್ರ ಸಂಚಲನ ಸೃಷ್ಟಿಸಿದೆ. ಈ ದಾಳಿ ಬೆನ್ನಲ್ಲೇ ಸುದ್ದಿಗೋಷ್ಠಿ ನಡೆಸಿರುವ ಸತೀಶ್ ಜಾರಕಿಹೊಳಿ, ತಮ್ಮ ವಿರುದ್ಧ ಇಡಿಗೆ ದೂರು ಕೊಟ್ಟವರು ಯಾರು ಎಂಬುದು ತಮಗೆ ಮೊದಲೇ ಗೊತ್ತಿತ್ತು ಎನ್ನುವ ಮೂಲಕ ಅಚ್ಚರಿ ಮೂಡಿಸಿದ್ದಾರೆ.

ಇಡಿ ಪತ್ರಿಕಾ ಪ್ರಕಟಣೆಯಲ್ಲಿ ಉಲ್ಲೇಖಿಸಿರುವ ಆರೋಪಗಳ ಬಗ್ಗೆ ಪ್ರತಿಕ್ರಿಯಿಸಿದ ಅವರು, ಕಾಂಗೋ ದೇಶದ ಮೆಸ್ಸೆರಿಸ್ ಗಣಿಗಾರಿಕೆ ಸಂಸ್ಥೆಯಲ್ಲಿ ತಮಗೆ 40ರಷ್ಟು ಪಾಲು ಇದೆ ಎಂಬ ಆರೋಪವನ್ನು ತಳ್ಳಿಹಾಕಿದ್ದಾರೆ. “ಇದು ಕೇವಲ ಆರೋಪವಷ್ಟೇ. ಅವರು 40% ಪಾಲು ಇದೆ ಎಂದು ಹೇಳಿದರೆ, ಅದರ ದಾಖಲೆಗಳನ್ನು ತೋರಿಸಲಿ. ನಮ್ಮದಿದ್ದರೆ ನಾವು ಒಪ್ಪಿಕೊಳ್ಳಲೇಬೇಕು. ಸುಮ್ಮನೆ ಆರೋಪ ಮಾಡಿದರೆ ಒಪ್ಪಿಕೊಳ್ಳಲು ಸಾಧ್ಯವಿಲ್ಲ,” ಎಂದು ಸವಾಲು ಹಾಕಿದ್ದಾರೆ.

ದೂರುದಾರರು ಯಾರು? ಸಿಎಂಗೆ ಮಾಹಿತಿ ನೀಡಿದ್ದ ಸತೀಶ್

ದಾಳಿಯ ಬಗ್ಗೆ ಮೊದಲೇ ಸುಳಿವು ಇತ್ತೇ ಎಂಬ ಪ್ರಶ್ನೆಗೆ ನೇರವಾಗಿ ಉತ್ತರಿಸಿದ ಸತೀಶ್ ಜಾರಕಿಹೊಳಿ, “ನನ್ನ ವಿರುದ್ಧ ದೂರು ಕೊಟ್ಟವರು ಯಾರು ಎಂಬುದು ನನಗೆ ಗೊತ್ತಿದೆ. ಆ ಮಾಹಿತಿಯನ್ನು ನಾನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಗಮನಕ್ಕೂ ತಂದಿದ್ದೇನೆ. ದೂರು ಕೊಟ್ಟವರ ಸಂಬಂಧ ಇರೋದು ಕಾಂಗ್ರೆಸ್‌ನಲ್ಲಿ, ಆದರೆ ವೋಟರ್ ಪಕ್ಷ ಮಾತ್ರ ಬಿಜೆಪಿ. ಹೀಗಾಗಿ ಅಲ್ಲೂ 50-50 ಇದೆ,” ಎಂದು ಹೇಳುವ ಮೂಲಕ ಹೊಸ ಟ್ವಿಸ್ಟ್ ಕೊಟ್ಟಿದ್ದಾರೆ.

“ದೂರು ಕೊಡಬಾರದು ಅಂತೇನಿಲ್ಲ. ಎಲ್ಲರಿಗೂ ಆ ಹಕ್ಕಿದೆ. ರಾಜಕೀಯವಾಗಿ ನಮ್ಮನ್ನ ಮುಗಿಸುವ ಲೆಕ್ಕಾಚಾರ ಎಲ್ಲಾ ಪಕ್ಷಗಳಲ್ಲೂ, ಎಲ್ಲಾ ಕಡೆ ಇದ್ದೇ ಇರುತ್ತದೆ. ನಮ್ಮ ಸೇಫ್ಟಿಯಲ್ಲಿ ನಾವು ಇರಬೇಕು, ಅದನ್ನೂ ಮೀರಿ ಬೆಳೆಯಬೇಕು,” ಎಂದು ತಿರುಗೇಟು ನೀಡಿದ್ದಾರೆ.

ಲೋಕಾಯುಕ್ತ ಮೊರೆ ಹೋಗುತ್ತಾ ಇಡಿ?

ಇನ್ನೊಂದೆಡೆ ಇಡಿ ಅಧಿಕಾರಿಗಳಿಗೆ ಸತೀಶ್ ಜಾರಕಿಹೊಳಿ ಮನೆಯಲ್ಲಿ ಪಿಡಬ್ಲ್ಯೂಡಿ (PWD) ಇಲಾಖೆಯಲ್ಲಿನ ಭ್ರಷ್ಟಾಚಾರಕ್ಕೆ ಸಂಬಂಧಿಸಿದ ಕೆಲವು ದಾಖಲೆಗಳು ಹಾಗೂ ಬಿಬಿಇಪಿಎಲ್ (BBEPL) ಕಂಪನಿಯಿಂದ ಕಿಕ್ ಬ್ಯಾಕ್ ಪಡೆದಿರುವ ಆರೋಪದ ಬಗ್ಗೆ ಮಾಹಿತಿ ಲಭ್ಯವಾಗಿದೆ ಎನ್ನಲಾಗಿದೆ. ಭ್ರಷ್ಟಾಚಾರ ನಿಯಂತ್ರಣ ಕಾಯ್ದೆಯಡಿ ತನಿಖೆ ನಡೆಸಲು ಇಡಿಗೆ ನೇರ ಅಧಿಕಾರ ಇಲ್ಲದಿರುವುದರಿಂದ, ಮುಂದಿನ ತನಿಖೆಗಾಗಿ ಲೋಕಾಯುಕ್ತ ಎಡಿಜಿಪಿಗೆ ಪತ್ರ ಬರೆಯುವ ಸಾಧ್ಯತೆ ಇದೆ ಎಂಬ ಮಾಹಿತಿ ಹೊರಬಿದ್ದಿದೆ.

ಬೆಂಗಳೂರಿಗೆ ಇಡಿ ನಿರ್ದೇಶಕರ ಆಗಮನ

ಸತೀಶ್ ಜಾರಕಿಹೊಳಿ ಮನೆ ಮೇಲಿನ ದಾಳಿ, ಕೆಪಿಎಸ್ಸಿ ಹಗರಣ ಹಾಗೂ ವಾಲ್ಮೀಕಿ ನಿಗಮದ ಹಗರಣಗಳ ಪ್ರಗತಿ ಪರಿಶೀಲನೆಗಾಗಿ ಸ್ವತಃ ಇಡಿ ನಿರ್ದೇಶಕ ರಾಹುಲ್ ನವೀನ್ ಇಂದು ಸಂಜೆ ಬೆಂಗಳೂರಿಗೆ ಆಗಮಿಸುತ್ತಿದ್ದಾರೆ. ನಾಳೆಯಿಂದ ಈ ಪ್ರಕರಣಗಳ ಬಗ್ಗೆ ಅವರು ಖುದ್ದು ಪರಿಶೀಲನೆ ನಡೆಸಲಿದ್ದಾರೆ.

ವಿಜಯ್ ಮಲ್ಯ ಟ್ವೀಟ್‌ಗೆ ಸತೀಶ್ ಪ್ರತಿಕ್ರಿಯೆ

ಸತೀಶ್ ಜಾರಕಿಹೊಳಿ ಮೇಲಿನ ಇಡಿ ದಾಳಿ ಹಾಗೂ ಪತ್ರಿಕಾ ಪ್ರಕಟಣೆ ಬಗ್ಗೆ ಉದ್ಯಮಿ ವಿಜಯ್ ಮಲ್ಯ ಎಕ್ಸ್ (ಟ್ವಿಟರ್) ಖಾತೆಯಲ್ಲಿ ಅಸಮಾಧಾನ ವ್ಯಕ್ತಪಡಿಸಿದ್ದರು. “ಯಾವುದೇ ಆರೋಪ ಪಟ್ಟಿ, ವಿಚಾರಣೆ ಇಲ್ಲದೆ ಇಡಿ ಕೇವಲ ಸಾರ್ವಜನಿಕವಾಗಿ ವ್ಯಕ್ತಿತ್ವ ಹತ್ಯೆ (Character Assassination) ಮಾಡುತ್ತಿದೆ,” ಎಂದು ಮಲ್ಯ ಟ್ವೀಟ್ ಮಾಡಿದ್ದರು. ಈ ಬಗ್ಗೆ ಪತ್ರಕರ್ತರು ಕೇಳಿದ ಪ್ರಶ್ನೆಗೆ ನಗುತ್ತಲೇ ಉತ್ತರಿಸಿದ ಸತೀಶ್, “ಅವರಿಗೆ (ಮಲ್ಯ) ಥ್ಯಾಂಕ್ಸ್,” ಎಂದು ಹೇಳಿ ಹೊರಟರು.

ಒಟ್ಟಿನಲ್ಲಿ ಇಡಿ ದಾಳಿಯ ನಂತರ ಸತೀಶ್ ಜಾರಕಿಹೊಳಿ ಅವರ ಈ ದಿಟ್ಟ ಹೇಳಿಕೆಗಳು ರಾಜ್ಯ ರಾಜಕೀಯದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿವೆ. ಮುಂದಿನ ದಿನಗಳಲ್ಲಿ ಈ ಪ್ರಕರಣ ಯಾವ ತಿರುವು ಪಡೆಯಲಿದೆ ಎಂಬುದನ್ನು ಕಾದು ನೋಡಬೇಕಿದೆ.

Share.
Leave A Reply

Exit mobile version