ಧಾರವಾಡ: ಇತ್ತೀಚೆಗೆ ಧಾರವಾಡದಲ್ಲಿ 50 ಲಕ್ಷ ರೂ. ಲಂಚ ಪಡೆಯುವಾಗ ಲೋಕಾಯುಕ್ತ ಬಲೆಗೆ ಬಿದ್ದು ತಹಶೀಲ್ದಾರ್ ಸಚ್ಚಿದಾನಂದ್ ಜೈಲು ಸೇರಿರುವ ಪ್ರಕರಣ ಇದೀಗ ದಿನಕ್ಕೊಂದು ಹೊಸ ತಿರುವು ಪಡೆದುಕೊಳ್ಳುತ್ತಿದೆ. ತಹಶೀಲ್ದಾರ್‌ಗೆ ಲಂಚ ನೀಡುತ್ತಿದ್ದ ಮಂಜುನಾಥ್ ಅರಳಿಕಟ್ಟೆ ಅವರೇ ಬೃಹತ್ ಭೂ ಅಕ್ರಮ ಎಸಗಿದ್ದಾರೆ ಎಂದು ಮೂಲ ಜಮೀನು ಮಾಲೀಕರಾದ ಅಂಗಡಿ ಕುಟುಂಬದವರು ಗಂಭೀರ ಆರೋಪ ಮಾಡಿದ್ದಾರೆ.
ಅಂಗಡಿ ಕುಟುಂಬದ ಆರೋಪವೇನು?
ತಹಶೀಲ್ದಾರ್ ಲಂಚ ಪಡೆದಿದ್ದಷ್ಟೇ ಅಲ್ಲ, ಲಂಚ ನೀಡುತ್ತಿದ್ದ ಮಂಜುನಾಥ್ ಕೂಡ ಭಾರಿ ಅಕ್ರಮಗಳನ್ನು ಮಾಡಿದ್ದಾರೆ ಎಂದು ಶಿವಪುತ್ರಪ್ಪ ಅಂಗಡಿ ಅವರ ಪುತ್ರ ಬಸವರಾಜ್ ಅಂಗಡಿ ಆರೋಪಿಸಿದ್ದಾರೆ. “ನಮ್ಮ ಕುಟುಂಬಕ್ಕೆ ಸೇರಿದ ಒಟ್ಟು 33 ಎಕರೆ ಜಮೀನಿನ ಪೈಕಿ ಕೇವಲ 6 ಎಕರೆಯನ್ನು ನಮ್ಮ ಸಂಬಂಧಿಕರಿಂದ ಮಂಜುನಾಥ್ ಹಾಗೂ ಇತರರು ಖರೀದಿಸಿದ್ದರು. ಆದರೆ ಕಂದಾಯ ಇಲಾಖೆ ಅಧಿಕಾರಿಗಳ ಜೊತೆ ಶಾಮೀಲಾಗಿ, ದಾಖಲೆಗಳನ್ನು ತಿದ್ದಿ ಇಡೀ 33 ಎಕರೆ ಜಮೀನನ್ನೇ ಖರೀದಿಸಿದ್ದಾಗಿ ತೋರಿಸಿಕೊಳ್ಳುತ್ತಿದ್ದಾರೆ” ಎಂದು ಅವರು ದೂರಿದ್ದಾರೆ.
33 ಎಕರೆಯಲ್ಲಿ 20 ಎಕರೆ 15 ಗುಂಟೆ ಸಾಗುವಳಿ ಜಮೀನಾಗಿದ್ದರೆ, ಉಳಿದ 13 ಎಕರೆ ಖರಾಬ್ ಜಮೀನಾಗಿತ್ತು. ಮಾರಾಟ ಮಾಡಲು ಬಾರದ ‘ಬಿ-ಖರಾಬ್’ ಭೂಮಿಯನ್ನು ಅಧಿಕಾರಿಗಳು ಹೇಗೆ ಮಾರಾಟ ಮಾಡಲು ಬಿಟ್ಟರು? ಮತ್ತು ಹೆಸರು ಬದಲಾವಣೆ ಹೇಗೆ ಆಯಿತು? ಎಂಬ ಪ್ರಶ್ನೆಯನ್ನು ಕುಟುಂಬಸ್ಥರು ಎತ್ತಿದ್ದಾರೆ.
ಅಕ್ರಮ ಆರ್.ಎಂ.ಸಿ ಘಟಕ ಸ್ಥಾಪನೆ
ವಿವಾದಿತ ಜಮೀನಿನಲ್ಲಿ ಯಾವುದೇ ನಿಯಮಗಳನ್ನು ಪಾಲಿಸದೆ ಅಕ್ರಮವಾಗಿ ಆರ್.ಎಂ.ಸಿ (RMC) ಮಷೀನ್‌ಗಳನ್ನು ಅಳವಡಿಸಲಾಗಿದೆ. ಇದಕ್ಕೆ ಸಂಬಂಧಪಟ್ಟ ಇಲಾಖೆಗಳು ಹೇಗೆ ಅನುಮತಿ ನೀಡಿದವು? ಇದರ ಹಿಂದೆಯೂ ಎಲ್ಲ ಇಲಾಖೆಗಳ ಅಧಿಕಾರಿಗಳು ಹಣ ತಿಂದಿದ್ದಾರೆ ಎಂದು ಕುಟುಂಬಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
50 ಲಕ್ಷ ನಗದು ಎಲ್ಲಿಂದ ಬಂತು? ಇ.ಡಿ (ED) ತನಿಖೆಗೆ ಜೆಡಿಎಸ್ ಆಗ್ರಹ
ತಹಶೀಲ್ದಾರ್‌ಗೆ ನೀಡಲು ತಂದಿದ್ದ 50 ಲಕ್ಷ ರೂ. ನಗದು ಸಣ್ಣ ಮೊತ್ತವಲ್ಲ. ಇಷ್ಟೊಂದು ಹಣ ಏಕಾಏಕಿ ಎಲ್ಲಿಂದ ಬಂತು? ಮಂಜುನಾಥ್ ಅರಳಿಕಟ್ಟೆ ಅವರ ಹಿಂದೆ ಇನ್ಯಾರಾದರೂ ಪ್ರಭಾವಿಗಳಿದ್ದಾರೆಯೇ ಎಂಬ ಅನುಮಾನಗಳು ಹುಟ್ಟಿಕೊಂಡಿವೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಜೆಡಿಎಸ್ ಮುಖಂಡ ಗುರುರಾಜ್ ಹುಣಸಿ, “ಈ ಪ್ರಕರಣದ ಬಗ್ಗೆ ಕೇವಲ ಲೋಕಾಯುಕ್ತ ತನಿಖೆಯಷ್ಟೇ ಅಲ್ಲದೆ, ವಿಶೇಷ ತನಿಖಾ ತಂಡ (SIT) ಹಾಗೂ ಜಾರಿ ನಿರ್ದೇಶನಾಲಯ (ED) ಕೂಡ ಎಂಟ್ರಿ ಕೊಡಬೇಕು. ಆಗ ಮಾತ್ರ ಈ ಹಣದ ಮೂಲ ಬಹಿರಂಗವಾಗಲಿದೆ” ಎಂದು ಆಗ್ರಹಿಸಿದ್ದಾರೆ.
ಎಸ್.ಐ.ಟಿ (SIT) ರಚನೆಗೆ ಒತ್ತಾಯ
ತಮ್ಮ ಭೂ ಅಕ್ರಮವನ್ನು ಮುಚ್ಚಿಹಾಕಲೆಂದೇ ಮಂಜುನಾಥ್ ಈ ರೀತಿ ತಹಶೀಲ್ದಾರ್ ಅವರನ್ನು ಟ್ರ್ಯಾಪ್ ಮಾಡಿಸಿದ್ದಾರೆ ಎನ್ನುವುದು ಅಂಗಡಿ ಕುಟುಂಬದವರ ನೇರ ಆರೋಪ. ಈ ಪ್ರಕರಣದ ಹಿಂದೆ ಕಂದಾಯ ಇಲಾಖೆಯ ದೊಡ್ಡ ಜಾಲವೇ ಶಾಮೀಲಾಗಿರುವ ಶಂಕೆ ಇದ್ದು, ಸಂಪೂರ್ಣ ಸತ್ಯ ಹೊರಬರಲು ಸರ್ಕಾರ ತಕ್ಷಣವೇ ಎಸ್.ಐ.ಟಿ (SIT) ರಚಿಸಿ ಸಮಗ್ರ ತನಿಖೆ ನಡೆಸಬೇಕು ಎಂಬ ಆಗ್ರಹ ಕೇಳಿಬಂದಿದೆ.
– ವರದಿ: ಸಂಭ್ರಮಪ್ರಭ ನ್ಯೂಸ್ ಡೆಸ್ಕ್ (Sambramaprabha.com)
